ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡುಗು ಸಿಡಿಲಿನ ಅಬ್ಬರ: ರಸ್ತೆಗಳು ಜಲಾವೃತ

ಸಂಜೆ ಬಿರುಸಾಗಿ ಸುರಿದ ಮಳೆ; ವಿದ್ಯುತ್ ವ್ಯತ್ಯಯ
Last Updated 13 ಜೂನ್ 2019, 19:51 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಾದ್ಯಂತ ಬುಧವಾರ ವರುಣನ ಆರ್ಭಟ ಜೋರಾಗಿತ್ತು. ಮಳೆಗಾಲ ಆರಂಭದ ನಂತರ ಮೊದಲ ಬಾರಿಗೆ ಬಿರುಸಾಗಿ ಮಳೆ ಸುರಿಯಿತು. ಪರಿಣಾಮ ಮಣಿಪಾಲ ಉಡುಪಿ ರಸ್ತೆಯಲ್ಲಿ ನೀರು ತುಂಬಿ, ವಾಹನ ಸವಾರರು ಪರದಾಡಬೇಕಾಯಿತು.

ಬೆಳಿಗ್ಗೆ ತುಂತುರು ಸುರಿಯುತ್ತಿದ್ದ ಮಳೆ ಮಧ್ಯಾಹ್ನ ಕೆಲಹೊತ್ತು ಜೋರಾಗಿ ಸುರಿಯಿತು. ಬಳಿಕ ಸ್ವಲ್ಪ ಹೊತ್ತು ಬಿಡುವುಕೊಟ್ಟು ಸಂಜೆ ಮತ್ತೆ ಆರ್ಭಟಿಸಿತು. ಗುಡುಗು, ಸಿಡಿಲು, ಬಿರುಗಾಳಿಯೊಂದಿಗೆ ರಭಸವಾಗಿ ಸುರಿದ ಮಳೆಗೆ ನಾಗರಿಕರು ಬೆಚ್ಚಿಬಿದ್ದರು.

ಗಾಳಿಯ ರಭಸಕ್ಕೆ ಮರದ ರೆಂಬೆಗಳು ಮುರಿದು ಬಿದ್ದವು. ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕರೆಗಳಂತಾಗಿದ್ದವು. ಚರಂಡಿ ಉಕ್ಕಿ ಹರಿದು ಪ್ಲಾಸ್ಟಿಕ್ ಕವರ್‌ಗಳು, ಹೊಸಲು ರಸ್ತೆಮೇಲೆ ಹರಿಯಿತು.

ಕಡಲು ಪ್ರಕ್ಷುಬ್ಧ:

ಅರಬ್ಬಿಸಮುದ್ರದಲ್ಲಿ ಚಂಡಮಾರುತ ಎದ್ದಿರುವ ಪರಿಣಾಮ ಕರಾವಳಿ ಭಾಗದಲ್ಲಿ ಕಡಲು ಪ್ರಕ್ಷುಬ್ಧಗೊಂಡಿದೆ. ಮಲ್ಪೆ ಸಮುದ್ರದಲ್ಲಿ ಬುಧವಾರ ಬೆಳಿಗ್ಗೆ ಅಲೆಗಳ ಅಬ್ಬರ ಜೋರಾಗಿತ್ತು. ಅಲೆಗಳ ಹೊಡೆತಕ್ಕೆ ತೀರದ ಮರಳು ಕೊಚ್ಚಿ ಸಮುದ್ರ ಸೇರುತ್ತಿತ್ತು. ಪ್ರವಾಸಿಗರು ಕೂರಲು ಹಾಕಿದ್ದ ಬೆಂಚಿನವರೆಗೂ ಅಲೆಗಳು ನುಗ್ಗುತ್ತಿದ್ದ ದೃಶ್ಯ ಕಂಡುಬಂತು. ಸಮುದ್ರಕ್ಕಿಳಿದಂತೆ ಪ್ರವಾಸಿಗರಿಗೆ ಎಚ್ಚರಿಕೆಯ ಫಲಕ ಹಾಕಲಾಗಿದೆ. ಮಲ್ಪೆ ಸಮೀಪದ ಪಡುಕೆರೆ, ತೊಟ್ಟಂ ಭಾಗಗಳಲ್ಲಿ ಕಡಲ್ಕೊರೆತ ಬೀತಿ ಎದುರಾಗಿದೆ.

ಕರೆಂಟ್ ಕಣ್ಣಾಮುಚ್ಚಾಲೆ:

ಬುಧವಾರ ದಿನವಿಡೀ ವಿದ್ಯುತ್ ವ್ಯತ್ಯಯವಾಗುತ್ತಲೇ ಇತ್ತು. ಗುಡುಗು ಸಿಡಿಲು ಬರುತ್ತಿದ್ದಂತೆ ವಿದ್ಯುತ್ ಕಟ್ ಆಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT