ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಸ್ಯೆಗಳಿಗೆ ಧ್ವನಿಯಾದ ಜನಸ್ಪಂದನ

ಉಡುಪಿ ತಾಲ್ಲೂಕು ಮಟ್ಟದ ಕಾರ್ಯಕ್ರಮ: ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ
Published 29 ಜೂನ್ 2024, 6:22 IST
Last Updated 29 ಜೂನ್ 2024, 6:22 IST
ಅಕ್ಷರ ಗಾತ್ರ

ಉಡುಪಿ: ಮಗ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ನ್ಯಾಯ ಒದಗಿಸಿ... ರಸ್ತೆ ಸರಿ ಇಲ್ಲ. ಯಾರಾದರೂ ಅನಾರೋಗ್ಯಪೀಡಿತರಾದರೆ ಆಂಬುಲೆನ್ಸ್‌ ಬರಲೂ ಸಾಧ್ಯವಾಗುತ್ತಿಲ್ಲ... ಚರಂಡಿ ವ್ಯವಸ್ಥೆ ಸರಿ ಇಲ್ಲದೆ ಬಾವಿಯ ನೀರು ಕಲುಷಿತಗೊಳ್ಳುತ್ತಿದೆ ಕೂಡಲೇ ಕ್ರಮ ಕೈಗೊಳ್ಳಿ...

ನಗರದ ಬನ್ನಂಜೆಯ ಬಿಲ್ಲವ ಸೇವಾ ಸಂಘದ ನಾರಾಯಣ ಗುರು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ನಗರಸಭೆಯ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಉಡುಪಿ ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಎದುರು ಜನರು ಅಳಲು ತೋಡಿಕೊಂಡ ಪರಿ ಇದು.

ಅಂಬಲಪಾಡಿಯ ವೃದ್ಧೆಯೊಬ್ಬರು, ‌‌‘ಮಗನ ಮೊದಲ ಪತ್ನಿ ತೀರಿಕೊಂಡ ಬಳಿಕ ಆತ ಎರಡನೇ ಮದುವೆಯಾಗಿದ್ದಾನೆ. ಅನಂತರ ಮೊದಲ ಮಗಳನ್ನು ಮತ್ತು ನನ್ನನ್ನು ನೋಡಿಕೊಳ್ಳುವುದಿಲ್ಲ ನ್ಯಾಯ ಒದಗಿಸಿ’ ಎಂದು ಅಹವಾಲು ಸಲ್ಲಿಸಿದರು. ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

ಕಲ್ಮಾಡಿ–ಕಿದಿಯೂರು ರಸ್ತೆಯಲ್ಲಿರುವ ಬಂಕೇರಕಟ್ಟ ಸೇತುವೆ ಮೇಲೆ ಜೋರು ಮಳೆ ಬಂದರೆ ನೀರು ಬರುತ್ತದೆ, ಸೇತುವೆ ಶಿಥಿಲಾವಸ್ಥೆಗೆ ತಲುಪಿದೆ. ನಿಟ್ಟೂರಿನಲ್ಲಿರುವ ಕೊಳಚೆ ನೀರು ಶುದ್ಧೀಕರಣ ಘಟಕ ಕಾರ್ಯ ನಿರ್ವಹಿಸದೆ ಸಮಸ್ಯೆಯಾಗಿದ್ದು ಅಗತ್ಯ ಕ್ರಮಕೈಗೊಳ್ಳಬೇಕೆಂದು ನಗರ ಸಭೆ ಸದಸ್ಯ ಸುಂದರ ಜೆ. ಕಲ್ಮಾಡಿ ಅಳಲು ತೋಡಿಕೊಂಡರು. ಈ ಕುರಿತು ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಗುಂಡಿಬೈಲ್‌ ನೆಕ್ಕರೆಕರೆ ಪ್ರದೇಶದಲ್ಲಿ ಸಮರ್ಪಕ ರಸ್ತೆಯಿಲ್ಲದೆ ಸಮಸ್ಯೆಯಾಗುತ್ತಿದೆ. ಸ್ಥಳೀಯರು ಜಾಗ ನೀಡಲು ಸಿದ್ಧರಿದ್ದರೂ ರಸ್ತೆ ದುರಸ್ತಿ ಮಾಡುತ್ತಿಲ್ಲ. ಚರಂಡಿಯಲ್ಲಿ ಕೊಳಚೆ ನೀರು ಹರಿದು ಹೋಗದೆ ಬಾವಿಯ ನೀರು ಕಲುಷಿತಗೊಂಡಿದೆ ಎಂದು ಸ್ಥಳೀಯರು ಜಿಲ್ಲಾಧಿಕಾರಿಗೆ ಅಹವಾಲು ನೀಡಿದರು.

ಕಡತ ವಿಲೇವಾರಿಗೆ ಮುಂದಾಗಿ: ಜನರ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಜನಸ್ಪಂದನ ಕಾರ್ಯಕ್ರಮದ ಜೊತೆಗೆ ಅಧಿಕಾರಿಗಳು 15 ದಿನಗಳಿಗೊಮ್ಮೆ ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡಬೇಕು ಎಂದು ಶಾಸಕ ಯಶ್‌ಪಾಲ್‌ ಸುವರ್ಣ ಹೇಳಿದರು.

ಕಳೆದ ಮಳೆಗಾಲದಲ್ಲಿ ಗಾಳಿ, ಮಳೆಗೆ ಆಸ್ತಿ ನಷ್ಟವುಂಟಾದವರಿಗೆ ಇನ್ನೂ ಪರಿಹಾರ ನೀಡಿಲ್ಲ. ಉಡುಪಿ ಜಿಲ್ಲೆಗೆ ಅನುದಾನ ಬರುತ್ತಿಲ್ಲ. ಕಡಲ್ಕೊರೆತ, ಮಳೆಗಾಲದ ಅನಾಹುತಗಳಿಗೆ ತಕ್ಷಣ ಪರಿಹಾರ ಬಿಡುಗಡೆಗೊಳಿಸಬೇಕು. ಸಮಸ್ಯೆ ಉಂಟಾಗಿರುವ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಭೇಟಿ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಮಾತನಾಡಿ, ಕುಂದಾಪುರ, ಹೆಬ್ರಿ ತಾಲ್ಲೂಕುಗಳಲ್ಲಿ ಈಗಾಗಲೇ ಜನಸ್ಪಂದನ ಕಾರ್ಯಕ್ರಮ ನಡೆದಿದೆ ಮುಂದಿನ ವಾರಗಳಲ್ಲಿ ಉಳಿದ ತಾಲ್ಲೂಕುಗಳಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಸಣ್ಣಪುಟ್ಟ ಸಮಸ್ಯೆಗಳನ್ನು ಕೂಡಲೇ ಪರಿಹರಿಸಲಾಗುವುದು. ದೊಡ್ಡ ಸಮಸ್ಯೆಗಳಿದ್ದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ಕುಮಾರ್‌ ಕೆ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್‌ ಬಾಯಲ್‌, ಸಹಾಯಕ ಆಯುಕ್ತೆ ರಶ್ಮಿ, ಪೌರಾಯುಕ್ತ ರಾಯಪ್ಪ ಪಾಲ್ಗೊಂಡಿದ್ದರು. ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ವಿಜಯಾ ಸ್ವಾಗತಿಸಿದರು. ರೋಷನ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ 19, ನಗರಸಭೆಯ 14, ಗ್ರಾಮ ಪಂಚಾಯಿತಿಯ 4, ಸರ್ವೇ ಇಲಾಖೆಯ 8 ಸೇರಿದಂತೆ ಒಟ್ಟು 54 ಅರ್ಜಿಗಳು ಸ್ವೀಕೃತವಾದವು.

ಪಿಡಿಒ ವಿರುದ್ಧ ಶಾಸಕ ಸುರೇಶ್‌ ಶೆಟ್ಟಿ ಆಕ್ರೋಶ

ಪೆರ್ಡೂರು ಗ್ರಾಮ ಪಂಚಾಯಿತಿ ಪಿಡಿಒ ಜನರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂದು ಆರೋಪಿಸಿ ಜನಸ್ಪಂದನ ಕಾರ್ಯಕ್ರಮದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಅವರು ಆಕ್ರೋಶ ವ್ಯಕ್ತಪಡಿಸಿದರು. ಪೆರ್ಡೂರು ಅಲಂಗಾರ್‌ನಲ್ಲಿ ವ್ಯಕ್ತಿಯೊಬ್ಬರು ನಲ್ವತ್ತು ವರ್ಷಗಳಿಂದಿರುವ ರಸ್ತೆಗೆ ಬೇಲಿ ಹಾಕಿದ್ದಾರೆ. ಈ ಕುರಿತು ಪಿಡಿಒ ಅವರಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅವರು ಸ್ಥಳಕ್ಕೂ ಭೇಟಿ ನೀಡಿಲ್ಲ ಎಂದು ಪುಷ್ಪ ಜಿ. ಅಮೀನ್‌ ಎಂಬುವವರು ದೂರಿದರು. ಆಗ ಕುಪಿತರಾದ ಸುರೇಶ್‌ ಶೆಟ್ಟಿ ಅವರು ಪಿಡಿಒ ವಿರುದ್ಧ ಹರಿಹಾಯ್ದರು. ನೀವು ಕಚೇರಿಗೆ ಬರುತ್ತಿಲ್ಲ ಮತ್ತು ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂದು ಅನೇಕ ದೂರುಗಳು ಬಂದಿವೆ. ಇದು ಸರಿಯಲ್ಲ ಎಂದರು. ಜಿಲ್ಲಾಧಿಕಾರಿ ಕೂಡ ಪಿಡಿಒಗೆ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT