ಬುಧವಾರ, ಮಾರ್ಚ್ 22, 2023
20 °C
ಮಲ್ಪೆಯಲ್ಲಿ ಮೀನುಗಾರರ ಜತೆ ಸಂವಾದ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಮೀನುಗಾರರಿಗೆ ₹ 50 ದರದಲ್ಲಿ ಡೀಸೆಲ್ ಕೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಸರ್ಕಾರ ಮೀನುಗಾರರಿಗೆ ₹ 50 ದರದಲ್ಲಿ ಡೀಸೆಲ್ ಹಾಗೂ ₹ 20 ದರದಲ್ಲಿ ಸೀಮೆಎಣ್ಣೆ ಪೂರೈಸಿದರೆ ಮಾತ್ರ ಮತ್ಸ್ಯೋದ್ಯಮ ಸಂಕಷ್ಟದಿಂದ ಪಾರಾಗಲಿದೆ. ಇಲ್ಲವಾದರೆ, ಮೀನುಗಾರರ ಬದುಕು ಮತ್ತಷ್ಟು ಸಂಕಷಕ್ಕೆ ಸಿಲುಕಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಮಂಗಳವಾರ ಮಲ್ಪೆಯ ಬಂದರಿಗೆ ಭೇಟಿನೀಡಿ ಮೀನುಗಾರರ ಜತೆ ಸಂವಾದ ನಡೆಸಿ ಮಾತನಾಡಿದ ಅವರು, ‘ಸರ್ಕಾರ ನಾಲ್ಕು ತಿಂಗಳಿನಿಂದ ಡೀಸೆಲ್‌ ಸಬ್ಸಿಡಿ ನೀಡದಿರುವುದು ಖಂಡನೀಯ. ಕರಾವಳಿ ಭಾಗದವರೇ ಮೀನುಗಾರಿಕಾ ಸಚಿವರಾದರೂ ಸಮಸ್ಯೆಗೆ ಪರಿಹಾರ ಸಿಗದಿರುವುದು ವಿಪರ್ಯಾಸ’ ಎಂದರು.

ಮೀನುಗಾರಿಕೆಗೆ ಪ್ರತಿನಿತ್ಯ ಅಗತ್ಯವಿರುವ ಡೀಸೆಲ್‌ ಪ್ರಮಾಣದಲ್ಲಿ ಶೇ 10ಕ್ಕಿಂತ ಕಡಿಮೆ ಪ್ರಮಾಣದ ಡೀಸೆಲ್ ಪೂರೈಸಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಮೀನುಗಾರರ ಮೇಲೆ ಕನಿಷ್ಠ ಕಾಳಜಿ ಇಲ್ಲ. ಕಣ್ಣು, ಕಿವಿ, ಹೃದಯವಿಲ್ಲದ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಮೀನುಗಾರರು ಪ್ರಾಣ ಒತ್ತೆಯಿಟ್ಟು ಸಮುದ್ರಕ್ಕಿಳಿದು ಆರ್ಥಿಕತೆಗೆ ಶಕ್ತಿ ತುಂಬುತ್ತಿದ್ದಾರೆ. ಪ್ರಕೃತಿ ವೈಪರೀತ್ಯದ ಸವಾಲುಗಳ ನಡುವೆ ದೇಶದ ಆಹಾರ ಭದ್ರತೆಗೆ ಕೊಡುಗೆ ನೀಡುತ್ತಿದ್ದಾರೆ. ಕೋವಿಡ್‌ ಸಂಕಷ್ಟದ ನಡುವೆಯೂ ಕುಲ ಕಸುಬನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸರ್ಕಾರ ತಕ್ಷಣ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.

ಪಡಿತರ ವ್ಯವಸ್ಥೆಯಲ್ಲಿ ನೀಡಲಾಗುತ್ತಿದ್ದ ಸೀಮೆಎಣ್ಣೆಯನ್ನೂ ಸ್ಥಗಿತಗೊಳಿಸಿರುವುದು ಖಂಡನೀಯ. ವೇತನ, ಪಿಂಚಣಿ ಸೇರಿದಂತೆ ಸರ್ಕಾರದಿಂದ ಯಾವುದೇ ಸೌಲಭ್ಯಗಳನ್ನು ಪಡೆಯದೆ ಸ್ವಾಭಿಮಾನದಿಂದ ದುಡಿಯುತ್ತಿರುವ ಮೀನುಗಾರರಿಗೆ ಪಿಂಚಣಿ ಸಿಗಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀನುಗಾರರಿಗೆ ಪಿಂಚಣಿ ಕೊಡುವುದಾಗಿ ಡಿಕೆಶಿ ಭರವಸೆ ನೀಡಿದರು.

ಸಮುದ್ರದಲ್ಲಿ ಮೀನುಗಾರರ ಪ್ರಾಣ ರಕ್ಷಣೆಗೆ ಆಂಬುಲೆನ್ಸ್‌ ವ್ಯವಸ್ಥೆ ಮಾಡಬೇಕು. ಮತ್ಸ್ಯ ಸಂಪತ್ತು ಉಳಿದರೆ ಮಾತ್ರ ಮೀನುಗಾರರು ಉಳಿಯುತ್ತಾರೆ. ಈ ನಿಟ್ಟಿನಲ್ಲಿ ಸರ್ಕಾರ ಕಡಲ ಮಕ್ಕಳ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು. ‌

ಸಭೆಯಲ್ಲಿ ಹಲವು ಮೀನುಗಾರ ಮುಖಂಡರು ಹಾಗೂ ಮಹಿಳಾ ಮೀನುಗಾರರು ಸಮಸ್ಯೆಗಳನ್ನು ಹೇಳಿಕೊಂಡರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ, ಮುಖಂಡರಾದ ರಮೇಶ್ ಕುಂದರ್, ಬಾಬು ಕುಮಾರ್, ಚಂದ್ರಕಾತ್, ಮದನ್ ಸುವರ್ಣ ಇದ್ದರು.

‘ಕ್ವಾರಂಟೈನ್ ಬಿಟ್ಟು ಹೊರಬರುವಂತೆ ಮಾಡಿದರು’
ದೀರ್ಘ ಕಾಲದವರೆಗೆ ಮನೆಯಲ್ಲಿ ಕ್ವಾರಂಟೈನ್‌ ಆಗಿದ್ದ ನನ್ನನ್ನು ಡಿ.ಕೆ.ಶಿವಕುಮಾರ್ ಬಡಿದೆಬ್ಬಿಸಿ ಹೊರಗೆ ಬರುವಂತೆ ಮಾಡಿದರು. ಮಲ್ಪೆಯಲ್ಲಿ ಮೀನುಗಾರರ ಸಭೆ ಮಾಡಬೇಕು, ಮೀನುಗಾರರ ದುಃಖ, ದುಮ್ಮಾನ ಆಲಿಸಬೇಕು ಎಂದು ಹಠ ಹಿಡಿದು ಕಾರ್ಯಕ್ರಮ ಆಯೋಜಿಸುವಂತೆ ಮಾಡಿದರು ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.

ಮೀನುಗಾರರಿಂದ ಮನವಿ
ಸಿಆರ್‌ಝೆಡ್‌ ವಲಯದಲ್ಲಿ ಮನೆಗಳನ್ನು ಕಟ್ಟಿಕೊಳ್ಳಲು ಸರ್ಕಾರ ಅನುಮತಿ ನೀಡಬೇಕು, ಸಮುದ್ರದಲ್ಲಿ 12 ನಾಟಿಕಲ್ ಮೈಲಿನ ಆಚೆಗೆ ನೆರೆ ರಾಜ್ಯದ ಮೀನುಗಾರರು ಹಾಗೂ ಅಧಿಕಾರಿಗಳಿಂದ ರಾಜ್ಯದ ಮೀನುಗಾರರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಬೇಕು. ಬಂದರಿನಲ್ಲಿ ಹೂಳು ತೆಗೆಯಲು ಕ್ರಮ ತೆಗೆದುಕೊಳ್ಳಬೇಕು, ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಬೇಕು, ಹಸಿ ಹಾಗೂ ಒಣಮೀನು ಮಾರಾಟಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು