ಬುಧವಾರ, ಸೆಪ್ಟೆಂಬರ್ 22, 2021
23 °C
ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಪ್ರಾಧಿಕಾರದ ಸಭೆಯಲ್ಲಿ ಡಿಸಿ ಜಗದೀಶ್ ಸೂಚನೆ

ಆಸ್ಪತ್ರೆಗಳಲ್ಲಿ ದರಪಟ್ಟಿ ಪ್ರದರ್ಶನ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೆಪಿಎಂಇ ಕಾಯ್ದೆಯಡಿ ನೋಂದಾಯಿತವಾಗಿರುವ ಎಲ್ಲ ಆಸ್ಪತ್ರೆಗಳು, ಕ್ಲಿನಿಕ್‌ಗಳು ಕಡ್ಡಾಯವಾಗಿ ಚಿಕಿತ್ಸಾ ವಿಧಾನ (ಅಲೊಪತಿ ಅಥವಾ ಆಯುರ್ವೇದ), ಚಿಕಿತ್ಸಾ ದರಪಟ್ಟಿ ಹಾಗೂ ವೈದ್ಯರ ವಿವರಗಳನ್ನು ರೋಗಿಗಳಿಗೆ ಕಾಣುವಂತೆ ಫಲಕದಲ್ಲಿ ಹಾಕಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿ, ಖಾಸಗಿ ಆಸ್ಪತ್ರೆಗಳು ದರಪಟ್ಟಿ, ಚಿಕಿತ್ಸಾ ವಿಧಾನ ವಿವರಗಳನ್ನು ಹಾಕಿದ್ದಾರೆಯೇ ಇಲ್ಲವೇ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಕೆಪಿಎಂಇ ಅಡಿ ನೋಂದಾಯಿತಿ ಆಸ್ಪತ್ರೆಗಳು ಅನುಮತಿಯ ನವೀಕರಣಕ್ಕೆ ಬಂದ ಸಂದರ್ಭ ಕಾಯ್ದೆಯಡಿಯಲ್ಲಿ ಬರುವ ಷರತ್ತುಗಳನ್ನು ಪೂರೈಸಿರುವ ಬಗ್ಗೆ ಪರಿಶೀಲನೆ ನಡೆಸಿ, ಸರಿಯಾಗಿದ್ದರೆ ನವೀಕರಿಸಬೇಕು. ನಕಲಿ ವೈದ್ಯರನ್ನು ಪತ್ತೆಹಚ್ಚಿ ಕ್ರಮ ಜರುಗಿಸಬೇಕು. ನವೀಕರಣ ಮಾಡಿಸದ ಆಸ್ಪತ್ರೆಗಳ ಪರವಾನಗಿಯನ್ನು ರದ್ದು ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಅನುಪಾತ ಏರುಪೇರಾಗದಂತೆ ಎಚ್ಚರವಹಿಸಬೇಕು. 1000 ಗಂಡಸರಿಗೆ 750ಕ್ಕೂ ಕಡಿಮೆ ಹೆಣ್ಣಿನ ಅನುಪಾತ ಇರುವ ಗ್ರಾಮ ಪಂಚಾಯಿತಿಗಳನ್ನು ಪಟ್ಟಿ ಮಾಡಬೇಕು. ಈ ಗ್ರಾಮಗಳಲ್ಲಿ ಅನುಪಾತ ವ್ಯತ್ಯಾಸಕ್ಕೆ ಸೂಕ್ತ ಕಾರಣಗಳನ್ನು ಪರಿಶೀಲಿಸಬೇಕು. ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ಭ್ರೂಣ ಲಿಂಗ ಪತ್ತೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದರು.

ಸಭೆಯಲ್ಲಿ ಹೆಚ್ವುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಎಚ್ಒ ಡಾ. ನಾಗಭೂಷಣ ಉಡುಪ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮರಾವ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.