ಭಾನುವಾರ, ಜನವರಿ 24, 2021
27 °C
ನೂತನ ಪಂಚಾಯಿತಿ ಸದಸ್ಯರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಿವಿಮಾತು

ಪಂಚಾಯಿತಿಗಳಿಗೆ ಕನಿಷ್ಠ ₹ 1 ಕೋಟಿ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಹಳ್ಳಿಗಳು ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿಯಾಗಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆಯನ್ನು ನೂತನ ಗ್ರಾಮ ಪಂಚಾಯಿತಿ ಸದಸ್ಯರು ಸಾಕಾರಗೊಳಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಅಂಬಾಗಿಲಿನ ಅಮೃತ್ ಗಾರ್ಡನ್‌ನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ‘ಜನಸೇವಕ ಸಮಾವೇಶ’ ಉದ್ಘಾಟಿಸಿ ಮಾತನಾಡಿದ ಸಚಿವರು,‌ ಪ್ರತಿ ಗ್ರಾಮ ಪಂಚಾಯಿತಿಗೆ ಕನಿಷ್ಠ ₹ 1 ಕೋಟಿ ಅನುದಾನ ಒದಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ನರೇಗಾ ಯೋಜನೆಯಡಿ 150 ದಿನಗಳ ಕೂಲಿ ನೀಡಲಾಗುತ್ತಿದ್ದು, ಕೇಂದ್ರದಿಂದ ಹೆಚ್ಚುವರಿಯಾಗಿ ₹ 800 ಕೋಟಿ ಅನುದಾನ ಬಂದಿದೆ ಎಂದರು.

ಹಿಂದೆ, ಸ್ವಚ್ಛಭಾರತ ಮಿಷನ್‌ ಯೋಜನೆ ಅನುಷ್ಠಾನಕ್ಕೆ ಪ್ರತಿ ಗ್ರಾಮ ಪಂಚಾಯಿತಿಗೆ ಕೇವಲ ₹ 20 ಲಕ್ಷ ಸಿಗುತ್ತಿತ್ತು. ಈಗ ಪಂಚಾಯಿತಿಯ ಗಾತ್ರಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿದ್ದು, ದೊಡ್ಡ ಪಂಚಾಯಿತಿಗಳಿಗೆ ಹೆಚ್ಚುವರಿ ಅನುದಾನ ಸಿಗಲಿದೆ. ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದಲೂ ₹ 5 ಲಕ್ಷದವರೆಗೆ ಅನುದಾನ ಬಿಡುಗಡೆ ಮಾಡಲು ಅವಕಾಶವಿದೆ. ಶಾಸಕರ ಹಾಗೂ ಸಂಸದರ ನಿಧಿ ಬಳಸಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಒತ್ತುನೀಡಿ ಎಂದು ನೂತನ ಸದಸ್ಯರಿಗೆ ಈಶ್ವರಪ್ಪ ಸಲಹೆ ನೀಡಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ‘ರಸ್ತೆ, ಕಟ್ಟಡ, ಸೇತುವೆಗಳನ್ನು ನಿರ್ಮಿಸುವುದು ಮಾತ್ರ ಅಭಿವೃದ್ಧಿಯಲ್ಲ; ಸಮಾಜವನ್ನು ಬದಲಾವಣೆಯತ್ತ ಕೊಂಡೊಯ್ಯುವುದೂ ಅಭಿವೃದ್ಧಿಯೇ. ಈ ಕಾರ್ಯವನ್ನು ನೂತನ ಪಂಚಾಯಿತಿ ಸದಸ್ಯರು ಮಾಡಬೇಕು. ಅಸ್ಪೃಶ್ಯತೆ, ಜಾತೀಯತೆ, ಸ್ವಜನ ಪಕ್ಷಪಾತ, ಭ್ರಷ್ಟಾಚಾರಕ್ಕೆ ಅವಕಾಶ ನೀಡದಂತೆ ಕಾರ್ಯ ನಿರ್ವಹಿಸಿ. ಎಚ್ಚರ ತಪ್ಪಿದರೆ ಕಾಂಗ್ರೆಸ್‌ಗೆ ಬಂದಿರುವ ದುಸ್ಥಿತಿ ಬಿಜೆಪಿಗೆ ಬರಬಹುದು. ಜನಪ್ರತಿನಿಧಿಗಳ ಉತ್ತರದಾಯಿತ್ವ ಜನರಿಗೆ ಇರಬೇಕು. ಮಾದರಿ ಪಂಚಾಯಿತಿಗಳನ್ನು ನಿರ್ಮಾಣ ಮಾಡಬೇಕು’ ಎಂದು ಸಲಹೆ ನೀಡಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಮಾತನಾಡಿ, ‘ರಾಜ್ಯದಲ್ಲಿ 45,000ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಪಡೆದಿದ್ದಾರೆ. ಜಿಲ್ಲೆಯಲ್ಲಿ 115 ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತರು ವಿಜಯ ಸಾಧಿಸಿದ್ದಾರೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಶಾಸಕರು, ಸಂಸದರು ಬಿಜೆಪಿಯವರಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು ಗ್ರಾಮಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ರಾಜಕೀಯಗೊಳಿಸಲಾಗಿದೆ. ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ಸದಸ್ಯರು ಕೃಷಿ ಕಾಯ್ದೆಗಳ ಪ್ರಯೋಜನಗಳ ಕುರಿತು ಗ್ರಾಮೀಣ ಭಾಗದ ಜನರಿಗೆ ತಿಳಿವಳಿಕೆ ಮೂಡಿಸಬೇಕು. ವಿರೋಧ ಪಕ್ಷಗಳ ಷಡ್ಯಂತ್ರವನ್ನು ತಡೆಯಬೇಕು ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಕನಿಷ್ಠ ₹ 1 ಕೋಟಿಯಿಂದ ₹ 2.50 ಕೋಟಿವರೆಗೂ ಅನುದಾನ ಸಿಗಲಿದ್ದು, ಮುಂದಿನ 5 ವರ್ಷಗಳಲ್ಲಿ ₹ 35,000 ಕೋಟಿ ನಿಗದಿಪಡಿಸಲಾಗಿದೆ. ಗ್ರಾಮಕ್ಕೆ ಯಾವ ಸೌಲಭ್ಯಗಳು ಬೇಕು ಎಂಬುದನ್ನು ಗ್ರಾಮಸ್ಥರೇ ನಿರ್ಧರಿಸಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ಹಾಗೂ ಅನುದಾನ ನೀಡಲಿದೆ ಎಂದರು.

ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಶೇ 50ಕ್ಕಿಂತ ಹೆಚ್ಚು ಮಹಿಳೆಯರು ಗೆದ್ದಿದ್ದಾರೆ. ಪತ್ನಿಯ ಹೆಸರಿನಲ್ಲಿ ಪತಿ ಅಧಿಕಾರ ಚಲಾಯಿಸಲು ಅವಕಾಶ ಕೊಡಬಾರದು. ಮನೆಯ ಖರ್ಚುವೆಚ್ಚಗಳನ್ನು ನಿಭಾಯಿಸಿ ಅನುಭವ ಇರುವ ಮಹಿಳೆ ಗ್ರಾಮಗಳ ಸಮಸ್ಯೆಗಳನ್ನು ಆಧ್ಯತೆ ಮೇರೆಗೆ ಬಗೆಹರಿಸಬೇಕು ಎಂದು ಕಿವಿಮಾತು ಹೇಳಿದರು.

ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯ ಎನ್‌.ರವಿಕುಮಾರ್ ಮಾತನಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌, ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಉಡುಪಿ ಶಾಸಕ ಕೆ.ರಘುಪತಿ ಭಟ್‌, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್, ಕಾಪು ಶಾಸಕ ಲಾಲಾಜಿ ಮೆಂಡನ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಇದ್ದರು.

‘ಎಸ್‌ಟಿ ಮೀಸಲಾತಿ ಹೋರಾಟಕ್ಕೆ ಬೆಂಬಲ‌’
ಕುರುಬ ಸಮಾಜಕ್ಕೆ ಎಸ್‌ಸಿ ಮೀಸಲಾತಿ ಬೇಡಿಕೆ ವಿಚಾರವಾಗಿ ಕಾಗಿನೆಲೆ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ಹೊಸದುರ್ಗದ ಕಾಗಿನೆಲೆ ಶಾಖಾಪೀಠದ ಈಶ್ವರಾನಂದ ಪುರಿ ಸ್ವಾಮೀಜಿ ಹೋರಾಟ ಆರಂಭಿಸಿದ್ದಾರೆ. ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿಯ ಕುರುಬ ನಾಯಕರನ್ನೊಳಗೊಂಡ ಸಮಿತಿ ರಚನೆಯಾಗಿದೆ. ರಾಜ್ಯದೆಲ್ಲೆಡೆ ಜನಜಾಗೃತಿ ನಡೆಯುತ್ತಿದ್ದು, ದೆಹಲಿಯಲ್ಲಿ ಕೇಂದ್ರ ಸಚಿವರು ಹಾಗೂ ನಾಯಕರನ್ನು ಭೇಟಿಮಾಡಿ ಚರ್ಚಿಸಲಾಗಿದೆ. ಜ.18ರಿಂದ ಸ್ವಾಮೀಜಿಗಳು 340 ಕಿ.ಮೀ ಪಾದಯಾತ್ರೆ ಆರಂಭಿಸಲಿದ್ದಾರೆ. ಫೆ.7ರಂದು ಬೆಂಗಳೂರಿನಲ್ಲಿ 1 ಲಕ್ಷ ಜನರು ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದು, ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ನಿರ್ಧರಿಸಲಾಗುವುದು ಎಂದರು. ಹೋರಾಟದಲ್ಲಿ ಭಾಗವಹಿಸುವಂತೆ ಸ್ವಾಮೀಜಿಗಳು ಕರೆ ನೀಡಿದ್ದರೂ, ಆಹ್ವಾನ ನೀಡಿಲ್ಲ ಎಂದು ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು