ಶನಿವಾರ, ನವೆಂಬರ್ 23, 2019
23 °C
ರಾಷ್ಟ್ರಪಿತನನ್ನು ಸಮಗ್ರವಾಗಿ ಅರಿಯುವ ವಿಭಿನ್ನ ಪ್ರಯತ್ನ; ಎಆರ್‌ ತಂತ್ರಜ್ಞಾನ ಬಳಕೆ

ಗಾಂಧಿ ಚಿಂತನೆಗಳಿಗೆ ಡಿಜಿಟಲ್‌ ಸ್ಪರ್ಶ

Published:
Updated:
Prajavani

ಉಡುಪಿ: ಮಣಿಪಾಲದ ಕೆಎಂಸಿ ಗ್ರೀನ್ಸ್‌ನ ಒಳ ಹೊಕ್ಕರೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಜತೆಗೆ ಆತ್ಮೀಯವಾಗಿ ಒಡನಾಡಬಹುದು. ಗಾಂಧೀ ತತ್ವ, ಸಿದ್ಧಾಂತ, ವಿಚಾರಧಾರೆ, ಹೋರಾಟದ ಹಾದಿಯಲ್ಲಿ ಸಾಗಬಹುದು. ಸ್ವಾತಂತ್ರ್ಯ ಚಳವಳಿಯ ಸನ್ನಿವೇಶಗಳನ್ನು ಕಣ್ತುಂಬಿಕೊಳ್ಳಬಹುದು. ಈ ಅವಕಾಶ ಲಭ್ಯವಿರುವುದು ನ.8ರವರೆಗೆ ಮಾತ್ರ.

ಗಾಂಧೀಜಿ 150ನೇ ವರ್ಷಾಚರಣೆ ಅಂಗವಾಗಿ ಕೇಂದ್ರ ಪ್ರಸಾರ ಸಚಿವಾಲಯ ಪ್ರಾದೇಶಿಕ ಜನಸಂಪರ್ಕ ಕಾರ್ಯಾಲಯ, ಮಣಿಪಾಲದ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸ್‌ನ ಸಹಯೋಗದಲ್ಲಿ ಕೆಎಂಸಿ ಗ್ರೀನ್ಸ್‌ ಆವರಣದಲ್ಲಿ ಡಿಜಿಟಲ್‌ ಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ದೇಶದ 26 ಕಡೆಗಳಲ್ಲಿ ಪ್ರದರ್ಶನ ನಡೆಯುತ್ತಿದ್ದು, ಅದರಲ್ಲಿ ಮಣಿಪಾಲ ಕೂಡ ಒಂದು. ಗಾಂಧೀಜಿಯ ಹೋರಾಟದ ಹಾದಿಗೆ ಇಲ್ಲಿ ಡಿಜಿಟಲ್‌ ಸ್ಪರ್ಶ ನೀಡಿ ಆಕರ್ಷಕವಾಗಿ ಪ್ರದರ್ಶನಕ್ಕಿಡಲಾಗಿದೆ.

ಗಾಂಧೀಜಿ ಜತೆ ಸಾಗುವ ಅವಕಾಶ:

ಗಾಂಧೀಜಿ ಅವರ ಉಪ್ಪಿನ ಸತ್ಯಾಗ್ರಹಕ್ಕೆ ಆಗ್ಮೆಂಟೆಡ್‌ ರಿಯಾಲಿಟಿ ತಂತ್ರಜ್ಞಾನದ ಸ್ಪರ್ಶ ಕೊಡಲಾಗಿದ್ದು, ಇಲ್ಲಿ ನೀವು ಕೂಡ ಗಾಂಧೀಜಿ ಜತೆ ದಂಡಿಯಾತ್ರೆಯಲ್ಲಿ ಭಾಗವಹಿಸಬಹುದು. ಒಂದು ಹಿಡಿ ಉಪ್ಪನ್ನು ಎತ್ತಿಕೊಂಡು ಹೋರಾಟಕ್ಕೆ ಕೈಜೋಡಿಸಬಹುದು. ಜತೆಗೆ, ನೀವು ಭಾಗವಹಿಸಿದ ವಿಡಿಯೋವನ್ನು ಪಡೆದುಕೊಳ್ಳಬಹುದು.

ಟಚ್‌ಸ್ಕ್ರೀನ್‌ನಲ್ಲಿ ಗಾಂಧೀಜಿ:

ಗಾಂಧೀಜಿ ಅವರ ಹೋರಾಟದ ಸಂಪೂರ್ಣ ಮಾಹಿತಿಗಳನ್ನು ಒಳಗೊಂಡ ಡಿಜಿಟಲ್‌ ಚಿತ್ರಗಳ ಪ್ರದರ್ಶನ ಗಮನ ಸೆಳೆಯುತ್ತದೆ. ಅಸಹಕಾರ ಚಳವಳಿ, ಕ್ವಿಟ್‌ ಇಂಡಿಯಾ ಚಳವಳಿ, ಎರಡನೇ ವಿಶ್ವಯುದ್ಧ, ಪರಿಶಿಷ್ಟರ ಉನ್ನತಿಗಾಗಿ ಹಮ್ಮಿಕೊಂಡ ಕಾರ್ಯಕ್ರಮಗಳ ವಿವರವನ್ನು ಡಿಜಿಟಲ್‌ ಪರದೆಯ ಮೇಲೆ ವೀಕ್ಷಣೆ ಮಾಡಬಹುದು. ಜತೆಗೆ ಆಡಿಯೋ ಮೂಲಕವೂ ಆಲಿಸಬಹುದು.

ಜಾಗತಿಕ ನಾಯಕರಾದ ಆಲ್ಪರ್ಟ್‌ ಐನ್‌ಸ್ಟೀನ್‌, ದಲೈಲಾಮಾ, ನೆಲ್ಸೆನ್ ಮಂಡೆಲಾ, ಬರಾಕ್ ಒಮಾಮ, ಸ್ಟೀವ್ ಜಾಬ್ಸ್‌ ಅವರು ಗಾಂಧೀಜಿ ಕುರಿತು ಬರೆದ ಸಾಲುಗಳನ್ನು ಓದಬಹುದು. 

1869ರ ಜನನದಿಂದ 1948ರ ಮರಣದವರೆಗಿನ ಗಾಂಧೀಜಿ ಬದುಕಿನ ಐತಿಹಾಸಿಕ ಘಟನಾವಳಿಗಳನ್ನು ಟೈಮ್‌ಲೈನ್‌ ರೋಲಿಂಗ್ ತಂತ್ರಜ್ಞಾನದ ಮೂಲಕ ತಿಳಿದುಕೊಳ್ಳಬಹುದು. ವರ್ಚುವಲ್ ರಿಯಾಲಿಟಿ ಸಾಧನದಿಂದ ಸಮಗ್ರ ಭಾರತವನ್ನು ವೀಕ್ಷಣೆ ಮಾಡಬಹುದು. 

ಗಾಂಧೀಜಿ ಅವರನ್ನು ಕುರಿತು ಪ್ರಕಟಗೊಂಡ ಪುಸ್ತಕಗಳ ಭಂಡಾರವೇ ಇಲ್ಲಿದೆ. ಜತೆಗೆ, ಗಾಂಧೀಜಿ ಅವರನ್ನು ಆಧರಿಸಿ ತೆರೆಗೆ ಬಂದ ಚಿತ್ರಗಳ ವಿವರವೂ ಲಭ್ಯವಿದೆ.

ಪ್ರತಿಕ್ರಿಯಿಸಿ (+)