ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್ 1ರಿಂದ ಟೋಲ್ ಸಂಗ್ರಹಕ್ಕೆ ಬಿಡುವುದಿಲ್ಲ

ಕುಂದಾಪುರ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಟೋಲ್ ಪಡೆಯಿರಿ: ಸಂಸದೆ ಶೋಭಾ
Last Updated 29 ಜನವರಿ 2020, 13:39 IST
ಅಕ್ಷರ ಗಾತ್ರ

ಉಡುಪಿ: ಕುಂದಾಪುರದ ಶಾಸ್ತ್ರಿ ಸರ್ಕಲ್‌ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಿದ ನಂತರವಷ್ಟೆ ಟೋಲ್‌ ಸಂಗ್ರಹಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಗುತ್ತಿಗೆ ಕಂಪೆನಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಹಿಂದಿನ ಸಭೆಯಲ್ಲಿ ನಿರ್ಧರಿಸಿದಂತೆ ಮಾರ್ಚ್‌ ಅಂತ್ಯಕ್ಕೆ ಕುಂದಾಪುರ ಮೇಲ್ಸೇತುವೆ ಕಾಮಗಾರಿ ಮುಗಿಸಬೇಕು. ಇಲ್ಲವಾದರೆ, ಏಪ್ರಿಲ್‌ 1ರಿಂದ ಟೋಲ್‌ ಸಂಗ್ರಹಿಸುವಂತಿಲ್ಲ ಎಂದು ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿ ‘ಮಂಗಳೂರಿನ ಪಂಪ್‌ವೆಲ್‌ ಸೇತುವೆ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಅಲ್ಲಿರುವ ಕಾರ್ಮಿಕರು ಹಾಗೂ ಯಂತ್ರಗಳನ್ನು ಕುಂದಾಪುರ ಮೇಲ್ಸೇತುವೆ ಕಾಮಗಾರಿಗೆ ಬಳಸಿಕೊಳ್ಳಲಾಗುವುದು. ಏಪ್ರಿಲ್ ಅಂತ್ಯಕ್ಕೆ ಕಾಮಗಾರಿ ಮುಗಿಯಲಿದೆ ಎಂದು ಭರವಸೆ ನೀಡಿದರು.

ಡಿಸಿ ಗರಂ:ಪಡುಬಿದ್ರಿ ಸೇತುವೆ ಕಾಮಗಾರಿ ಕೂಡ ಪ್ರಗತಿಯಲ್ಲಿದ್ದು, ಮಾರ್ಚ್‌ ಅಂತ್ಯಕ್ಕೆ ಮುಗಿಯಲಿದೆ ಎಂದು ಅಧಿಕಾರಿ ಮಾಹಿತಿ ನೀಡಿದಾಗ, ಸಿಟ್ಟಿಗೆದ್ದ ಜಿಲ್ಲಾಧಿಕಾರಿ ಜಿ.ಜಗದೀಶ್‌, ಫೆಬ್ರುವರಿ ಅಂತ್ಯಕ್ಕೆ ಪೂರ್ಣಗೊಳಿಸುವುದಾಗಿ ಒಪ್ಪಿಕೊಂಡು, ಈಗ ಮಾರ್ಚ್‌ ಅಂತ್ಯಕ್ಕೆ ಎಂದರೆ ಹೇಗೆ? ವಾಸ್ತವವಾಗಿ ಅಲ್ಲಿ ಕಾಮಗಾರಿ ವೇಗ ಪಡೆದುಕೊಂಡಿಲ್ಲ ಎಂದು ಗರಂ ಆದರು.

₹ 200 ಕೋಟಿ ಪ್ರಸ್ತಾವ:ಉಡುಪಿಯಿಂದ ಪರ್ಕಳದವರೆಗೆ 7 ಕಿ.ಮೀ ದ್ವಿಪಥ ರಸ್ತೆ ನಿರ್ಮಾಣವಾಗುತ್ತಿದ್ದು 6 ಕಿ.ಮೀ ಕಾಮಗಾರಿ ಮುಕ್ತಾಯವಾಗಿದೆ. ಕೆಳ ಪರ್ಕಳದಿಂದ ಮೇಲಿನ ಪರ್ಕಳದವರೆಗಿನ 1 ಕಿ.ಮೀ ಕಾಮಗಾರಿಗೆ ಭೂಸ್ವಾಧೀನ ಅಡ್ಡಿಯಾಗಿದ್ದು, ಗೆಜೆಟ್‌ ನೋಟಿಫಿಕೇಷನ್‌ ಹೊರಬಿದ್ದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿ ಭರವಸೆ ನೀಡಿದರು.

ಪರ್ಕಳದಿಂದ ಶಿವಪುರದವರೆಗೆ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ₹ 200 ಕೋಟಿ ಪ್ರಸ್ತಾವವನ್ನು ಸಲ್ಲಿಸಲಾಗಿದೆ. ಮಲ್ಪೆಯಿಂದ ಉಡುಪಿಯ ಕರಾವಳಿ ಜಂಕ್ಷನ್‌ವರೆಗೂ ನಾಲ್ಕುಪಥದ ರಸ್ತೆ ಕಾಮಗಾರಿಗೆ ಶೀಘ್ರ ಭೂಸ್ವಾಧೀನ ಮಾಡಲಾಗುವುದು. ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಉಡುಪಿ–ಮಲ್ಪೆ ರಸ್ತೆ ತುಂಬಾ ಇಕ್ಕಟ್ಟಾಗಿದ್ದು, ಮೀನು ಸಾಗಣೆ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಈ ಮಾರ್ಗದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಮಾತೃಪೂರ್ಣ: ಶೇ 20 ಮಾತ್ರ ಜಾರಿ
ಮಾತೃಪೂರ್ಣ ಯೋಜನೆ ಜಿಲ್ಲೆಯಲ್ಲಿ ಶೇ 20ರಷ್ಟು ಮಾತ್ರ ಬಳಕೆಯಾಗುತ್ತಿದ್ದು, ಫಲಾನುಭವಿಗಳ ಮನೆಗೆ ಊಟ ಕಳಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಆರ್.ಶೇಶಪ್ಪ ತಿಳಿಸಿದರು.

ಗರ್ಭಿಣಿ, ಬಾಣಂತಿಯರು ಕರಾವಳಿಯಲ್ಲಿ ಅಂಗನವಾಡಿಗಳಿಗೆ ಬಂದು ಊಟ ಮಾಡುವುದಿಲ್ಲ. ಈ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ಫಲಾನುಭವಿಗಳಿಗೆ ಆಹಾರ ಧಾನ್ಯ ಅಥವಾ ಖಾತೆಗೆ ಹಣ ಹಾಕಿದರೆ ಒಳಿತು. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದರು.

ಆಯುಷ್ಮಾನ್ ಯೋಜನೆಯಡಿ ಕೋಡ್‌ ಇಲ್ಲ ಎಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿಲ್ಲ ಎಂಬ ದೂರುಗಳಿವೆ. ನಿಯಮಗಳಲ್ಲಿ ಬದಲಾವಣೆಗೆ ಆರೋಗ್ಯ ಸಚಿವರ ಜತೆ ಚರ್ಚಿಸಲಾಗುವುದು. ಅಮೃತ್ ಯೋಜನೆಯಡಿ ಕಾಮಗಾರಿಗಳು ಶೀಘ್ರ ಮುಕ್ತಾಯವಾಗಬೇಕು. ರೈತರಿಗೆ ಯೋಜನೆಗಳು ತಲುಪಬೇಕು ಎಂದು ಸಂಸದರು ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT