ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಮತ್ತೆ ಶುರು ಕುಡುಕರ ಹಾವಳಿ

ಎಲ್ಲೆಂದರಲ್ಲಿ ತೂರಾಡುತ್ತಿರುವ ಮದ್ಯ ವ್ಯಸನಿಗಳು
Last Updated 7 ಮೇ 2020, 5:51 IST
ಅಕ್ಷರ ಗಾತ್ರ

ಉಡುಪಿ: ಮದ್ಯ ಮಾರಾಟ ಆರಂಭವಾದ ಬಳಿಕ ನಗರದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಮದ್ಯ ವ್ಯಸನಿಗಳು ಕಂಠಪೂರ್ತಿ ಕುಡಿದು ಅಮಲಿನಲ್ಲಿ ನಗರದ ಹಲವೆಡೆ ತೂರಾಡುತ್ತಿದ್ದಾರೆ. ಶ್ರೀಕೃಷ್ಣಮಠದ ರಥಬೀದಿ, ಮಠದ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳ ಮುಂದೆ ಬಿದ್ದು ಹೊರಳಾಡುತ್ತಿರುವ ದೃಶ್ಯಗಳು ಕಾಣಸಿಗುತ್ತಿವೆ.‌

ಲಾಕ್‌ಡೌನ್‌ ಜಾರಿಯಾದ ಬಳಿಕ ಮದ್ಯ ಮಾರಾಟಕ್ಕೆ ನಿಷೇಧವಿದ್ದ ಪರಿಣಾಮ ನಗರದಲ್ಲಿ ಕುಡುಕರು ಕಣ್ಣಿಗೆ ಬಿದ್ದಿರಲಿಲ್ಲ. ಈಗ ಮತ್ತೆ ಮದ್ಯ ಮಾರಾಟ ಆರಂಭವಾಗಿರುವುದರಿಂದ ವ್ಯಸನಿಗಳ ಹಾವಳಿ ಶುರುವಾಗಿದೆ. ಬೆಳಿಗ್ಗೆಯೇ ಮದ್ಯಸೇವಿಸಿ ನಗರದಲ್ಲಿ ತೂರಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.

ಉಡುಪಿಯಲ್ಲಿ ನೂರಾರು ನಿರ್ಗತಿಕರು, ಭಿಕ್ಷುಕರಿದ್ದು ಇವರಲ್ಲಿ ಬಹುತೇಕರು ಮದ್ಯಕ್ಕೆ ದಾಸರಾದವರಿದ್ದಾರೆ. ಲಾಕ್‌ಡೌನ್‌ಗೂ ಮುನ್ನ ಪ್ರತಿದಿನ ಭಿಕ್ಷೆಬೇಡಿ, ಸಣ್ಣಪುಟ್ಟ ಕೆಲಸ ಮಾಡಿ ಬಂದ ಹಣದಲ್ಲಿ ಮದ್ಯಸೇವಿಸಿ ಉದ್ಯಾನ, ಪಾದಚಾರಿ ಮಾರ್ಗ, ನಿರ್ಮಾಣ ಹಂತದ ಕಟ್ಟಡಗಳು ಹಾಗೂ ಟೆಂಟ್, ಶೆಡ್‌ಗಳಲ್ಲಿ ಮಲಗುತ್ತಿದ್ದರು.

ಲಾಕ್‌ಡೌನ್ ಬಳಿಕ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿದ್ದರಿಂದ ಇವರೆಲ್ಲರೂ ತಾತ್ಕಾಲಿಕ ನಿರಾಶ್ರಿತರ ಕೇಂದ್ರ, ಬೀಡಿನಗುಡ್ಡೆ ನಿರ್ಜನ ಪ್ರದೇಶ ಹಾಗೂ ಶೆಡ್‌ಗಳಲ್ಲಿ ಉಳಿದುಕೊಂಡಿದ್ದರು. ಕೆಲವು ಸಂಘ ಸಂಸ್ಥೆಗಳು ನಿತ್ಯ ಇವರಿಗೆ ಊಟದ ವ್ಯವಸ್ಥೆ ಮಾಡಿದ್ದವು.

ಈಗ ಮದ್ಯ ಮಾರಾಟ ಆರಂಭವಾಗಿರುವುದರಿಂದ ಮತ್ತೆ ವ್ಯಸನ ಶುರುಮಾಡಿದ್ದಾರೆ. ಅಂಗಡಿ ಮುಂಗಟ್ಟುಗಳು ಸಹ ತೆರೆದಿರುವುದರಿಂದ ಭಿಕ್ಷೆಯೂ ಸಿಗುತ್ತಿದ್ದು ಮದ್ಯ ಸೇವಿಸುತ್ತಿದ್ದಾರೆ ಎನ್ನುತ್ತಾರೆ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು.

ಲಾಕ್‌ಡೌನ್ ಅವಧಿಯಲ್ಲಿ ರಥಬೀದಿಯಲ್ಲಿ ಕುಡುಕರು ಕಾಣಸಿಗುತ್ತಿರಲಿಲ್ಲ. ಎರಡು ದಿನಗಳಿಂದ ಹಾವಳಿ ಶುರುವಾಗಿದೆ. ಕುಡಿದುಪಾದಚಾರಿ ಮಾರ್ಗಗಳಲ್ಲೇ ಮಲಗುತ್ತಿದ್ದು, ಸಾರ್ವಜನಿಕರಿಗೆ, ಭಕ್ತರಿಗೆ ಕಿರಿಕಿರಿ ಉಂಟಾಗುತ್ತಿದೆ.

ಸುಮ್ಮನೆ ಬೊಬ್ಬಿಡುವುದು, ಅಶ್ಲೀಲ ಪದಗಳಿಂದ ನಿಂದಿಸುವುದು, ಹೊಡೆದಾಟ ಮಾಡಿಕೊಳ್ಳುತ್ತಿದ್ದಾರೆ. ಮಲಗಿದ್ದಲ್ಲಿಯೇ ವಾಂತಿ, ಮಲ–ಮೂತ್ರ ಮಾಡಿಕೊಂಡು ಸುತ್ತಲಿನ ಪರಿಸರ ಹಾಳು ಮಾಡುತ್ತಿದ್ದಾರೆ. ಎಲ್ಲಿ ಬೇಕೆಂದರಲ್ಲಿ ಉಗಿಯುತ್ತಿದ್ದು, ರೋಗ ಹರಡುವ ಭೀತಿ ಎದುರಾಗಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸುತ್ತಾರೆ ಸಮಿತಿಯ ತಾರಾನಾಥ್ ಮೇಸ್ತ ಶಿರೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT