ಗುರುವಾರ , ಅಕ್ಟೋಬರ್ 6, 2022
22 °C
ಫುಟ್‌ಪಾತ್‌ ಅವ್ಯವಸ್ಥೆ; ಸಾರ್ವಜನಿಕರ ಅವಸ್ಥೆ

ಉಡುಪಿಯ ಪಾದಚಾರಿ ಮಾರ್ಗದಲ್ಲಿ ‘ಮರಣ’ ಗುಂಡಿಗಳು!

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಸಾಕ್ಷರತೆ, ಆರ್ಥಿಕತೆ, ತಲಾ ಆದಾಯ ಹಾಗೂ ಅಭಿವೃದ್ಧಿ ವಿಚಾರದಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ ನಾಗರಿಕರಿಗೆ ನಡೆದಾಡಲು ಸಮರ್ಪಕ ಪಾದಚಾರಿ ಮಾರ್ಗಗಳು ಇಲ್ಲ. ಸ್ಮಾರ್ಟ್‌ಸಿಟಿಯಾಗುವತ್ತ ದಾಪುಗಾಲಿಟ್ಟಿರುವ ಉಡುಪಿಯಲ್ಲಿ ಸಾರ್ವಜನಿಕರು ಒಂದಡಿ ಮುಂದಡಿ ಇಡಬೇಕಾದರೂ ಎಚ್ಚರಿಕೆಯಿಂದ ಇಡಬೇಕು. ಸ್ವಲ್ಪ ಎಚ್ಚರ ತಪ್ಪಿದರೆ ಆಪತ್ತು ಕಟ್ಟಿಟ್ಟ ಬುತ್ತಿ.

ನಗರದಲ್ಲಿ ವಾಹನಗಳು ಸಂಚರಿಸಲು ವಿಶಾಲವಾದ ರಸ್ತೆಗಳು ಎಷ್ಟು ಮುಖ್ಯವೋ, ಸಾರ್ವಜನಿಕರು ಸರಾಗವಾಗಿ ನಡೆದಾಡಲು ಪಾದಚಾರಿ ಮಾರ್ಗಗಳು ಅಷ್ಟೆ ಮುಖ್ಯ. ಆದರೆ, ಆಡಳಿತ ವ್ಯವಸ್ಥೆಯು ಪಾದಚಾರಿಗಳನ್ನು ಲೆಕ್ಕಕ್ಕೆ ಇರಿಸಿಕೊಂಂತೆ ಕಾಣುತ್ತಿಲ್ಲ. ನಗರದ ಯಾವ ಭಾಗದಲ್ಲಿ ಸಂಚರಿಸಿದರೂ ನಡೆದಾಡಲು ಸಮರ್ಪಕವಾದ ಫುಟ್‌ಪಾತ್ ಇಲ್ಲ.

ಇದ್ದರೂ ಬಹಳಷ್ಟು ಕಡೆ ಒತ್ತುವರಿಯಾಗಿದೆ. ಇರುವ ಫುಟ್‌ಪಾತ್‌ ಮೇಲೆ ಹೊದಿಸಲಾಗಿರುವ ಸಿಮೆಂಟ್ ಹಾಸುಗಳು (ಸ್ಲಾಬ್‌) ಕಿತ್ತು ಹೋಗಿವೆ. ಪರಿಣಾಮ ಪಾದಚಾರಿಗಳು, ಹೆಜ್ಜೆ ಹೆಜ್ಜೆಗೂ ಹೈಜಂಪ್ ಮಾಡಿಕೊಂಡು ಸಾಗಬೇಕು. ಫುಟ್‌ಪಾತ್ ಒತ್ತುವರಿಯಾಗಿರುವ ಕಡೆಗಳಲ್ಲಿ ಹಾಗೂ ಸಿಮೆಂಟ್ ಕಲ್ಲುಹಾಸು ಮುರಿದುಹೋಗಿರುವ ಕಡೆಗಳಲ್ಲಿ ರಸ್ತೆಯಿಂದ ಕೆಳಗೆ ಇಳಿದು, ಮತ್ತೆ ಹತ್ತಿ ಸರ್ಕಸ್‌ ಮಾಡಬೇಕಾಗಿದೆ. ಇದೊಂದು ರೀತಿಯಲ್ಲಿ ಪಾದಚಾರಿಗಳಿಗೆ ಹಗ್ಗದ ಮೇಲಿನ ನಡಿಗೆ ಇದ್ದಂತೆ.

ಕಿತ್ತುಹೋದ ಕಲ್ಲುಹಾಸು:

ನಗರದ ಹೃದಯಭಾಗವಾಗಿರುವ ಕೆಎಂ ಮಾರ್ಗದ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಪಾದಚಾರಿ ಮಾರ್ಗದಲ್ಲಿರುವ ಸಿಮೆಂಟ್ ಸ್ಲಾಬ್‌ಗಳು ಅಲ್ಲಲ್ಲಿ ಕಿತ್ತುಹೋಗಿದೆ. ಕೆನರಾ ಬ್ಯಾಂಕ್‌ ಪಕ್ಕದಲ್ಲಿರುವ ಪೆಟ್ರೋಲ್ ಬಂಕ್ ಎದುರಿಗೆ ಫುಟ್‌ಪಾತ್‌ನಲ್ಲಿ ದೊಡ್ಡ ಗುಂಡಿ ಬಾಯ್ತೆರೆದು ನಿಂತಿದೆ. ನಗರದ ಪ್ರಮುಖ ವೃತ್ತದಲ್ಲಿ ಗುಂಡಿ ಬಿದ್ದರೂ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳಿಗೆ ಕಾಣದಿರುವುದು ಆಶ್ಚರ್ಯವೇ ಸರಿ. 

ಜೋಡುಕಟ್ಟೆಯಿಂದ ಕಿನ್ನಿಮೂಲ್ಕಿ ಕಡೆಗೆ ಸಾಗುವ ರಸ್ತೆಯ ಪಾದಚಾರಿ ಮಾರ್ಗ ಹಾಳಾಗಿದೆ. ಸಾರ್ವಜನಿಕರು ಮೊಬೈಲ್‌ನಲ್ಲಿ ಮಾತನಾಡುತ್ತಲೋ, ಅತ್ತಿತ್ತ ನೋಡುತ್ತಲೋ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋದರೆ ಮುಗ್ಗರಿಸಿ ಗುಂಡಿಗೆ ಬಿದ್ದು ಕೈಕಾಲು ಮುರಿದುಕೊಳ್ಳುವುದು ಖಚಿತ.

ಅಂಬಾಗಿಲಿನಿಂದ ಕಲ್ಸಂಕದವರೆಗೂ ಚಾಚಿಕೊಂಡಿರುವ ಪಾದಚಾರಿ ಮಾರ್ಗದ ಸ್ಥಿತಿಯಂತೂ ಹೇಳತೀರದು. ಡಿಮಾರ್ಟ್‌ನಿಂದ ಸ್ವಲ್ಪ ದೂರ ಗುಂಡಿಬೈಲಿನ ಕಡೆಗೆ ಸಾಗಿದರೆ ಸಮಸ್ಯೆಯ ಗಂಭೀರತೆ ಅರಿವಿಗೆ ಬರುತ್ತದೆ. ಕೆಲವು ಕಡೆ ಫುಟ್‌ಪಾತ್‌ ಸಿಮೆಂಟ್ ಹಾಸುಗಳು ಮುರಿದಿದ್ದರೆ ಕೆಲವು ಕಡೆಗಳಲ್ಲಿ ಆಳವಾದ ಕಂದಕಗಳು ನಿರ್ಮಾಣವಾಗಿದೆ.

ಇದೇ ರಸ್ತೆಯಲ್ಲಿ ಮುಂದೆ ಸಾಗಿದರೆ ಫುಟ್‌ಪಾತ್‌ ಸಂಪೂರ್ಣ ಮಾಯವಾಗುತ್ತದೆ. ಸುಮಾರು ಐದಾರು ಅಡಿ ಆಳವಿರುವ ತೋಡು ಮುಖ್ಯರಸ್ತೆಯ ಪಕ್ಕದಲ್ಲೇ ಹರಿಯುತ್ತಿದ್ದರೂ ರಕ್ಷಣೆಗೆ ತೋಡಿನ ಮೇಲೆ ಸಿಮೆಂಟ್‌ ಹಾಸು ಹೊದಿಸಿಲ್ಲ. ಸುಮಾರು ಅರ್ಧ ಕಿ.ಮೀ ದೂರದವರೆಗೂ ಸಾರ್ವಜನಿಕರು ರಸ್ತೆಯ ಮೇಲೆ ಪ್ರಾಣಭೀತಿಯಲ್ಲಿ ನಡೆಯಬೇಕು.

ಈ ಭಾಗದಲ್ಲಿ ಫುಟ್‌ಪಾತ್ ಗಿಡಗಂಟಿಗಳಿಂದ ಮುಚ್ಚಿಹೋಗಿದ್ದು ನಡೆಯಲು ಅಸಾಧ್ಯವಾಗಿದೆ. ಒಂದೆಡೆ ಗುಂಡಿ ಬಿದ್ದ ರಸ್ತೆ, ಮತ್ತೊಂದೆಡೆ ಫುಟ್‌ಪಾತ್ ಅಲಭ್ಯತೆ ಕಾರಣಕ್ಕೆ ಕಲ್ಸಂಕ–ಅಂಬಾಗಿಲು ರಸ್ತೆಯಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಿವೆ.

ಮಲ್ಪೆ, ಮಣಿಪಾಲ ಹಾಗೂ ಉಡುಪಿ ಮಧ್ಯೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 169 ಎ ಸ್ಥಿತಿ ಭಿನ್ನವಾಗಿಲ್ಲ. ಮಲ್ಪೆಯಿಂದ ಕರಾವಳಿ ಜಂಕ್ಷನ್‌ವರೆಗಿನ ಹೆದ್ದಾರಿಯ ಹಲವು ಕಡೆ ಪಾದಚಾರಿ ಮಾರ್ಗವೇ ಇಲ್ಲ. ಇರುವ ಕೆಲವು ಕಡೆಗಳಲ್ಲಿ ಕಲ್ಲುಗಳು ಕಿತ್ತುಬಂದಿವೆ. ಮೀನು ಸಾಗಿರುವ ವಾಹನಗಳು ಸುರಿಸುವ ನೀರಿನಿಂದ ಫುಟ್‌ಪಾತ್ ಮೇಲೆ ಕಾಲಿಟ್ಟರೆ ಜಾರಿ ಬೀಳುವುದು ಖಚಿತ.

ಕರಾವಳಿ ಜಂಕ್ಷನ್‌ನಿಂದ ಉಡುಪಿಯ ಕಡಿಯಾಳಿವರೆಗಿನ ಫುಟ್‌ಪಾತ್ ಹದಗೆಟ್ಟಿದೆ. ಅಲ್ಲಲ್ಲಿ ಸಿಮೆಂಟ್ ಹಾಸುಗಳು ಮುರಿದಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಕಲ್ಸಂಕ ಬಳಿಯ ಫುಟ್‌ಪಾತ್‌ನಲ್ಲಿ ದೈತ್ಯ ಗುಂಡಿಯೊಂದು ಬಲಿಗಾಗಿ ಬಾಯ್ತೆರೆದು ನಿಂತಿದೆ. ಮಾಂಡೋವಿ ನಿರ್ಮಾಣ ಹಂತದ ಕಟ್ಟಡದ ಸಮೀಪವೂ ಪಾದಚಾರಿ ಮಾರ್ಗ ಹಾಳಾಗಿದೆ.

ಕಡಿಯಾಳಿಯಿಂದ ಮಣಿಪಾಲದವರೆಗೂ ನೂತನವಾಗಿ ನಿರ್ಮಿಸಿರುವ ಹೆದ್ದಾರಿ ಪಾದಚಾರಿ ಮಾರ್ಗ ಗಿಡಗಂಟಿಗಳಿಂದ ಮುಚ್ಚಿಹೋಗಿದೆ. ಕೆಲವೆಡೆ ಅತಿಕ್ರಮಣವಾಗಿದೆ. ಸಾರ್ವಜನಿಕರು ಅನಿವಾರ್ಯವಾಗಿ ಹೆದ್ದಾರಿ ಮೇಲೆ ನಡೆಯಬೇಕಾಗಿದೆ.

ಉಡುಪಿ ನಗರದ ಸಿಟಿ ಸೆಂಟ್ರಲ್‌ ಮಾಲ್‌ನಿಂದ ಚಿತ್ತರಂಜನ್ ಸರ್ಕಲ್‌ವರೆಗೂ ಪಾದಚಾರಿ ಮಾರ್ಗವನ್ನು ದುರ್ಬೀನು ಹಾಕಿಕೊಂಡು ಹುಡುಕಬೇಕು. ವಾಣಿಜ್ಯ ಮಳಿಗೆಗಳ ಮಾಲೀಕರು ಫುಟ್‌ಪಾತ್‌ ಅನ್ನು ಸ್ವಂತದ ಜಾಗವಾಗಿ ಬಳಸಿಕೊಂಡಿದ್ದಾರೆ. ಅತಿ ಹೆಚ್ಚು ವಾಹನ ಹಾಗೂ ಜನದಟ್ಟಣೆಯ ಪ್ರದೇಶ ಇದಾಗಿದ್ದು, ನಿತ್ಯ ಅಪಘಾತಗಳು ಸಾಮಾನ್ಯ ಎನ್ನುವಂತಾಗಿದೆ.

ನಡೆದುಕೊಂಡು ಹೋಗುವವರು ಮಾತ್ರವಲ್ಲದೆ ದ್ವಿಚಕ್ರ ವಾಹನ, ಕಾರು ಸೇರಿದಂತೆ ಇತರ ವಾಹನಗಳಲ್ಲಿ ಬರುವವರು, ಅಷ್ಟೆ ಏಕೆ ಪ್ರತಿಯೊಬ್ಬ ನಾಗರಿಕನೂ ಪಾದಚಾರಿ ಮಾರ್ಗವನ್ನು ಬಳಸುತ್ತಾನೆ. ಇಷ್ಟಾದರೂ ನಗರಾಡಳಿತ ಪಾದಚಾರಿ ಮಾರ್ಗಗಳ ದುರಸ್ಥಿಗೆ ಹಾಗೂ ನಿರ್ವಹಣೆಗೆ ಒತ್ತು ಕೊಡದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಪಾದಚಾರಿ ಮಾರ್ಗಗಳ ಒತ್ತುವರಿ ತೆರವಿಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಪ್ರತಿಬಾರಿ ‌ಎಚ್ಚರಿಕೆ ನೀಡುವ ನಗರಾಡಳಿತ ಇದುವರೆಗೂ ದಿಟ್ಟ ಹೆಜ್ಜೆ ಮುಂದಿಟ್ಟಿಲ್ಲ ಎನ್ನುತ್ತಾರೆ ಹಿರಿಯ ನಾಗರಿಕರಾದ ವಿಶ್ವಜಿತ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು