ಉಡುಪಿ: ಕಾರ್ಕಳದ ಪರಶುರಾಮ ಥೀಮ್ ಪಾರ್ಕ್‌ಗೆ ಪರಶುರಾಮನ ಹೆಸರಿಟ್ಟರೆ ಕಾಂಗ್ರೆಸ್‌ನವರಿಗೇಕೆ ಹೊಟ್ಟೆ ಉರಿ ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪ್ರಶ್ನಿಸಿದ್ದಾರೆ.
ಪರಶುರಾಮ ಥೀಂ ಪಾರ್ಕ್ ವಿಚಾರವಾಗಿ ಕಾಂಗ್ರೆಸ್ ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿ, ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಥೀಂ ಪಾರ್ಕ್‌ಗೆ ಪರಶುರಾಮನ ಬದಲು ಶಾಸಕ ಸುನೀಲ್ ಕುಮಾರ್ ಅವರ ಹೆಸರಿಟ್ಟಿದ್ದರೆ, ಕಾಂಗ್ರೆಸ್‌ನವರು ಪ್ರತಿಭಟನೆ ನಡೆಸುವುದಕ್ಕೆ ಅರ್ಥವಿತ್ತು ಎಂದೂ ಹೇಳಿದ್ದಾರೆ.
ಕಾಂಗ್ರೆಸ್‌ನವರು ದೇಶದ ರಾಮನನ್ನು, ಹಿಂದುತ್ವವನ್ನು ಒಪ್ಪಿಕೊಳ್ಳುವುದಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ ಎಂದರು.
ಒಂದೂ ಕಾಲು ವರ್ಷದಿಂದ ಸುಮ್ಮನಿದ್ದ ಕಾಂಗ್ರೆಸ್ ಸರ್ಕಾರ ಈಗ ಥೀಂ ಪಾರ್ಕ್ ವಿಚಾರಕ್ಕೆ ಸಂಬಂಧಿಸಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರನ್ನು ಅಮಾನತು ಮಾಡಿದೆ ಎಂದರು.
ಕಾರ್ಕಳದ ಕಾಂಗ್ರೆಸ್ ಮುಖಂಡ ಉದಯಕುಮಾರ್ ಮುನಿಯಾಲು ಅವರು ಬೆಂಗಳೂರಿನಲ್ಲಿ ಮೂರ್ತಿ ಜಪ್ತಿ ಮಾಡುವಾಗ ಉಪಸ್ಥಿತರಿದ್ದರು. ಅವರನ್ನು ಪೊಲೀಸ್ ಇಲಾಖೆಗೆ ನೇಮಕ ಮಾಡಿದರೂ ಆಶ್ಚರ್ಯವಿಲ್ಲ ಎಂದರು.
ಕಾರ್ಕಳ ಮಂಡಲ ಅಧ್ಯಕ್ಷ ನವೀನ್ ನಾಯ್ಕ್ ಮಾತನಾಡಿ, ಕಾರ್ಕಳದಲ್ಲಿ ದಿನನಿತ್ಯ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳುಮೊಕದ್ದಮೆ ದಾಖಲಿಸಲಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯ ಬಳಿಕ ಬಿಜೆಪಿ ನಿಯೋಗ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಅವರಿಗೆ ಪರಶುರಾಮ ಥೀಂ ಪಾರ್ಕ್ ವಿವಾದದ ಬಗ್ಗೆ ಸ್ಪಷ್ಟನೆ ನೀಡುವಂತೆ ಮನವಿ ಸಲ್ಲಿಸಿತು.