ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಗಡಿಯಲ್ಲಿ ಗೋವಾ ಮತ್ಸ್ಯಬೇಟೆ: ಆರೋಪ

ಕರಾವಳಿ ಕಾವಲು ಪಡೆ ನಿರಂತರ ಗಸ್ತು: ಹೊರ ರಾಜ್ಯದ ಬೋಟ್‌ಗಳಿಗೆ ಅವಕಾಶವಿಲ್ಲ: ಎಸ್‌ಪಿ ಚೇತನ್‌
Last Updated 27 ಏಪ್ರಿಲ್ 2020, 14:47 IST
ಅಕ್ಷರ ಗಾತ್ರ

ಉಡುಪಿ: ನೆರೆ ಗೋವಾ ರಾಜ್ಯದ ಮೀನುಗಾರರು ರಾಜ್ಯದ ಗಡಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂದು ಮಲ್ಪೆಯ ಮೀನುಗಾರರು ಆರೋಪಿಸಿದ್ದಾರೆ.

ಮತ್ಸೋದ್ಯಮ ಪೂರ್ಣ ಪ್ರಮಾಣದಲ್ಲಿ ಆರಂಭವಾಗದೆ ಕರಾವಳಿಯ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಮಯದಲ್ಲಿ ರಾಜ್ಯದ ಗಡಿಯಲ್ಲಿ ಗೋವಾ ಮೀನುಗಾರಿಕೆ ನಡೆಸುವುದು ಖಂಡನೀಯ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಗಡಿಯಲ್ಲಿ ಮೀನುಗಾರಿಕೆ ನಡೆಸಿ ರಾಜ್ಯದ ಮಾರುಕಟ್ಟೆಗೆ ಮೀನು ಸರಬರಾಜು ಮಾಡಲಾಗುತ್ತಿದೆ. ಇದರಿಂದ ರಾಜ್ಯದ ಮೀನುಗಾರರಿಗೆ ನಷ್ಟವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಮೀನುಗಾರರ ಆರೋಪ ಕುರಿತು ಪ್ರತಿಕ್ರಿಯೆ ನೀಡಿದ ಕರಾವಳಿ ಕಾವಲು ಪಡೆಯ ಎಸ್‌ಪಿ ಆರ್‌.ಚೇತನ್‌, ‘ಕರಾವಳಿಯ ಕಾವಲು ಪಡೆ ರಾಜ್ಯದ ಗಡಿಯಲ್ಲಿ ನಿರಂತರ ಗಸ್ತು ತಿರುಗುತ್ತಿದೆ. ಇದುವರೆಗೂ ರಾಜ್ಯದ ಗಡಿಯಲ್ಲಿ ನೆರೆಯ ಗೋವಾ ರಾಜ್ಯದ ಬೋಟ್‌ಗಳು ಮೀನುಗಾರಿಕೆ ನಡೆಸಿದ್ದು ಕಂಡುಬಂದಿಲ್ಲ. ಮೀನುಗಾರರು ಈ ಬಗ್ಗೆ ದೂರುಗಳನ್ನೂ ನೀಡಿಲ್ಲ ಎಂದು ತಿಳಿಸಿದರು.

ಮೀನುಗಾರಿಕೆ ಇಲಾಖೆಯ ಅಧಿಕಾರಿಗಳ ಜತೆ ಕರಾವಳಿ ಕಾವಲು ಪಡೆಯು ನಿರಂತರ ಸಂಪರ್ಕದಲ್ಲಿದೆ. ಅಕ್ರಮವಾಗಿ ಮೀನುಗಾರಿಕೆ ನಡೆಯುತ್ತಿರುವುದು ಕಂಡುಬಂದರೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

12 ನಾಟಿಕಲ್‌ ಮೈಲು ಹೊರಗೆ ಮೀನುಗಾರಿಕೆ ಮಾಡಲು ಅವಕಾಶವಿದೆ. ಆದರೆ, ರಾಜ್ಯದ ಗಡಿಯೊಳಗೆ ಅನ್ಯ ರಾಜ್ಯದ ಮೀನುಗಾರರು ನುಸುಳಿ ಅಕ್ರಮವಾಗಿ ಮೀನುಗಾರಿಕೆ ಮಾಡುವುದು ನಿಷಿದ್ಧ. ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಸ್‌ಪಿ ತಿಳಿಸಿದರು.

ದರ ದುಬಾರಿ:ಕೇಂದ್ರ ಸರ್ಕಾರ ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಸಿದ್ದು, ಮೀನುಗಾರಿಕೆಗೆ ಅವಕಾಶ ನೀಡಿದೆ. ಅದರಂತೆ, ಜಿಲ್ಲೆಯಲ್ಲಿ ನಾಡದೋಣಿಗಳು ಮಾತ್ರ ಮೀನುಗಾರಿಕೆಯಲ್ಲಿ ತೊಡಗಿವೆ. ಗ್ರಾಹಕರ ಬೇಡಿಕೆಗೆ ತಕ್ಕಷ್ಟು ಮೀನುಗಳು ಸಿಗುತ್ತಿಲ್ಲವಾದ್ದರಿಂದ ಮಾರುಕಟ್ಟೆಯಲ್ಲಿ ಮೀನಿನ ದರ ಗಗನಕ್ಕೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT