ಹೆಬ್ರಿ: ಮೆಸ್ಕಾಂ ಉಪ ವಿಭಾಗ ಕಚೇರಿ ಹೆಬ್ರಿಯಲ್ಲಿ ಸೋಮವಾರ ಅಧೀಕ್ಷಕ ಎಂಜಿನಿಯರ್ ದಿನೇಶ್ ಉಪಾಧ್ಯಾಯ ಅಧ್ಯಕ್ಷತೆಯಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ ನಡೆಯಿತು.
ಹೆಬ್ರಿ, ಕನ್ಯಾನ, ಬಿಚ್ಚಿನಾಡಿ, ಬೈಲುಮನೆ ಎಂಬಲ್ಲಿ ಹಳೆ ವಿದ್ಯುತ್ ಲೈನ್ ಬದಲಿಸಿ, ಹೊಸದಾಗಿ ನಿರ್ಮಿಸಿ ಕೊಡಬೇಕು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯಿಂದ ಕನ್ಯಾನದಲ್ಲಿ ವಿದ್ಯುತ್ ತಂತಿ ಕೆಳಮಟ್ಟದಲ್ಲಿ ಇದ್ದು, ವಾಹನದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಹಾಗೇಯೇ ವಿದ್ಯುತ್ ತಂತಿಯ ಮೇಲೆ ಅಪಾಯಕಾರಿ ಮರಗಳು ವಾಲಿಕೊಂಡಿರುವುದನ್ನು ಶೀಘ್ರದಲ್ಲಿ ತೆರವುಗೊಳಿಸುವಂತೆ ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ನಾಯಕ್ ಕನ್ಯಾನ ಒತ್ತಾಯಿಸಿದರು.
ನಾಡ್ಪಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಕುಮಾರ್ ತಿಂಗಳೆ ಮಾತನಾಡಿ, ನೆಲ್ಲಿಕಟ್ಟೆ, ಬಂಡಿಮಠ, ಅಜ್ಜೊಳ್ಳಿಯಲ್ಲಿ ವಿದ್ಯುತ್ ತಂತಿ ಬದಲಾಯಿಸಿಕೊಡುವಂತೆ ಮನವಿ ಮಾಡಿದರು.
ದೇವಳಬೈಲಿನಿಂದ ಕುಡಿಬೈಲಿನ ವರೆಗೆ ಇದ್ದ ದಾರಿದೀಪಕ್ಕೆ ಮೆಸ್ಕಾಂ ಇಲಾಖೆ ವಿದ್ಯುತ್ ಪೂರೈಕೆ ಕಡಿತಗೊಳಿಸಿದ್ದು, ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಪುನಃ ವಿದ್ಯುತ್ ಪೂರೈಕೆ ಕೈಗೊಳ್ಳಬೇಕು ಎಂದು ರಾಜೇಶ್ ಆಗ್ರಹಿಸಿದರು.
ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ದಿನೇಶ ಉಪಾಧ್ಯಾಯ ಮಾತನಾಡಿ, ‘ಬೀದಿ ದೀಪಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಕಿರಿಯ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಈ ಭಾರಿ ಇಲಾಖೆ ಉತ್ತಮವಾಗಿ ಕೆಲಸ ಮಾಡಿರುವುದರಿಂದ ಅಹವಾಲುಗಳು ಕಡಿಮೆ ಇದೆ. ಮುಂದೆಯೂ ನಮಗೆ ಜನರ ಸಹಕಾರಬೇಕು’ ಎಂದರು.
ಗ್ರಾಮೀಣ ಭಾಗದಲ್ಲಿ ಸಭೆ ನಡೆಸಿ: ಪಟ್ಟಣಗಳಲ್ಲಿ ಸಭೆ ನಡೆಸುವುದರಿಂದ ಅನೇಕರಿಗೆ ಸಮಸ್ಯೆಗಳನ್ನು ಹೇಳಿಕೊಳ್ಳಲಾಗುವುದಿಲ್ಲ. ಅಧಿಕಾರಿಗಳು ಮುಂದೆ ಗ್ರಾಮಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಿ ಜನರ ಅಹವಾಲು ಸ್ವೀಕರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಕಾರ್ಕಳದ ಕಾರ್ಯನಿರ್ವಾಹಕ ಎಂಜಿನಿಯರ್ ನರಸಿಂಹ, ಸಹಾಯಕ ಎಂಜಿನಿಯರ್ ರಾಧಿಕಾ, ಹಿರಿಯ ಸಹಾಯಕ ಎಂಜಿನಿಯರ್ ಶಿವಕುಮಾರ್, ಶಾಖಾಧಿಕಾರಿ ಸಂದೀಪ್, ಗುತ್ತಿಗೆದಾರ ಶಿವಪುರ ಶ್ರೀನಿವಾಸ್ ಹೆಬ್ಬಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.