ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರ್ಕೂರು: ಇಂದು ಅಷ್ಟಬಂಧ ಪ್ರತಿಷ್ಠೆ

ಮಹಾಗಣಪತಿ ಶಿಲಾಮಯ ದೇವಸ್ಥಾನ, ನಾಳೆ ಬ್ರಹ್ಮ ಕಲಶೋತ್ಸವ
Published 27 ಮಾರ್ಚ್ 2024, 6:05 IST
Last Updated 27 ಮಾರ್ಚ್ 2024, 6:05 IST
ಅಕ್ಷರ ಗಾತ್ರ

ಕುಂದಾಪುರ: ತಾಲ್ಲೂಕಿನ ಹರ್ಕೂರು ಗ್ರಾಮದ ನೈಸರ್ಗದ ಮಡಿಲಲ್ಲಿ ಮೈತಳೆದು ನಿಂತಿರುವ ನೂತನ ಶಿಲಾಮಯ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ, ಬ್ರಹ್ಮಕಲಶೋತ್ಸವ ಹಾಗೂ ಅನ್ನಸಂತರ್ಪಣೆಯ ಕಾರ್ಯಕ್ರಮಗಳಿಗೆ ಭರದ ಸಿದ್ಧತೆಗಳು ನಡೆಯುತ್ತಿವೆ.

ನೂರಾರು ವರ್ಷಗಳಿಂದ ಹರ್ಕೂರು ಸುತ್ತ-ಮುತ್ತಲಿನ ಗ್ರಾಮಸ್ಥರಿಗೆ ಮಹಾಗಣಪತಿ ಸಾನ್ನಿಧ್ಯದ ಬಗ್ಗೆ ಬಲವಾದ ನಂಬಿಕೆ ಇದೆ. ಶಿಲೆ ಕಲ್ಲಿನಿಂದ ರಚಿಸಿದ್ದ ದೇವಾಲಯದ ಜೀರ್ಣೋದ್ಧಾರದ ಸಂಕಲ್ಪ ಮಾಡಿದ್ದ ಗ್ರಾಮಸ್ಥರು, ಪ್ರಶ್ನಾಚಿಂತನೆ ನಡೆಸಿದ್ದರು. ಪ್ರಶ್ನೆಯಲ್ಲಿ ಕಂಡು ಬಂದ ಅಂಶಗಳಿಗೆ ಪ್ರಾಯಶ್ಚಿತ್ತ ಮಾಡಿಕೊಂಡು, ಶಿಲಾಮಯ ಗರ್ಭಗುಡಿ ಹಾಗೂ ಸುತ್ತಪೌಳಿಯ ದೇವಸ್ಥಾನ ರಚನೆಗೆ ನಿರ್ಧರಿಸಿದ್ದರು.

ಅಂದಾಜು ₹2 ಕೋಟಿ ವೆಚ್ಚದಲ್ಲಿ ಪುನರ್‌ ನಿರ್ಮಾಣವಾಗುತ್ತಿರುವ ದೇವಸ್ಥಾನದ ಶಿಲಾಮಯ ಗರ್ಭಗುಡಿಯನ್ನು ಜೆಎನ್‌ಎಸ್‌ ಕನ್‌ಸ್ಟ್ರಕ್ಷನ್ ಕಂಪನಿಯ ಆಡಳಿತ ನಿರ್ದೇಶಕ ಎಚ್‌.ಜಯಶೀಲ ಶೆಟ್ಟಿ ನಿರ್ಮಿಸಿ ಕೊಟ್ಟಿದ್ದಾರೆ. ದೇವಸ್ಥಾನದ ಹೆಬ್ಬಾಗಿಲು ನಿರ್ಮಾಣಕ್ಕೆ ಹೈದ್ರಾಬಾದ್‌ ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ನೆರವು ನೀಡಿದ್ದಾರೆ. ಗ್ರಾಮಸ್ಥರು ಹಾಗೂ ಭಕ್ತರು ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ.

ಜೀರ್ಣೋದ್ಧಾರ ಸಮಿತಿಗೆ ಎಚ್‌.ಜಯಶೀಲ ಶೆಟ್ಟಿ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹರ್ಕೂರ ಮಂಜಯ್ಯ ಶೆಟ್ಟಿ ಕಾರ್ಯಧ್ಯಕ್ಷರಾಗಿ, ಪದ್ಮನಾಭ ಅಡಿಗ ಕಾರ್ಯದರ್ಶಿಯಾಗಿ ಹಾಗೂ ಶಶಿಧರ ಶೆಟ್ಟಿ ಸಾಲಗದ್ದೆ ಕೋಶಾಧಿಕಾರಿಯಾಗಿದ್ದಾರೆ.

ಧಾರ್ಮಿಕ ಕಾರ್ಯಕ್ರಮ: ಮಂಗಳವಾರದಿಂದ ಆರಂಭವಾಗಿರುವ ಕಾರ್ಯಕ್ರಮ ಮಾ.28ರವರೆಗೆ ನಡೆಯಲಿದೆ. ಮಾ.27ರ ಬೆಳಿಗ್ಗೆ 8.35ರ ವೃಷಭ ಲಗ್ನದಲ್ಲಿ ಗಣಪತಿ ದೇವರ ಅಷ್ಟಬಂಧ ಪ್ರತಿಷ್ಠೆ, ಜೀವಾವಾಹನಂ, ಜೀವ ಕುಂಭಾಭಿಷೇಕ, ಪ್ರತಿಷ್ಠಾ ಕಲಾಶಾಭಿಷೇಕ, ಶಾಂತಿ ಹೋಮ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ, ಸಂಜೆ 4ರಿಂದ ಬ್ರಹ್ಮ ಕಲಶ ಮಂಡಲ ರಚನೆ, ಬ್ರಹ್ಮ ಕಲಶ ಸ್ಥಾಪನೆ, ಅಧಿವಾಸ ಹೋಮ, ಮಂಗಳಾರತಿ, ಅಷ್ಟಾವಧಾನ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

ಮಾ.28ರಂದು ಬೆಳಿಗ್ಗೆ 7 ಗಂಟೆಗೆ ಬ್ರಹ್ಮ ಕಲಾಶಾಭಿಷೇಕ ನಡೆಯಲಿದೆ. ನಂತರ ಮಹಾಪೂಜೆ, ಮಹಾ ಮಂಗಳಾರತಿ, ಮಹಾ ಮಂತ್ರಾಕ್ಷತೆ, ಋತ್ವಿಜರ ಆಶೀರ್ವಚನ, ತೀರ್ಥಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಚ್‌.ಜಯಶೀಲ ಶೆಟ್ಟಿ ವಹಿಸಲಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಗುರುರಾಜ್ ಗಂಟಿಹೊಳೆ, ಎ.ಕಿರಣ್‌ಕುಮಾರ ಕೊಡ್ಗಿ, ಮಾಜಿ ಶಾಸಕರಾದ ಬಸ್ರೂರು ಅಪ್ಪಣ್ಣ ಹೆಗ್ಡೆ, ಕೆ.ಗೋಪಾಲ ಪೂಜಾರಿ, ಬಿ.ಎಂ.ಸುಕುಮಾರ ಶೆಟ್ಟಿ, ಪ್ರಮುಖರಾದ ಕೆ.ಜಯಪ್ರಕಾಶ್ ಹೆಗ್ಡೆ, ಕೋಟ ಶ್ರೀನಿವಾಸ ಪೂಜಾರಿ, ಕೃಷ್ಣಮೂರ್ತಿ ಮಂಜ, ಕೃಷ್ಣಪ್ರಸಾದ್ ಅಡ್ಯಂತಾಯ, ಮಂಜುನಾಥ ರೈ, ಕಿಶೋರ ಹೆಗ್ಡೆ ಕೈಲ್ಕೆರೆ, ರಾಜೇಶ್ ಎನ್ ದೇವಾಡಿಗ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2ರಿಂದ ಶೃಂಗೇರಿ ಶಾರದಾ ಪೀಠದ ಪ್ರಾತೀಯ ಧರ್ಮಾಧಿಕಾರಿ ಬಡಾಕೆರೆ ಲೋಕೇಶ್ ಅಡಿಗ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಸಂಜೆ 6 ಕ್ಕೆ ರಂಗಪೂಜೆ, ಮಹಾ ಮಂಗಳಾರತಿ ನಡೆಯಲಿದೆ. ವೇದಮೂರ್ತಿ ಹೃಷಿಕೇಶ ಬಾಯರಿ ಹಾಗೂ ವೇದಮೂರ್ತಿ ಚನ್ನಕೇಶವ ಉಪಾಧ್ಯ ಬಾರಂದಾಡಿ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದಾರೆ.

ಕುಂದಾಪುರ ತಾಲ್ಲೂಕಿನ ಹರ್ಕೂರು ಗ್ರಾಮದಲ್ಲಿ ಲೋಕಾರ್ಪಣೆಗೆ ಸಿದ್ಧವಾಗಿರುವ ಹರ್ಕೂರು ಶ್ರೀ ಮಹಾಗಣಪತಿ ಶಿಲಾಮಯ ದೇವಸ್ಥಾನ

ಕುಂದಾಪುರ ತಾಲ್ಲೂಕಿನ ಹರ್ಕೂರು ಗ್ರಾಮದಲ್ಲಿ ಲೋಕಾರ್ಪಣೆಗೆ ಸಿದ್ಧವಾಗಿರುವ ಹರ್ಕೂರು ಶ್ರೀ ಮಹಾಗಣಪತಿ ಶಿಲಾಮಯ ದೇವಸ್ಥಾನ

ಮಾ.27ರಂದು ವಿವಿಧ ಭಜನಾ ತಂಡಗಳಿಂದ ಭಜನಾ ಕಮ್ಮಟ, ಮಾ.28 ರಂದು ಮಧ್ಯಾಹ್ನ 3ರಿಂದ ಪೆರ್ಡೂರು ಅನಂತಪದ್ಮನಾಭ ಯಕ್ಷಗಾನ ಮಂಡಳಿಯ ಕಲಾವಿದರಿಂದ ‘ಮಾಯಾ ಬಜಾರ್’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

₹2 ಕೋಟಿ ವೆಚ್ಚದಲ್ಲಿ ದೇವಾಲಯದ ಪುನರ್ ನಿರ್ಮಾಣ ಪ್ರಕೃತಿಯ ಮಡಿಲಲ್ಲಿ ಇರುವ ದೇವಸ್ಥಾನ 28ಕ್ಕೆ ಮಾಯಾ ಬಜಾರ್ ಯಕ್ಷಗಾನ ಪ್ರದರ್ಶನ

ಜಯಶೀಲ ಶೆಟ್ಟಿಯವರು ಶಿಲಾಮಯ ಗರ್ಭಗುಡಿಯ ನಿರ್ಮಾಣ ಕಾರ್ಯದ ಹೊಣೆಯ ಭರವಸೆ ವ್ಯಕ್ತಪಡಿಸಿದ್ದರಿಂದ ಜೀರ್ಣೋದ್ಧಾರ ಕಾರ್ಯಗಳು ಹೂವಿನ ಭಾರದಂತೆ ಇಳಿದು ಹೋಗಿವೆ.

-ಹರ್ಕೂರು ಮಂಜಯ್ಯ ಶೆಟ್ಟಿ ಕಾರ್ಯಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT