ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಬಾರಿ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ದೇವಿಪ್ರಸಾದ್ ಶೆಟ್ಟಿ

29 ವರ್ಷಗಳಿಂದ ಬೆಳಪು ಗ್ರಾ.ಪಂ ಸದಸ್ಯರಾಗಿರುವ ದೇವಿಪ್ರಸಾದ್ ಶೆಟ್ಟಿ
Published 21 ಆಗಸ್ಟ್ 2023, 6:01 IST
Last Updated 21 ಆಗಸ್ಟ್ 2023, 6:01 IST
ಅಕ್ಷರ ಗಾತ್ರ

ಪಡುಬಿದ್ರಿ : ಕಾಪು ತಾಲ್ಲೂಕಿನ ಬೆಳಪು ಗ್ರಾಮ ಪಂಚಾಯಿತಿಗೆ ದೇವಿಪ್ರಸಾದ್‌ ಶೆಟ್ಟಿ 10ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋಲು ಕಾಣದೆ 29 ವರ್ಷಗಳಿಂದ ಅವರು ಸದಸ್ಯರಾಗಿದ್ದಾರೆ.

ಮೀಸಲಾತಿ ಅಡಿ ಚುನಾವಣೆಗಳು ನಡೆದರೂ ಇಷ್ಟು ವರ್ಷಗಳ ಕಾಲ ದೇವಿಪ್ರಸಾದ್ ಶೆಟ್ಟಿ ಗ್ರಾಮ ಪಂಚಾಯಿತಿ ಸದಸ್ಯರಾಗಿ, 10 ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ವಿಶೇಷ.

ಮೊದಲು ಮಂಡಲ ಪಂಚಾಯಿತಿಯಾಗಿದ್ದ ‘ಬೆಳಪು’ 1994ರಲ್ಲಿ ಗ್ರಾಮ ಪಂಚಾಯಿತಿಯಾಯಿತು. ನಂತರ ನಡೆದ ಮೊದಲ ಚುನಾವಣೆಯಲ್ಲಿ ಮುಬಾರಕ (1995) ಅಧ್ಯಕ್ಷರಾದರು. 1997ರಲ್ಲಿ ರೇಖಾ, 1999ರಲ್ಲಿ ವಿಶ್ವನಾಥ ರಾವ್, 2014ರಲ್ಲಿ ಪರಿಶಿಷ್ಠ ಜಾತಿ ಮಹಿಳೆ ಮೀಸಲಾತಿಯಡಿ ವಿಮಲಾ ಅಂಚನ್, 2021ರಲ್ಲಿ ಶೋಭಾ ಭಟ್ ಅಧ್ಯಕ್ಷರಾದರು.

ಇವರನ್ನು ಹೊರತುಪಡಿಸಿದರೆ ಉಳಿದೆಲ್ಲ ಅವಧಿಗೆ ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷರಾಗಿದ್ದಾರೆ. ಬೆಳಪು ಪಂಚಾಯಿತಿ ರಚನೆಯಾಗಿ 29 ವರ್ಷ ಕಳೆದಿದ್ದು 6 ಜನ ಅಧ್ಯಕ್ಷರನ್ನು ಮಾತ್ರ ಕಂಡಿದೆ.

‌ರಾಜಕೀಯ ಹಾದಿ:

ದೇವಿಪ್ರಸಾದ್ ಶೆಟ್ಟಿ 20ನೇ ವಯಸ್ಸಿನಲ್ಲಿ (1994ರಲ್ಲಿ) ಬೆಳಪು ಪಂಚಾಯಿತಿ ಸದಸ್ಯರಾದರು. 2000 ದಿಂದ 2014ರವರೆಗೆ ನಿರಂತರವಾಗಿ ಅಧ್ಯಕ್ಷರಾದರು. 2014 ಹಾಗೂ 2021 ಹೊರತುಪಡಿಸಿ ಉಳಿದ ಅವಧಿಗೆ ಅಧ್ಯಕ್ಷರಾಗಿ ಇದುವರೆಗೂ ಒಟ್ಟಾರೆ ಸುಮಾರು 21 ವರ್ಷ ಅಧ್ಯಕ್ಷಗಾದಿಯಲ್ಲಿ ಕುಳಿತಿದ್ದಾರೆ.

ಗ್ರಾಮಾಭಿವೃದ್ಧಿ ಸಮಿತಿಯೇ ಅಂತಿಮ:

ಗ್ರಾಮದ ಸ್ಥಳೀಯ ಮುಖಂಡರು ಪಕ್ಷಾತೀತವಾಗಿ ರಚಿಸಿಕೊಂಡಿರುವ ಗ್ರಾಮಾಭಿವೃದ್ಧಿ ಸಮಿತಿಯು ಗ್ರಾಮ ಪಂಚಾಯಿತಿ ಚುನಾವಣೆಗೆ ಯಾರನ್ನು ಆಯ್ಕೆ ಮಾಡಬೇಕು ಎಂದು ನಿರ್ಧರಿಸುತ್ತದೆ. ಸಮಿತಿಯ ನಿರ್ಧಾರದಂತೆ ಗ್ರಾಮಸ್ಥರು ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಬೆಳಪು ಪಂಚಾಯಿತಿಗೆ ಎರಡು ಬಾರಿ ಅವಿರೋಧವಾಗಿ ಸದಸ್ಯರ ಆಯ್ಕೆ ನಡೆದಿರುವುದು ವಿಶೇಷ. ದೇವಿಪ್ರಸಾದ್ ಶೆಟ್ಟಿ ಅವರೂ ಗ್ರಾಮಾಭಿವೃದ್ಧಿ ಸಮಿತಿ ಮೂಲಕವೇ ಪಂಚಾಯಿತಿ ಸದಸ್ಯರಾಗುತ್ತಿದ್ದಾರೆ.

ಬೆಳಪು ಗ್ರಾಮದ ವಿಶೇಷ:

ಹಿಂದೆ ‘ಬೆಳಪು ಕಾಡು’ ಎಂದು ಕರೆಸಿಕೊಳ್ಳುತ್ತಿದ್ದ ಬೆಳಪು ಸದ್ಯ ಹೊಳ‍ಪು ಪಡೆದುಕೊಂಡಿದ್ದು ನಗರ ಪ್ರದೇಶಗಳಿಗೆ ಸೆಡ್ಡು ಹೊಡೆಯುವಂತೆ ಬೆಳೆದಿದೆ. ಎರಡು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದೆ. ಕೃಷಿ, ಪಶುಸಂಗೋಪನೆ, ರಸ್ತೆಗಳು, ಅರಣ್ಯ ಅಭಿವೃದ್ಧಿ, ಸಣ್ಣ ಪ್ರಮಾಣದ ಕೈಗಾರಿಕೆಗಳು, ಕರಕುಶಲ ವಸ್ತುಗಳು, ವಯಸ್ಕರ ಸಾಕ್ಷರತಾ ಕಾರ್ಯಕ್ರಮ, ಆರೋಗ್ಯ ಮತ್ತು ನೈರ್ಮಲ್ಯ, ಹಿಂದುಳಿದ ಸಮುದಾಯಗಳ ಕಲ್ಯಾಣ, ಮದ್ಯಮುಕ್ತ ಸಮಾಜ, ವಿಮಾ ಯೋಜನೆ ಕಾರ್ಯಕ್ರಮಗಳು ಅನುಷ್ಠಾನಗೊಂಡಿವೆ. 3,571 ಚ.ಕಿ.ಮೀ ವಿಸ್ತೀರ್ಣ ಹೊಂದಿರುವ ಗ್ರಾಮ 4,127 ಜನಸಂಖ್ಯೆ ಹೊಂದಿದೆ. ಗ್ರಾಮ ವಿಕಾಸ ಸೌಧ, ಅಂಬೇಡ್ಕರ್ ಭವನ, ಸಾರ್ವಜನಿಕ ಗ್ರಂಥಾಲಯ, ಸ್ಮಶಾನ ನಿರ್ಮಾಣ ಮಾಡಲಾಗಿದೆ. ವಸತಿ ಯೋಜನೆಯ ಮೂಲಕ 600 ಕುಟುಂಬಗಳಿಗೆ ನಿವೇಶನ ನೀಡಲಾಗಿದೆ.

30 ಎಕರೆಯಲ್ಲಿ ಮಂಗಳೂರು ವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಾಮಗಾರಿ ಪ್ರಗತಿಯಲ್ಲಿದೆ. 5.39 ಎಕರೆಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, 68 ಎಕರೆಯಲ್ಲಿ 38 ಕೈಗಾರಿಕೆಗಳು ಇರುವ ಇಂಡಸ್ಟ್ರಿಯಲ್ ಪಾರ್ಕ್ ನಿರ್ಮಿಸಲಾಗಿದೆ. ಪೊಲೀಸ್ ವಸತಿ ಸಮುಚ್ಛಯಕ್ಕೆ, ಕವಾಯತಿಗೆ 5 ಎಕರೆ ಜಾಗ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2.5 ಎಕರೆ ಜಾಗ, ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ 3 ಎಕರೆ ಮೀಸಲಿರಿಸಲಾಗಿದೆ. 17 ಎಕರೆಯಲ್ಲಿ ಕ್ರಿಕೆಟ್ ಕ್ರೀಡಾಂಗಣ ರಚನೆಗೆ ಸ್ಥಳ ಪರಿಶೀಲನೆ ನಡೆದಿದೆ ಎನ್ನುತ್ತಾರೆ ಪಂಚಾಯಿತಿ ಅಧಿಕಾರಿಗಳು.

ಬೆಳಪು ಗ್ರಾಮ ಪಂಚಾಯಿತಿ ಕಟ್ಟಡ
ಬೆಳಪು ಗ್ರಾಮ ಪಂಚಾಯಿತಿ ಕಟ್ಟಡ

ಸದಸ್ಯರ ಒತ್ತಾಯದಿಂದ ಅಧ್ಯಕ್ಷನಾದೆ ಬೆಳಪು ಪಂಚಾಯಿತಿಗೆ 20ನೇ ವಯಸ್ಸಿನಲ್ಲಿ ಸದಸ್ಯನಾಗಿ ಆಯ್ಕೆಯಾದ ಬಳಿಕ ಗ್ರಾಮಸ್ಥರು ಎಂದೂ ಕೈಬಿಟ್ಟಿಲ್ಲ. ಪಂಚಾಯಿತಿಯಲ್ಲಿ ರಾಜಕೀಯ ಮಾಡದೆ ಪಕ್ಷಾತೀತವಾಗಿ ಗ್ರಾಮಾಭಿವೃದ್ಧಿ ಸಮಿತಿಯ ಮೂಲಕ ಪಂಚಾಯಿತಿ ಸದಸ್ಯರನ್ನು ಆಯ್ಕೆ ಮಾಡಿಕೊಂಡು ಬರಲಾಗುತ್ತಿದೆ. ಒಂದು ಬಾರಿ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ನಂತರ ಅವಿರೋಧವಾಗಿ ಆಯ್ಕೆಯಾಗುತ್ತಾ ಬಂದಿದ್ದೇನೆ. ಈ ಬಾರಿ ಅಧ್ಯಕ್ಷ ಸ್ಥಾನ ನಿರಾಕರಿಸಿದರೂ ಎಲ್ಲ ಸದಸ್ಯರು ಒತ್ತಾಯಪೂರ್ವಕವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. –ದೇವಿಪ್ರಸಾದ್ ಶೆಟ್ಟಿ ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ

ಎಲ್ಲರಿಗೂ ಅವಕಾಶ ಸಿಗಲಿ ದೇವಿಪ್ರಸಾದ್ ಶೆಟ್ಟಿ ಅವರಂತಹ ನಾಯಕರು ಇತರರಿಗೆ ಅವಕಾಶ ನೀಡದೇ ನಿರಂತರವಾಗಿ ಪಂಚಾಯಿತಿ ಅಧ್ಯಕ್ಷ ಗಾದಿ ಅಲಂಕರಿಸುವುದು ಎಷ್ಟು ಸರಿ? ಎಲ್ಲ ವರ್ಗದವರು ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಬೇಕು ಎಂಬ ಕಾರಣಕ್ಕೆ ಮೀಸಲಾತಿ ನಿಯಮ ಜಾರಿಗೆ ಬಂದಿದೆ. ಆದರೆ ಇತರ ಸದಸ್ಯರಿಗೆ ಅವಕಾಶ ನೀಡದೇ ತಾವೇ ಅಧ್ಯಕ್ಷ ಸ್ಥಾನಕ್ಕೇರುತ್ತಿರುವುದು ವಿಷಾದನೀಯ. ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT