ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ: ನಾಯಿಗಳಿಗೆ ಆಹಾರ ಹಾಕಿದ್ದಕ್ಕೆ ವೃದ್ಧೆಗೆ ಹಲ್ಲೆ

ಆರೋಪಿ ಚಂದ್ರಕಾಂತ್‌ ಬಂಧನ
Published 22 ಮಾರ್ಚ್ 2024, 0:26 IST
Last Updated 22 ಮಾರ್ಚ್ 2024, 0:26 IST
ಅಕ್ಷರ ಗಾತ್ರ

ಉಡುಪಿ: ಇಂದ್ರಾಳಿ ರೈಲು ನಿಲ್ದಾಣದ ಸಮೀಪ ನಾಯಿಗಳಿಗೆ ಅನ್ನ ಹಾಕಿದ ಕಾರಣಕ್ಕೆ ಚಂದ್ರಕಾಂತ್ ಎಂಬಾತ ಮಹಿಳೆ ಮೇಲೆ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ನಡೆದಿದೆ.

ಹಲ್ಲೆಗೊಳಗಾದ ಮಹಿಳೆ ಬೇಬಿಗೆ (50) ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ತಲೆಗೆ ಹೊಲಿಗೆ ಹಾಕಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಣಿಪಾಲ ಠಾಣೆ ಪೊಲೀಸರು ಆರೋಪಿ ಚಂದ್ರಕಾಂತನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ.

ಪ್ರಕರಣ ವಿವರ: ಹಲ್ಲೆಗೊಳಗಾದ ಬೇಬಿ ಪ್ರಾಣಿ ದಯಾ ಸಂಘಗಳು ನೀಡುವ ಆಹಾರವನ್ನು ನಗರದ ಹಲವು ಕಡೆಗಳಲ್ಲಿ ಬೀದಿ ನಾಯಿಗಳಿಗೆ ಹಾಕುವ ಕೆಲಸ ಮಾಡುತ್ತಿದ್ದು, ಇಂದ್ರಾಳಿಯಲ್ಲಿರುವ ಚಂದ್ರಕಾಂತ್ ಎಂಬಾತನ ಮನೆಯ ಇರುವ ರಸ್ತೆಯಲ್ಲೂ ನಾಯಿಗಳಿಗೆ ಆಹಾರ ಹಾಕಿದ್ದಾರೆ. ಇದನ್ನು ಸಹಿಸದ ಚಂದ್ರಕಾಂತ್‌ ಮಹಿಳೆ ಜತೆ ಜಗಳಕ್ಕಿಳಿದು ಆಕೆಯ ತಲೆಗೆ ಮರದ ರೀಪರ್‌ನಿಂದ ಬಲವಾಗಿ ಹೊಡೆದಿದ್ದಾನೆ. ಮಹಿಳೆಯ ತಲೆಗೆ ಬಲವಾದ ಪೆಟ್ಟುಬಿದ್ದಿದ್ದು ಹೊಲಿಗೆಗಳನ್ನು ಹಾಕಲಾಗಿದೆ.

ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದಲಿತ ಸಂಘರ್ಷ ಸಮಿತಿ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದೆ. ಬುದ್ಧಿವಂತರ ಜಿಲ್ಲೆ ಉಡುಪಿಯಲ್ಲಿ ಮೇಲ್ವರ್ಗದವರ ದಬ್ಬಾಳಿಕೆ ಕೊನೆಯಾಗಿಲ್ಲ. ಬೀದಿ ನಾಯಿಗಳಿಗೆ ಆಹಾರ ಹಾಕುವ ಮೂಲಕ ಪ್ರಾಣಿ ಪ್ರೀತಿ ತೋರುವ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಅಕ್ಷಮ್ಯ. ಕೊಲೆ ಯತ್ನ ಮಾಡಿರುವ ‌ಆರೋಪಿಗೆ ಜಾಮೀನು ನೀಡಬಾರದು ಎಂದು ದಸಂಸ‌ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್‌ ಮಾಸ್ತರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಆಸ್ಪತ್ರೆಗೆ ದಲಿತ ಮುಖಂಡರಾದ ಮಂಜುನಾಥ ಗಿಳಿಯಾರು, ಶ್ಯಾಮರಾಜ್ ಬಿರ್ತಿ, ವಾಸುದೇವ ಮುದೂರು, ಭಾಸ್ಕರ್ ಮಾಸ್ತರ್, ಪರಮೇಶ್ವರ ಉಪ್ಪೂರು, ಶ್ಯಾಮಸುಂದರ್ ತೆಕ್ಕಟ್ಟೆ, ಶ್ರೀಪತಿ ಕುಂಜಿಬೆಟ್ಟು, ಶ್ರೀಧರ್, ರಾಜು ಬೆಟ್ಟಿನಮನೆ, ಮಂಜುನಾಥ್ ಬಾಳ್ಕದ್ರು, ನಗರಸಬಾ ಸದಸ್ಯ ರಾಜು ಭೇಟಿನೀಡಿ ಮಹಿಳೆಯ ಆರೋಗ್ಯ ಸ್ಥಿತಿ ವಿಚಾರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT