ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಾಖೆ ಸುಧಾರಣೆಗೆ ಮಾದರಿ ಗ್ರಾಮ ಯೋಜನೆ: ಸಚಿವ ಸುನಿಲ್‌ ಕುಮಾರ್‌

ಕಾರ್ಕಳ ಮೆಸ್ಕಾಂ ಉಪ ವಿಭಾಗ ಉದ್ಘಾಟನೆ
Last Updated 6 ಸೆಪ್ಟೆಂಬರ್ 2021, 9:10 IST
ಅಕ್ಷರ ಗಾತ್ರ

ಕಾರ್ಕಳ: ‘ರಾಜ್ಯದಲ್ಲಿ ವಿದ್ಯುತ್ ಇಲಾಖೆಯಲ್ಲಿ ಸುಧಾರಣೆ ತರಲು ಸರ್ಕಾರ ಮಾದರಿ ಗ್ರಾಮ ಯೋಜನೆ ಹಾಕಿಕೊಳ್ಳಲಾಗಿದೆ’ ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

ತಾಲ್ಲೂಕಿನ ಸಾಣೂರು ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಸಾಣೂರು ಮಾದರಿ ಗ್ರಾಮ ಯೋಜನೆ ₹40 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಕಾರ್ಕಳ ಮೆಸ್ಕಾಂ ಉಪ ವಿಭಾಗವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಸಾಣೂರು, ನಿಟ್ಟೆ, ಹೆಬ್ರಿ ಹಾಗೂ ಬಜಗೋಳಿ ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ಆಯ್ಕೆ ಮಾಡಲಾಗಿದ್ದು, ಈ ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆ ಹಾಗೂ ಈಗಿರುವ ಸಾಮರ್ಥ್ಯವನ್ನು ಮೇಲ್ದರ್ಜೆಗೇರಿಸುವ ಕಾರ್ಯ ನಡೆಸಲಾಗುವುದು ಎಂದು ಹೇಳಿದರು.
‘ಗ್ರಾಮೀಣ ಪ್ರದೇಶಗಳಲ್ಲಿ ಲೋವೋಲ್ಟೆಜ್ ಸಮಸ್ಯೆ ಮಾತ್ರವಿದ್ದು, ವಿದ್ಯುತ್‌ ವ್ಯತ್ಯಯ ಎನ್ನುವುದು ಇಲ್ಲವೇ ಇಲ್ಲ. ಕೇವಲ ನಿರ್ವಹಣೆ ಸಂದರ್ಭದಲ್ಲಿ ವಿದ್ಯುತ್‌ ವ್ಯತ್ಯಯ ಮಾಡಲಾಗುತ್ತಿದೆ. ಲೋವೋಲ್ಟೆಜ್ ಸಮಸ್ಯೆ ಪರಿಹಾರಕ್ಕೆ ₹ 6 ಕೋಟಿ ವೆಚ್ಚದಲ್ಲಿ 133 ಹೊಸ ವಿದ್ಯುತ್‌ ಪರಿವರ್ತಕ ಅಳವಡಿಸಲಾಗುವುದು. ಅದರ ನಂತರ ಲೋವೋಲ್ಟೆಜ್ ಸಮಸ್ಯೆ ಕಡಿಮೆ ಆಗಲಿದೆ’ ಎಂದು ಹೇಳಿದರು.

ಕುಂಟಲ್ಪಾಡಿ ಆಟೋ ಚಾಲಕ– ಮಾಲೀಕರ ಪರವಾಗಿ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಮೆಸ್ಕಾಂ ಉಡುಪಿ ವೃತ್ತದ ಎಂಜಿನಿಯರ್ ನರಸಿಂಹ ಪಂಡಿತ್, ಉಡುಪಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಶಾಂತ ಪುತ್ರನ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದಿಲೀಪ್ ಕುಮಾರ್, ಕಾರ್ಕಳ ಉಪ ವಿಭಾಗ ಬಿ. ಶಾಖೆಯ ಸಹಾಯಕ ಎಂಜಿನಿಯರ್ ಸಂಪತ್, ಸಾಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಶೆಟ್ಟಿ ಇದ್ದರು.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸಾಣೂರು ನರಸಿಂಹ ಕಾಮತ್ ಪ್ರಾಸ್ತಾವಿಕ ಮಾತನಾಡಿದರು. ಸಾಣೂರು ದೇಂದಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀರಾಮ ಭಟ್ ಶುಭ ಕೋರಿದರು. ಪಂಚಾಯಿತಿ ಸದಸ್ಯ ಕರುಣಾಕರ ಎಸ್. ಕೋಟ್ಯಾನ್ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT