ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ದಡಾರ ರೂಬೆಲ್ಲಾ ಮುಕ್ತವಾಗಲಿ

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಸೂಚನೆ
Published 2 ಜೂನ್ 2023, 14:23 IST
Last Updated 2 ಜೂನ್ 2023, 14:23 IST
ಅಕ್ಷರ ಗಾತ್ರ

ಉಡುಪಿ: ಮಕ್ಕಳಲ್ಲಿ ಕಂಡುಬರುವ ದಡಾರ ರೂಬೆಲ್ಲಾ ರೋಗವನ್ನು ಜಿಲ್ಲೆಯಿಂದ ಸಂಪೂರ್ಣ ನಿರ್ಮೂಲನೆ ಮಾಡುವ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಸೂಚನೆ ನೀಡಿದರು.

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಎಂ.ಆರ್ ಎಲಿಮಿನೇಷನ್ ಲಸಿಕಾ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದಡಾರ ರುಬೆಲ್ಲಾ ಕಾಯಿಲೆಯು 5 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ಅಪಾಯಕಾರಿಯಾಗಿದ್ದು, ದಡಾರ ತೀವ್ರ ಸಾಂಕ್ರಾಮಿಕ ರೋಗವಾಗಿದೆ.

ಪರಿಣಾಮ ಮಕ್ಕಳಲ್ಲಿ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳಲಿವೆ. ಚರ್ಮದ ಮೇಲೆ ಕೆಂಪು ದದ್ದುಗಳು ಉಂಟಾಗಲಿದೆ. ಈ ರೋಗವು ಲಸಿಕೆ ಪಡೆಯದ ಮಕ್ಕಳಲ್ಲಿ ಹೆಚ್ಚು ಅಪಾಯಕಾರಿಯಾಗುವ ಸಾಧ್ಯತೆಗಳು ಇರುತ್ತವೆ. ರೋಗ ಉಲ್ಭಣವಾದರೆ ಮಕ್ಕಳ ಮರಣಕ್ಕೂ ಕಾರಣವಾಗಬಹುದು. ಜಿಲ್ಲೆಯ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಿಶ್ವದಲ್ಲೇ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಡಾರ ರೂಬೆಲ್ಲಾ ಪ್ರಕರಣಗಳು ವರದಿಯಾಗುತ್ತಿದ್ದು, ಜಿಲ್ಲೆಯಲ್ಲಿ ಈ ವರ್ಷದ ಮೇ ಅಂತ್ಯಕ್ಕೆ 59 ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಕಾಯಿಲೆ ತಡೆಯಬೇಕಾದರೆ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಲಸಿಕೆ ನೀಡಲು ಕ್ರಿಯಾ ಯೋಜನೆ ರೂಪಿಸಿ, ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ರೋಗದ ಲಕ್ಷಣ ಮತ್ತು ನಿರ್ಮೂಲನೆ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಬೇಕು. ಪೋಷಕರಿಗೆ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಬೇಕು. ದಡಾರ ರುಬೆಲ್ಲಾ ರೋಗದ ಲಕ್ಷಣಗಳು ಇರುವ ಮಕ್ಕಳು ಕಂಡುಬಂದಲ್ಲಿ ಕೂಡಲೇ ಚಿಕಿತ್ಸೆಗೆ ಕೊಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಕಾರ್ಮಿಕ ಇಲಾಖೆಯ ಮೂಲಕ ವಲಸೆ ಕಾರ್ಮಿಕರ ಮಕ್ಕಳು ದಡಾರ ರೂಬೆಲ್ಲಾ ಲಸಿಕೆ ಹಾಕಬೇಕು. ವಲಸೆ ಕಾರ್ಮಿಕರು ಕೆಲಸ ಮಾಡುವ ಪ್ರದೇಶಗಳಿಗೆ ತೆರಳಿ ಅರಿವು ಮೂಡಿಸಬೇಕು. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಎಲ್ಲ ಮಕ್ಕಳಿಗೆ ಲಸಿಕೆ ಸಿಗಬೇಕು ಎಂದರು.

ಚಿಕಿತ್ಸೆಗೆ ಬರುವ ಮಕ್ಕಳಲ್ಲಿ ದಡಾರ ರೂಬೆಲ್ಲಾ ಲಕ್ಷಣಗಳು ಕಂಡುಬಂದಲ್ಲಿ ಜಿಲ್ಲೆಯ ಎಲ್ಲ ಖಾಸಗಿ ನರ್ಸಿಂಗ್ ಹೋಂಗಳು ಹಾಗೂ ಕ್ಲಿನಿಕ್‌ಗಳು ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ದಡಾರ ರೂಬೆಲ್ಲಾ ರೋಗದ ವಿರುದ್ಧ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಆಯೋಜಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಯಾವುದೇ ಮಗು ರೋಗಕ್ಕೆ ತುತ್ತಾಗದಂತೆ ಹಾಗು ಜಿಲ್ಲೆಯನ್ನು ದಡಾರ ರೂಬೆಲ್ಲಾ ರೋಗ ಮುಕ್ತವಾಗಿಸಲು ವಿವಿಧ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಪ್ರಸನ್ನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಎಂಜಿ.ರಾಮ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿ ಡಾ.ಅನಂತೇಶ್, ಆರೋಗ್ಯ ಇಲಾಖೆ ಮತ್ತು ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT