ಭಾನುವಾರ, ಆಗಸ್ಟ್ 1, 2021
26 °C
ಮೀನುಗಾರಿಕಾ ಋತು ಆರಂಭವಾದರೂ ಕಡಲಿಗಿಳಿಯದ ಮೀನುಗಾರರು

ಉಡುಪಿ | ಮೀನುಗಾರಿಕೆಗೆ ಕಾಡುತ್ತಿದೆ ಸೀಲ್‌ಡೌನ್ ಭಯ‌

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕರಾವಳಿಯಲ್ಲಿ ಆ.1ರಿಂದ ಮೀನುಗಾರಿಕಾ ಋತು ಆರಂಭವಾಗಿದ್ದು, ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶವಿದ್ದರೂ ಕಡಲಿಗಿಳಿಯಲು ಮೀನುಗಾರರು ಮನಸ್ಸು ಮಾಡುತ್ತಿಲ್ಲ. ಕೊರೊನಾ ಆತಂಕ ಹಾಗೂ ಕೂಲಿ ಕಾರ್ಮಿಕರ ಅಲಭ್ಯತೆ ಮತ್ಸ್ಯೋದ್ಯಮವನ್ನು ಮತ್ತೆ ಸಂಕಷ್ಟಕ್ಕೆ ಸಿಲುಕಿಸಿದೆ.

ಕಾಡುತ್ತಿದೆ ಸೀಲ್‌ಡೌನ್ ಭಯ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ 1,700ಕ್ಕೂ ಹೆಚ್ಚು ಯಾಂತ್ರೀಕೃತ ಬೋಟ್‌ಗಳಿವೆ. ಮೀನುಗಾರಿಕೆಯನ್ನು ನಂಬಿ ಸಾವಿರಾರು ಬಂದಿ ಬದುಕು ಕಟ್ಟಿಕೊಡಿದ್ದಾರೆ. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ಸಾವಿರಾರು ಕಾರ್ಮಿಕರು ದುಡಿಯುತ್ತಿದ್ದಾರೆ. 

ಮೀನುಗಾರಿಕಾ ಋತು ಆರಂಭವಾದರೆ ಬಂದರಿನಲ್ಲಿ ವಹಿವಾಟು ಹೆಚ್ಚಾಗಿ ನಿತ್ಯ ಮೀನಿನ ಏಲಂ ಹಾಗೂ ಹೊರ ರಾಜ್ಯಗಳಿಗೆ ರಫ್ತು ಆರಂಭವಾಗಲಿದೆ. ಈ ಸಂದರ್ಭ ಬಂದರಿನಲ್ಲಿ ಮೀನುಗಾರರಿಗೆ ಅಥವಾ ಕೂಲಿ ಕಾರ್ಮಿಕರಿಗೆ ಸೋಂಕು ತಗುಲಿದರೆ ಇಡೀ ಬಂದರು ಸೀಲ್‌ಡೌನ್ ಆಗಬಹುದು ಎಂಬ ಭಯ ಮೀನುಗಾರರನ್ನು ಕಾಡುತ್ತಿದೆ.

ಬಂದರು ಸೀಲ್‌ಡೌನ್ ಆದರೆ ಆರ್ಥಿಕ ಹೊಡೆತ ಬೀಳಲಿದೆ. ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ಮೀನುಗಾರರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಮೀನುಗಾರರ ಸಂಘದ ಮುಖಂಡರು.

ಯಾಂತ್ರೀಕೃತ ಮೀನುಗಾರಿಕೆಯನ್ನು ಯಾವಾಗ ಹೇಗೆ ಆರಂಭಿಸಬೇಕು ಎಂದು ಶೀಘ್ರವೇ ಮೀನುಗಾರಿಕಾ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಲಾಗುವುದು. ಮೀನುಗಾರಿಕಾ ಸಂಘಗಳ ಮುಖಂಡರು ಕೂಡ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ತಿಳಿಸಿದರು.

ಕಳೆದೆರಡು ವರ್ಷಗಳಿಂದ ಮತ್ಸ್ಯೋದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕೊರೊನಾ ಲಾಕ್‌ಡೌನ್ ನಂತರ ಬೋಟ್‌ ಮಾಲೀಕರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಮೀನುಗಾರಿಕೆ ಅವಲಂಬಿತ ಕೈಗಾರಿಕೆಗಳು ನಷ್ಟದ ಹಾದಿ ಹಿಡಿದಿವೆ. ಕೆಲಸವಿಲ್ಲದೆ ಕೂಲಿ ಕಾರ್ಮಿಕರು ಸ್ವಂತ ಊರುಗಳಿಗೆ ಮರಳಿದ್ದಾರೆ. ಈ ವರ್ಷ ಸರಿಯಾಗಿ ಮೀನುಗಾರಿಕೆಯೇ ನಡೆದಿಲ್ಲ ಎಂದು ಕೃಷ್ಣ ಸುವರ್ಣ ಬೇಸರಪಟ್ಟರು.

ಯಾಂತ್ರೀಕೃತ ಮೀನುಗಾರಿಕೆ ಆರಂಭವಾದರೂ ಕಡಲಿಗಿಳಿಯಬೇಕೆ ಬೇಡವೆ ಎಂಬ ಗೊಂದಲದಲ್ಲಿದ್ದೇವೆ. ಸರ್ಕಾರದಿಂದ ನಿರೀಕ್ಷಿತ ನೆರವು ಕೂಡ ಸಿಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು