ಸೋಮವಾರ, ಅಕ್ಟೋಬರ್ 26, 2020
23 °C
ಮನೆ ಸಂಪೂರ್ಣ ಹಾನಿಗೆ ₹ 5 ಲಕ್ಷ ಪರಿಹಾರ: ಶಾಸಕ ರಘುಪತಿ ಭಟ್‌

ನೆರೆ ಸಂತ್ರಸ್ತರಿಗೆ ಹಳೆ ಮಾರ್ಗಸೂಚಿಯಂತೆ ಗರಿಷ್ಠ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ರಾಜ್ಯದಲ್ಲಿ ಅತಿವೃಷ್ಟಿ, ಪ್ರವಾಹ ಪರಿಸ್ಥಿತಿ ಮುಂದುವರಿದಿರುವುದರಿಂದ ಸೆಪ್ಟೆಂಬರ್‌ನಲ್ಲಿ ನೆರೆ ಹಾವಳಿಯಿಂದ ಹಾನಿಗೀಡಾದ ಮನೆಗಳ ಪುನರ್‌ ನಿರ್ಮಾಣಕ್ಕಾಗಿ, ದುರಸ್ತಿ ಕಾರ್ಯಕ್ಕೆ, ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಆ.7, 2020 ಆದೇಶದನ್ವಯ ಪರಿಹಾರ ನೀಡಲಾಗುವುದು ಎಂದು ಸರ್ಕಾರ ಆದೇಶ ಹೊರಡಿಸಿದೆ.

‌ಪ್ರವಾಹ ಬಾಧಿತ ಸಂತ್ರಸ್ತರ ಬಟ್ಟೆ–ಬರೆ ದಿನಬಳಕೆಯ ವಸ್ತುಗಳ ಖರೀದಿಗೆ ಕೇಂದ್ರಸರ್ಕಾರ ಎಸ್‌ಡಿಆರ್‌ಎಫ್‌ ಹಾಗೂ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ಪ್ರತಿ ಕುಟುಂಬಕ್ಕೆ ₹ 3,800 ನಿಗದಿಪಡಿಸಿತ್ತು. ಇದರ ಜತೆಗೆ ರಾಜ್ಯ ಸರ್ಕಾರ ₹ 6,200 ಸೇರಿಸಿ ಒಟ್ಟು 10,000 ಕ್ಕೇರಿಸಿದೆ.

ನೆರೆಯಿಂದ ಶೇ 75ಕ್ಕಿಂತ ಹೆಚ್ಚು ಅಥವಾ ಪೂರ್ಣ ಮನೆ ಕುಸಿದಿದ್ದರೆ ಕೇಂದ್ರದ ಮಾರ್ಗಸೂಚಿ ದರ ₹ 95,100 ಬದಲಾಗಿ ಸಂತ್ರಸ್ತರಿಗೆ ₹ 5 ಲಕ್ಷ ಸಿಗಲಿದೆ. ಶೇ 25 ರಿಂದ 75ರಷ್ಟು ಹಾನಿಯಾಗಿದ್ದರೆ ಮನೆ ಕೆಡವಿ ಹೊಸದಾಗಿ ನಿರ್ಮಿಸಲು ₹ 5 ಲಕ್ಷ ದೊರೆಯಲಿದೆ. ಶೇ 25 ರಿಂದ 75ರಷ್ಟು ಭಾಗಶಃ ಹಾನಿಗೆ ₹ 3 ಲಕ್ಷ ಹಾಗೂ ಶೇ 15 ರಿಂದ 25ರಷ್ಟು ಅಲ್ಪಸ್ವಲ್ಪ ಪ್ರಮಾಣದ ಹಾನಿಯಾಗಿದ್ದರೆ ₹ 50,000 ಸಿಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.‌

ಈಚೆಗೆ ಉಡುಪಿಯಲ್ಲಿ ಸುರಿದ ಮಹಾಮಳೆಗೆ ನೂರಾರು ಮನೆಗಳಿಗೆ ಹಾನಿಯಾಗಿತ್ತು. ಸರ್ಕಾರದ ನೆರೆ ಪರಿಹಾರ ಮಾರ್ಗಸೂಚಿ ಆಗಸ್ಟ್‌ ತಿಂಗಳಿಗೆ ಅಂತ್ಯವಾಗಿದ್ದರಿಂದ, ಸೆಪ್ಟೆಂಬರ್‌ನಲ್ಲಿ ನೆರೆಹಾನಿಯಿಂದ ಮನೆ ಕಳೆದುಕೊಂಡವರಿಗೆ ಗರಿಷ್ಠ ₹ 95,100 ಮಾತ್ರ ಪರಿಹಾರ ಸಿಗುವಂತಾಗಿತ್ತು. ಹಳೆಯ ನೆರೆ ಪರಿಹಾರ ಆದೇಶವನ್ನು ವಿಸ್ತರಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕಂದಾಯ ಸಚಿವರಿಗೆ ಮಾಡಿದ ಮನವಿಗೆ ಸ್ಪಂದನ ಸಿಕ್ಕಿದ್ದು, ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಗರಿಷ್ಠ ₹ 5ಲಕ್ಷದವವರೆಗೆ ಪರಿಹಾರ ಸಿಗಲಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.