ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ಜಾಗೃತಿ ಅಭಿಯಾನ 1ಕ್ಕೆ

ಶಬರಿಮಲಾ ಅಯ್ಯಪ್ಪ ಸೇವಾ ಸಮಾಜದಿಂದ ಶೋಭಾಯಾತ್ರೆ
Last Updated 27 ಅಕ್ಟೋಬರ್ 2018, 16:12 IST
ಅಕ್ಷರ ಗಾತ್ರ

ಉಡುಪಿ: ಎಲ್ಲ ವಯೋಮಿತಿಯ ಮಹಿಳೆಯರು ಶಬರಿಮಲೆಗೆ ತೆರಳಬಹುದು ಎಂಬ ಸುಪ್ರೀಂ ಕೋರ್ಟ್‌ ತೀರ್ಪನ್ನು ಮತ್ತೊಮ್ಮೆ ಪರಾಮರ್ಶಿಸುವಂತೆ ಒತ್ತಾಯಿಸಿ ನ.1ರಂದು ಸಂಜೆ 4ಕ್ಕೆ ಎಂಜಿಎಂ ಮೈದಾನದಲ್ಲಿ ಬೃಹತ್ ಧರ್ಮ ಜಾಗೃತಿ ಅಭಿಯಾನ ಹಾಗೂ ಮಹಾ ಸಹಸ್ರಾರ್ಚನೆ ಹಮ್ಮಿಕೊಳ್ಳಲಾಗಿದೆ ಎಂದು ಶಬರಿಮಲಾ ಅಯ್ಯಪ್ಪ ಸೇವಾ ಸಮಾಜದ ಸುಪ್ರಸಿದ್ಧ ಶೆಟ್ಟಿ ತಿಳಿಸಿದರು.

ಕಾರ್ತಿಕ್ ಎಸ್ಟೇಟ್ ಹೋಟೆಲ್‌ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಬರಿಮಲೆಯಲ್ಲಿ ಪ್ರತ್ಯೇಕ ಸಂಪ್ರದಾಯ ಆಚರಣೆಯಲ್ಲಿದೆ. ಪೌರಾಣಿಕ ಹಿನ್ನೆಲೆ ಇರುವ ಕ್ಷೇತ್ರದ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಂಡಿರುವುದು ಅಪಾರ ಭಕ್ತರನ್ನು ಹಾಗೂ ಹಿಂದೂ ಸಮಾಜಕ್ಕೆ ಕಳವಳ ಉಂಟುಮಾಡಿದೆ ಎಂದರು.

ಹಿಂದೆ, 10 ವರ್ಷದೊಳಗಿನ ಹಾಗೂ 50 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶ ನೀಡಲಾಗಿತ್ತು. ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ ಇದು. ಈಗ ಸಂಪ್ರದಾಯವನ್ನು ಬದಲಿಸಲು ಹೊರಟಿರುವುದು ಭಕ್ತರಿಗೆ ನೋವು ತಂದಿದೆ. ಕೇರಳದಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ಸುಪ್ರೀಂಕೋರ್ಟ್‌ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದರು.

ಹಿಂದೂ ಶಾಸ್ತ್ರ, ಸಂಪ್ರದಾಯಗಳನ್ನು ಮೌಢ್ಯಗಳೆಂದು ಬಿಂಬಿಸಿ ಅದರ ಸುದುದ್ದೇಶಗಳನ್ನು ದಮನ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಇದನ್ನು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ಖಂಡಿಸುತ್ತದೆ ಎಂದರು. ನ.1ರಂದು ಮಧ್ಯಾಹ್ನ 2.30ಕ್ಕೆ ಜೋಡುಕಟ್ಟೆಯಿಂದ ಶೋಭಾಯಾತ್ರೆ ಆರಂಭವಾಗಲಿದೆ. ಸಂಜೆ ನಡೆಯುವ ಧರ್ಮ ಜಾಗೃತಿ ಅಭಿಯಾನದಲ್ಲಿ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ ಎಂದರು.

ಪಂದಳದ ರಾಜಮನೆತನದ ಪ್ರತಿನಿಧಿ ಶಶಿಕುಮಾರ ವರ್ಮಾ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರಾದ ಹರಿಯಪ್ಪ ಕೋಟ್ಯಾನ್‌, ಭೋಜರಾಜ್ ಕಿದಿಯೂರು, ಕಿಶೋರ್ ಸುವರ್ಣ, ವಿಜಯ ಕೊಡವೂರು, ರಾಧಾಕೃಷ್ಣ ಮೆಂಡನ್‌ ಅವರೂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT