ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಗ್ರಾಹಕರು ಬರುತ್ತಿಲ್ಲ: ಕಾರ್ಮಿಕರು ಸಿಗುತ್ತಿಲ್ಲ

ಹೋಟೆಲ್‌ ಮಾಲೀಕರ ಅಳಲು: ಸಂಕಷ್ಟದಲ್ಲಿ ಉದ್ಯಮ
Last Updated 10 ಜೂನ್ 2020, 14:40 IST
ಅಕ್ಷರ ಗಾತ್ರ

ಉಡುಪಿ: ಒಂದೆಡೆ, ಕೊರೊನಾ ಸೋಂಕಿನ ಭೀತಿಯಿಂದ ಗ್ರಾಹಕರು ಹೋಟೆಲ್‌ಗಳತ್ತ ಮುಖ ಮಾಡುತ್ತಿಲ್ಲ. ಮತ್ತೊಂದೆಡೆ, ಹೋಟೆಲ್‌ಗಳಲ್ಲಿ ಕೆಲಸ ಮಾಡಲು ಕಾರ್ಮಿಕರು ಸಿಗುತ್ತಿಲ್ಲ. ಮೂರು ತಿಂಗಳು ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿ ನಲುಗಿದ್ದ ಹೋಟೆಲ್ ಉದ್ಯಮ ಈಗ ಮತ್ತೆ ಅಡಕತ್ತರಿಯಲ್ಲಿ ಸಿಲುಕಿದೆ.

ಸರ್ಕಾರ ಜೂನ್‌ 8ರಿಂದ ಹೋಟೆಲ್‌ಗಳ ಆರಂಭಕ್ಕೆ ಹಸಿರು ನಿಶಾನೆ ತೋರಿದರೂ ಗ್ರಾಹಕರು ಮಾತ್ರ ಮೊದಲಿನಂತೆ ದಾಗುಂಡಿ ಇಡುತ್ತಿಲ್ಲ. ಹಿಂದೆ, ಗಿಜಿಗುಡುತ್ತಿದ್ದ ಹೋಟೆಲ್‌ಗಳು ಈಗ ಗ್ರಾಹಕರ ಬರ ಎದುರಿಸುತ್ತಿವೆ. ಸುರಕ್ಷತೆಗೆ ಒತ್ತುಕೊಟ್ಟರೂ ಗ್ರಾಹಕರನ್ನು ಸೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಹೋಟೆಲ್‌ ಮಾಲೀಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಗಾಯದ ಮೇಲೆ ಬರೆ:

ಜಿಲ್ಲೆಯ ಹೋಟೆಲ್‌ ಉದ್ಯಮ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಕಾರ್ಮಿಕರ ಮೇಲೆ ಅವಲಂಬಿತವಾಗಿದೆ. ಹೋಟೆಲ್‌ಗಳಲ್ಲಿ ಸ್ವಚ್ಛತಾ ಕೆಲಸ, ಅಡುಗೆ, ಸಪ್ಲೆಯರ್ಸ್‌ ಸೇರಿದಂತೆ ಬಹುತೇಕ ವಿಭಾಗಗಳಲ್ಲಿ ದುಡಿಯುತ್ತಿದ್ದ ಹೊರ ಜಿಲ್ಲೆಗಳ ಹಾಗೂ ಹೊರ ರಾಜ್ಯದ ಕಾರ್ಮಿಕರು ಲಾಕ್‌ಡೌನ್ ಅವಧಿಯಲ್ಲಿ ಊರಿಗೆ ತೆರಳಿರುವುದರಿಂದ ಕಾರ್ಮಿಕರ ಅಲಭ್ಯತೆ ಎದುರಾಗಿದೆ.‌

ಹೆಚ್ಚು ವೇತನ, ವಸತಿ ವ್ಯವಸ್ಥೆ ಕೊಟ್ಟರೂ ಸ್ಥಳೀಯವಾಗಿ ಕಾರ್ಮಿಕರು ಸಿಗುತ್ತಿಲ್ಲ. ಕಾರ್ಮಿಕರ ಸಮಸ್ಯೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಮಾಲೀಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಚೈನೀಸ್‌ ಫುಡ್‌ ರೆಸ್ಟೋರೆಂಟ್‌ ಹಾಗೂ ನಾರ್ಥ್ ಇಂಡಿಯನ್ ಹೋಟೆಲ್‌ಗಳಲ್ಲಿ ಹೊರ ರಾಜ್ಯದ ಕಾರ್ಮಿಕರು ಮುಖ್ಯ ಬಾಣಸಿಗರಾಗಿ ದುಡಿಯುತ್ತಿದ್ದರು.ಅವರೆಲ್ಲರೂ ಸ್ವಂತ ರಾಜ್ಯಗಳಿಗೆ ಹೋಗಿರುವ ಕಾರಣ ಮಣಿಪಾಲ ಹಾಗೂ ಉಡುಪಿ ವ್ಯಾಪ್ತಿಯ ನೂರಾರು ರೆಸ್ಟೊರೆಂಟ್‌ಗಳು ಬಾಗಿಲು ಮುಚ್ಚಿವೆ.

ಸೋಂಕು ಹೆಚ್ಚಳ ಭೀತಿ:

ಉಡುಪಿಯಲ್ಲಿ ಕಳೆದ 15 ದಿನಗಳಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಕೋವಿಡ್–19 ಪ್ರಕರಣಗಳು ಪತ್ತೆಯಾಗಿರುವುದು ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಸಾರ್ವಜನಿಕರಲ್ಲಿ ಭೀತಿ ಇರುವುದರಿಂದ ಹೋಟೆಲ್‌ಗಳಿಗೆ ಬರುತ್ತಿಲ್ಲ. ಜತೆಗೆ, ಕೆಲಸ ಬಿಟ್ಟು ತವರಿಗೆ ಹೋಗಿರುವ ಕಾರ್ಮಿಕರು ಕೂಡ ಸದ್ಯದ ಸ್ಥಿತಿಯಲ್ಲಿ ಉಡುಪಿಗೆ ಬರಲು ಹಿಂಜರಿಯುತ್ತಿದ್ದಾರೆ ಎನ್ನುತ್ತಾರೆ ಹೋಟೆಲ್ ಉದ್ಯಮಿ ರಾಘವೇಂದ್ರ ರಾವ್.

ಪ್ರವಾಸಿಗರು ಮುಖಮಾಡುತ್ತಿಲ್ಲ:

ಹೋಟೆಲ್ ಉದ್ಯಮ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ. ಪ್ರಸಿದ್ಧ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳು ಸಂಪೂರ್ಣವಾಗಿ ತೆರೆಯದ ಹಿನ್ನೆಲೆಯಲ್ಲಿ ಪ್ರವಾಸಿಗರು ಜಿಲ್ಲೆಯತ್ತ ಮುಖ ಮಾಡುತ್ತಿಲ್ಲ. ಹಾಗಾಗಿ, ಹೋಟೆಲ್‌ಗಳ ಪ್ರಮುಖ ಆದಾಯದ ಮೂಲಕ್ಕೆ ಹೊಡೆತ ಬಿದ್ದಿದೆ ಎನ್ನುತ್ತಾರೆ ತಿಮ್ಮಪ್ಪ ಹೋಟೆಲ್‌ನ ಮಾಲೀಕರು.

‘ಕನಿಷ್ಠ 6 ತಿಂಗಳು ಬೇಕು’

ಮುಖ್ಯವಾಗಿ ಪ್ರವಾಸೋದ್ಯಮ ಚೇತರಿಸಿಕೊಳ್ಳಬೇಕು ಹಾಗೂ ಗ್ರಾಹಕರು ಮೊದಲಿನಂತೆ ಕುಟುಂಬ ಸಮೇತ ಹೋಟೆಲ್‌ಗಳಿಗೆ ಬರಬೇಕು. ಆಗ ಉದ್ಯಮ ಚೇತರಿಕೆ ಕಾಣಲು ಸಾಧ್ಯ. ಸಧ್ಯದಮಟ್ಟಿಗೆ ಅದು ಸಾಧ್ಯವಿಲ್ಲ. ಉದ್ಯಮ ಚೇತರಿಸಿಕೊಳ್ಳಲು ಕನಿಷ್ಠ 6 ತಿಂಗಳಾದರೂ ಬೇಕಾಗಬಹುದು ಎನ್ನುತ್ತಾರೆ ಮಾಲೀಕರು.

‘ಅಲ್ಪ ದರ ಹೆಚ್ಚಳ’

ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಹೋಟೆಲ್‌ಗಳಿವೆ. ಸಾವಿರಾರು ಮಂದಿ ಉದ್ಯಮವನ್ನು ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಸರ್ಕಾರ ಹೋಟೆಲ್‌ಗಳನ್ನು ತೆರೆಯಲು ಅನುಮತಿ ಕೊಟ್ಟರೂ ಸೋಂಕು ಹರಡುವ ಭೀತಿಯಿಂದ ಬೆರಳೆಣಿಕೆ ಹೋಟೆಲ್‌ಗಳು ಮಾತ್ರ ತೆರೆದಿವೆ. ಮೀನು, ಮಾಂಸ ಹಾಗೂ ಕೋಳಿಯ ದರ ಗಗನಕ್ಕೇರಿದ್ದು, ನಷ್ಟ ಸರಿದೂಗಿಸಲು ಕೆಲವು ಹೋಟೆಲ್‌ಗಳು ಅಲ್ಪ ದರ ಹೆಚ್ಚಳ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT