ಭಾನುವಾರ, ಫೆಬ್ರವರಿ 23, 2020
19 °C
ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ

ಉಡುಪಿ: ಭಗವಂತ ಭಕ್ತರಿಂದ ಸಂಕಲ್ಪಗಳ ಈಡೇರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಪರ್ಯಾಯ ಸಂಕಲ್ಪಗಳು ಈಡೇರಬೇಕಾದರೆ ಭಗವಂತನ ಶ್ರೀರಕ್ಷೆ, ಭಕ್ತರ ಸಹಕಾರ ಅಗತ್ಯ ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶನಿವಾರ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಕೃಷ್ಣ ಯಾದವರನ್ನು ಒಗ್ಗೂಡಿಸಿ ದುಷ್ಟರನ್ನು ಸಂಹಾರ ಮಾಡಿದ. ಕೃಷ್ಣನ ಚಿಂತನೆಗಳನ್ನು ಮೈಗೂಡಿಸಿಕೊಂಡರೆ ಜೀವನ ಆನಂದಮಯವಾಗುತ್ತದೆ ಎಂದರು.

ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿದ ಮಹನೀಯರನ್ನು ಗುರುತಿಸುವ ಕೆಲಸ ಅದಮಾರು ಮಠದಿಂದ ನಡೆದಿದೆ. ಪರ್ಯಾಯ ಪೂರ್ವಭಾವಿಯ ಎಲ್ಲ ಕಾರ್ಯಗಳು ಯಶಸ್ವಿಯಾಗಬೇಕಾದರೆ ಶ್ರೀಕೃಷ್ಣ ಸೇವಾ ಬಳಗ ಹಾಗೂ ಮಠದ ಎಲ್ಲ ಸಿಬ್ಬಂದಿಯ ಶ್ರಮ ದೊಡ್ಡದಿದೆ ಎಂದು ಶ್ಲಾಘಿಸಿದರು.

ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ಅದಮಾರು ಮಠದ ಹಿರಿಯ ಗುರುಗಳ ಮನಸ್ಸನ್ನು ಗೆದ್ದು ಸರ್ವಜ್ಞ ಪೀಠವೇರುವ ಅವಕಾಶ ಪಡೆದ ಈಶಪ್ರಿಯರ ಭಾಗ್ಯ ದೊಡ್ಡದು ಎಂದು ಅಭಿಪ್ರಾಯಪಟ್ಟರು.

ಕೃಷ್ಣನ ಪೂಜೆ, ಮಧ್ವಾಚಾರ್ಯರ ಹಾಗೂ ವಾದಿರಾಜರ ಸೇವೆ ಮಾಡುವ ಅವಕಾಶ ಸಿಗುವುದು ಜೀವನದ ದೊಡ್ಡ ಯೋಗ. ವಿಭುದೇಶ ತೀರ್ಥರ, ವಿಶ್ವೇಶ ತೀರ್ಥರ, ವಿಶ್ವಪ್ರಿಯ ತೀರ್ಥರ ಪ್ರಿಯತ್ವ ಹಾಗೂ ಈಶತ್ವಗಳು ಈಶಪ್ರಿಯ ತೀರ್ಥರಲ್ಲಿ ತುಂಬಿಕೊಂಡಿದೆ. ಪರ್ಯಾಯ ಅವಧಿಯ ಎಲ್ಲ ಕಾರ್ಯಗಳು ವಿಘ್ನಗಳಿಲ್ಲದೆ ನೆರವೇರಲಿ ಎಂದು ಹಾರೈಸಿದರು.

ಸಾಮಾನ್ಯವಾಗಿ ಪರ್ಯಾಯ ದರ್ಬಾರ್‌ ಬೆಳಗ್ಗಿನ ಹೊತ್ತು ನಡೆಯುತ್ತಿತ್ತು. ರಾತ್ರಿ ನಿದ್ದೆಗೆಡುತ್ತಿದ್ದ ಸ್ವಾಮೀಜಿಗಳು ಬೆಳಿಗ್ಗೆ ದರ್ಬಾರ್‌ನಲ್ಲಿ ತೂಕಡಿಸುವುದೇ ಹೆಚ್ಚಾಗುತ್ತಿತ್ತು. ಇಂತಹ ಸಂಪ್ರದಾಯವನ್ನು ಬದಲಿಸಿ ಹೊಸತನಕ್ಕೆ ನಾಂದಿ ಹಾಡಿದ್ದಾರೆ ಈಶಪ್ರಿಯ ತೀರ್ಥರು.

ದರ್ಬಾರ್ ಸಮಯ ಬದಲಿಸಿದ್ದು ಸ್ವಾಮೀಜಿಗಳ ನಿದ್ರೆಭಂಗವಾಗುತ್ತದೆ ಎಂದಲ್ಲ; ಕೃಷ್ಣನಿಗೆ ಬೆಳಗಿನ ಮಹಾಪೂಜೆ ತಡವಾಗದಿರಲಿ ಎಂಬ ಕಾರಣಕ್ಕೆ. ಬೆಳಗಿನ ದರ್ಬಾರ್‌ಗೆ ಬರುವಷ್ಟು ಜನ ಸಂಜೆಯ ದರ್ಬಾರ್‌ಗೆ ಬರುವುದಿಲ್ಲ ಎಂಬ ಆತಂಕವಿತ್ತು. ಭಕ್ತರು ನಿರೀಕ್ಷೆಗೂ ಮೀರಿ ದರ್ಬಾರ್‌ ನೋಡಲು ಬಂದಿದ್ದಾರೆ ಎಂದು ಅದಮಾರು ಶ್ರೀಗಳ ನಿಲುವನ್ನು ಸಮರ್ಥಿಸಿಕೊಂಡರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಅಷ್ಠಮಠಗಳ ಎದುರಲ್ಲಿ ಮಾತನಾಡುವ ಅವಕಾಶ ಸಿಕ್ಕಿದ್ದು ಹಾಗೂ ಮಠದ ಐತಿಹಾಸಿಕ ಕಾರ್ಯಕ್ರಮದ ಭಾಗವಾಗಿರುವುದು ಸಂತಸ ತಂದಿದೆ. 

ಅದಮಾರು ಶ್ರೀಗಳು ಪ್ಲಾಸ್ಟಿಕ್‌ ಬಳಕೆ ಮಾಡದೆ ಸಮಾಜಕ್ಕೆ ಮಾದರಿಯಾಗಿ ನಡೆಯುತ್ತಿದ್ದಾರೆ. ಅಷ್ಟಮಠಗಳ ಸಮಾಜಮುಖಿ ಕಾರ್ಯ ಮುಂದುವರಿಯಲಿದೆ ಎಂದರು.

ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಾತನಾಡಿ, ಅದಮಾರು ಮಠಕ್ಕೂ ಮೈಸೂರು ಅರಮನೆಗೂ ಹಳೆಯ ನಂಟಿದೆ. ತಾತ ಜಯಚಾಮರಾಜೇಂದ್ರ ಒಡೆಯರ್ ಪೇಜಾವರ ಮಠದ ಮೊದಲ ಪರ್ಯಾಯದಲ್ಲಿ ಅತಿಥಿ ಭವನದ ಉದ್ಘಾಟನೆಗೆ ಆಗಮಿಸಿದ್ದರು. ಪೇಜಾವರ ಶ್ರೀಗಳ 5ನೇ ಪರ್ಯಾಯಕ್ಕೆ ನವೀಕೃತ ಅತಿಥಿ ಭವನದ ಉದ್ಘಾಟನೆ ಮಾಡುವ ಸೌಭಾಗ್ಯ ನನಗೆ ದೊರೆಯಿತು ಎಂದು ಸ್ಮರಿಸಿದರು.

ಜಯಚಾಮರಾಜೇಂದ್ರ ಒಡೆಯರ್ ಅವರು ಅದಮಾರು ಮಠಕ್ಕೆ ಭೇಟಿನೀಡುವಾಗ ರಾಜರಿಗೆ ಕಷ್ಟವಾಗದಿರಲಿ ಎಂದು ಮಠದ ಪ್ರವೇಶದ್ವಾರದಲ್ಲಿದ್ದ 2 ಕಲ್ಲುಗಳನ್ನು ಅಂದಿನ ಶ್ರೀಗಳು ತೆರೆವುಗೊಳಿಸಿದ್ದರು ಎಂದು ಯದುವೀರ ನೆನಪಿಸಿಕೊಂಡರು.

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಮಾತನಾಡಿ, 2 ವರ್ಷಗಳ ಪರ್ಯಾಯ ಪೂಜೆ ವಿಘ್ನಗಳು ಬಾರದಂತೆ ನೆರವೇರಲಿ ಎಂದು ಆಶಿಸಿದರು.

ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರು ಮಾತನಾಡಿ, ಈಶಪ್ರಿಯ ತೀರ್ಥರು ಪ್ರಾಚೀನತೆ ಹಾಗೂ ಆಧುನಿಕತೆಯ ಸಮ್ಮಿಳಿತದ ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದು, ಈ ಬಾರಿ ಪ್ಲಾಸ್ಟಿಕ್‌ ಫ್ಲೆಕ್ಸ್‌ಗಳಿಗೆ ಕಡಿವಾಣ ಹಾಕಿ ಪರಿಸರ ಸ್ನೇಹಿ ವಸ್ತುಗಳಿಗೆ ಒತ್ತು ನೀಡಿದ್ದಾರೆ. ಅವರ ಪರ್ಯಾಯ ವಿಶಿಷ್ಟವಾಗಿ ನಡೆಯಲಿದೆ ಎಂದರು.

ಸೋದೆ ಮಠದ ವಿಶ್ವವಲ್ಲಭ ತೀರ್ಥರು ಮಾತನಾಡಿ, ಸ್ವಚ್ಛ ಪರಿಸರ ಆಂದೋಲನ ಸಂಕಲ್ಪ ಮಾಡಿರುವ ಪರ್ಯಾಯ ಶ್ರೀಗಳು ಉಡುಪಿಯನ್ನು ಸ್ವಚ್ಛ ನಗರವನ್ನಾಗಿಸಲಿ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 22 ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್‌, ಕಾಂಗ್ರೆಸ್‌ ಹಿರಿಯ ನಾಯಕ ವೀರಪ್ಪ ಮೊಯ್ಲಿ, ಪ್ರಮೋದ್‌ ಮಧ್ವರಾಜ್‌ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)