ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಸಾಂಕ್ರಾಮಿಕ ಕಾಯಿಲೆಗಳಷ್ಟೆ ವ್ಯಸನವೂ ಮಾರಕ -ಡಾ.ನಾಗಭೂಷಣ ಉಡುಪ

ಆರೋಗ್ಯ ತಪಾಸಣಾ ಶಿಬಿರ
Last Updated 2 ಆಗಸ್ಟ್ 2021, 14:40 IST
ಅಕ್ಷರ ಗಾತ್ರ

ಉಡುಪಿ: ಯುವಜನತೆ ಆರೋಗ್ಯದ ಮಹತ್ವ ಮರೆತು ದುಶ್ಚಟಗಳಿಗೆ ಬಲಿಯಾಗಿ ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳುತ್ತಿರುವುದು ದುರಂತ. ಸಾಂಕ್ರಾಮಿಕ ಕಾಯಿಲೆಯಷ್ಟೇ ಮಾರಕವಾಗಿರುವ ವ್ಯಸನಗಳ ಬಗ್ಗೆ ಸಾಮಾಜಿಕ ಪ್ರಜ್ಞೆ ಮೂಡುವ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದು ಡಿಎಚ್‌ಒ ಡಾ.ನಾಗಭೂಷಣ ಉಡುಪ ಹೇಳಿದರು.

ಮಲ್ಪೆಯ ಮೀನುಗಾರರ ಸಂಘದ ಸಭಾಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ವೇಕ್ಷಣಾ ಘಟಕ ಹಾಗೂ ಮೀನುಗಾರಿಕೆ ಇಲಾಖೆ ಮತ್ತು ಮೀನುಗಾರರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಮೀನುಗಾರರಿಗೆ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮೀನುಗಾರರು ದುಶ್ಚಟಗಳಿಗೆ ಬಲಿಯಾಗದೇ ವ್ಯಸನ ಮುಕ್ತ ಜೀವನ ನಡೆಸಬೇಕು. ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ಮಾತನಾಡಿ, ಮೀನುಗಾರರು ದೈನಂದಿನ ಕೆಲಸದ ಒತ್ತಡದ ನಡುವೆಯೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವಾಸ ಮಾಡುವ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಮಲ್ಪೆಯನ್ನು ಮಲೇರಿಯಾ, ಡೆಂಗಿ, ಕಾಲರ ಹಾಗೂ ಸಾಂಕ್ರಾಮಿಕ ಖಾಯಿಲೆ ಮುಕ್ತ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಗಣೇಶ್, ಸಹಾಯಕ ನಿರ್ದೇಶಕಿ ಸುಷ್ಮಾ, ಮಣಿಪಾಲ ಕೆಎಂಸಿ ವೈದ್ಯ ಡಾ.ಮುರುಳಿಧರ್ ಕುಲಕರ್ಣಿ, ಜಿಲ್ಲಾ ಮಲೇರಿಯಾಧಿಕಾರಿ ಡಾ. ಪ್ರಶಾಂತ ಭಟ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀರಾಮರಾವ್ ಇದ್ದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ಸ್ವಾಗತಿಸಿದರು. ಮನೋಜ್‌ಕುಮಾರ್ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT