ಸೋಮವಾರ, ಜನವರಿ 27, 2020
24 °C
ಭಾರತದಲ್ಲಿ ಅಳಿವಿನಂಚಿನಲ್ಲಿರುವ ಅಪರೂಪದ ಮರ

ಹೂಬಿಟ್ಟ ಕಾಡುಶ್ರೀತಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ತನ್ನ ಜೀವಿತಾವಧಿಯ 50ರಿಂದ 60 ವರ್ಷಕ್ಕೆ ಹೂಬಿಟ್ಟು ಕ್ರಮೇಣ ಸಾಯುವ ಅಪರೂಪದ, ಅಳಿವಿನಂಚಿನಲ್ಲಿರುವ ವೃಕ್ಷ ಸಂಕುಲಕ್ಕೆ ಸೇರಿದ ‘ಕಾಡುಶ್ರೀತಾಳೆ’ (ಗಂಡುತಾಳೆ ಮರ) ಮರವೊಂದು ಆತ್ರಾಡಿಯ ಪರೀಕ ಎಂಬಲ್ಲಿ ಹೂ ಬಿಟ್ಟು ಕಂಗೊಳಿಸುತ್ತಿದೆ. ತನ್ನ ಹೂವಿನ ಸೊಬಗಿನಿಂದಾಗಿ ಒಂಟಿ ಮರ ಜನರನ್ನು ಆಕರ್ಷಿಸುತ್ತಿದೆ.

ಪ್ರಾಚ್ಯ ವೃಕ್ಷಗಳಲ್ಲಿ ಒಂದಾಗಿರುವ ಶ್ರೀತಾಳೆ, ಪರ್ಣಕುಟೀರವಾಗಿ, ಮಳೆಗಾಳಿಗೆ ತತ್ರವಾಗಿ, ಕೃಷಿ ಕೆಲಸ ನಡೆಸಲು ಗೊರಂಬಾಗಿ ರಕ್ಷಣೆ ನೀಡಿದೆ. ಅಲ್ಲದೆ, ಇದರ ಗರಿಗಳನ್ನು ಗ್ರಂಥ, ಸಾಹಿತ್ಯಗಳನ್ನು ಬರೆಯಲು ಉಪಯೋಗಿಸಲಾಗುತ್ತಿತ್ತು. ಆದರೆ ಇಂದು ಹಸಿರು, ಹಸಿವು ಮತ್ತು ಅಕ್ಷರ ಪ್ರಪಂಚದ ಪ್ರತೀಕವಾದ ಈ ವೃಕ್ಷ ವಿಶ್ವದ ಹಸಿರು ಪಟ್ಟಿಯಿಂದ ಜಾರಿ ಕೆಂಪು ಪಟ್ಟಿಗೆ ಸೇರಿಕೊಂಡಿದೆ.

ಈ ವೃಕ್ಷಕ್ಕೆ ಸಂಸ್ಕೃತದಲ್ಲಿ ಅವಿನಾಶಿ, ತುಳುವಿನಲ್ಲಿ ಪಣೋಲಿದ ಮರ, ಇಂಡೋನೇಷ್ಯಾದಲ್ಲಿ ಲೊಂಟಾರ, ಕೇರಳದಲ್ಲಿ ಕೊಡಪಣ-ಮರ ಹಾಗೂ ಸಾಮಾನ್ಯರು ಇದನ್ನು ಸೀತಾಳೆ ಮರ ಎಂದು ಕರೆಯುತ್ತಾರೆ. ಇದರ ಸಸ್ಯನಾಮ ಕೊರಿಫಾ ಅಂಬ್ರಕುಲಿಫೆರಾ. ಇದರ ಇನ್ನೊಂದು ವಿಶೇಷ ಏನೆಂದರೆ, ಅರಳಿದ ಹೂವು ಎಂಟು ತಿಂಗಳ ಕಾಲ ಮರದಲ್ಲಿರುತ್ತದೆ. ನಂತರ ಕಾಯಿ ಬಿಡುತ್ತದೆ. ಕ್ರಮೇಣ ಈ ಮರ ಸಾಯುತ್ತದೆ. ಒಂದು ಮರದಲ್ಲಿ ಸುಮಾರು 2 ಟನ್‌ ಬೀಜಗಳು ಸಿಗುತ್ತವೆ.

‘ಪ್ರಸ್ತುತ ಪರೀಕದಲ್ಲಿ ಹೂ ಬಿಟ್ಟಿರುವ ಕಾಡುಶ್ರೀತಾಳೆಯ ಸಂರಕ್ಷಣೆ ಮಾಡಿ, ಅದರ ಬೀಜಸಂಗ್ರಹಿಸಿ ತಳಿಯ ಪುನರುತ್ಪತ್ತಿ ಮಾಡುವ ಕಾರ್ಯ ಆಗಬೇಕಿದೆ’ ಎನ್ನುತ್ತಾರೆ ಉಡುಪಿ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ಎಸ್‌.ಎ.ಕೃಷ್ಣಯ್ಯ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು