ಬದಲಾವಣೆ ಬಯಸುವವರು ರಾಜಕೀಯಕ್ಕೆ ಬನ್ನಿ: ಜಯಪ್ರಕಾಶ್ ಹೆಗ್ಡೆ

7
‘ರಾಜಕಾರಣ ಸ್ವಸ್ಥವೊ; ಅಸ್ವಸ್ಥವೊ’ ಸಂವಾದ ಕಾರ್ಯಕ್ರಮ

ಬದಲಾವಣೆ ಬಯಸುವವರು ರಾಜಕೀಯಕ್ಕೆ ಬನ್ನಿ: ಜಯಪ್ರಕಾಶ್ ಹೆಗ್ಡೆ

Published:
Updated:
Deccan Herald

ಉಡುಪಿ: ಹಿಂದೆಲ್ಲ ವ್ಯವಹಾರ ಮಾಡಿಕೊಂಡಿದ್ದವರು ಕೆಲಸ ಮಾಡಿಸಿಕೊಳ್ಳಲು ರಾಜಕೀಯ ನಾಯಕರ ಬಳಿ ಬರುತ್ತಿದ್ದರು. ಈಗ ಬರುತ್ತಿಲ್ಲ; ಕಾರಣ ವ್ಯವಹಾರ ಮಾಡಿಕೊಂಡಿದ್ದವರೇ ರಾಜಕಾರಣಿಗಳಾಗಿದ್ದಾರೆ ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಪ್ರಸ್ತುತ ರಾಜಕೀಯ ಸ್ಥಿತಿಗತಿಯನ್ನು ವಿಡಂಬನೆ ಮಾಡಿದರು.

ಎಂಜಿಎಂ ಕಾಲೇಜಿನಲ್ಲಿ ಶುಕ್ರವಾರ ರಾಜಕೀಯ ಶಾಸ್ತ್ರ ಹಾಗೂ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ರಾಜಕಾರಣ ಸ್ವಸ್ಥವೊ; ಅಸ್ವಸ್ಥವೊ’ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜಕೀಯವು ಪಟಿಂಗರ ಕೊನೆಯ ತಾಣ ಎಂಬ ಟೀಕೆಯಿದೆ. ಆದರೆ, ಪಂಟಿಗನಾಗಲು ಕನಿಷ್ಠ ಅರ್ಹತೆಗಳಾದರೂ ಬೇಕು. ಈಗಿನ ರಾಜಕೀಯ ವ್ಯವಸ್ಥೆ ಅದಕ್ಕಿಂತ ಕೀಳಾಗಿದೆ ಎಂದು ಟೀಕಿಸಿದರು.

ನೂತನವಾಗಿ ಆಯ್ಕೆಯಾದ ಜನಪ್ರತಿನಿಧಿಗಳಿಗೆ ವಿಧಾನಸೌಧದಲ್ಲಿ ತರಬೇತಿ ಕೊಡುವ ವ್ಯವಸ್ಥೆ ಇದೆ. ಆದರೆ, ಯಾರೊಬ್ಬರೂ ತರಬೇತಿಗೆ ಹಾಜರಾಗುವುದಿಲ್ಲ. ಹಾಗಾಗಿ, ಸದನದಲ್ಲಿ ಯಾವ ರೀತಿ ವರ್ತಿಸಬೇಕು, ಸಮಾಜದ ಹಿತವನ್ನು ಹೇಗೆ ಕಾಯಬೇಕು ಎಂಬ ಅರಿವು ಇರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜಕೀಯ ವ್ಯವಸ್ಥೆಯನ್ನು ಬದಲಿಸುವ ಶಕ್ತಿ ಯುವಕರ ಕೈಲ್ಲಿದೆ. ಮತ ಕೇಳುವ ವ್ಯಕ್ತಿ ಹಿಂದೆ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರಾ? ಕ್ಷೇತ್ರದ ಪರವಾಗಿ ಎಷ್ಟು ಬಾರಿ ಸದನದಲ್ಲಿ ದನಿ ಎತ್ತಿದ್ದಾರೆ. ಸದನಕ್ಕೆ ಹಾಜರಾಗುತ್ತಿದ್ದರಾ? ಎಂಬ ಮಾಹಿತಿ ಪಡೆದು ಮತ ಹಾಕಬೇಕು. ಆಗಮಾತ್ರ ರಾಜಕೀಯದಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.

‘ರಾಜಕೀಯ ಕ್ಷೇತ್ರದಲ್ಲಿ ಹೊಸ ನೀರು ಹರಿಯಬೇಕಿದೆ. ಬದಲಾವಣೆ ತರುವ ಹುಮ್ಮಸ್ಸಿರುವವರು ಮಾತ್ರ ರಾಜಕೀಯಕ್ಕೆ ಬನ್ನಿ. ಇರುವ ವ್ಯವಸ್ಥೆಗೆ ಹೊಂದಿಕೊಳ್ಳುತ್ತೇವೆ ಎಂಬ ಮನಸ್ಥಿತಿಯವರು ಖಂಡಿತ ಬರಬೇಡಿ. ಬದಲಾಯಿಸಲು ಬಂದು ರಾಜಿಯಾದವರ ಸಂಖ್ಯೆ ಈಗಾಗಲೇ ಸಾಕಷ್ಟಿದೆ’ ಎಂದು ಕಿವಿಮಾತು ಹೇಳಿದರು.

‘ಜನಪ್ರತಿನಿಧಿಗಳಿಗೆ ಪ್ರಶ್ನೆಗಳನ್ನು ಕೇಳುವುದು, ಕೆಲಸವನ್ನು ಮಾಡಿಸಿಕೊಳ್ಳುವುದು ಮತದಾರರ ಹಕ್ಕು. ಹಾಗೆಯೇ ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗಿರುವುದು, ಕೆಲಸ ಮಾಡಬೇಕಾಗಿರುವುದು ಜನಪ್ರತಿನಿಧಿಗಳ ಕರ್ತವ್ಯ. ಆಗ ಮಾತ್ರ ಬದಲಾವಣೆ ಸಾಧ್ಯ’ ಎಂದರು.

ರಾಜಕೀಯ ಮಾತ್ರವಲ್ಲ; ಮಾಧ್ಯಮ ಕ್ಷೇತ್ರ ಕೂಡ ಉತ್ತರದಾಯಿತ್ವಕ್ಕೆ ಒಳಗಾಗಬೇಕು. ಒಬ್ಬ ವ್ಯಕ್ತಿಯ ಬಗ್ಗೆ ಸುಳ್ಳು ವರದಿ ಪ್ರಸಾರ ಮಾಡಿದರೆ ಅಥವಾ ವರದಿ ಪ್ರಕಟಿಸಿದರೆ, ಸಣ್ಣದಾಗಿ ಕ್ಷಮೆ ಕೋರುವ ಬದಲು, ತಪ್ಪು ವರದಿ ಪ್ರಕಟವಾದಷ್ಟೇ ಸಮಯ ಹಾಗೂ ಜಾಗವನ್ನು ನೀಡಬೇಕು ಎಂದರು.

ಪ್ರಾಂಶುಪಾಲ ಡಾ.ಎಂ.ಜಿ.ವಿಜಯ್, ಸನ್ವಯಕಾರ ಕೊಕ್ಕರ್ಣೆ ಸುರೇಂದ್ರನಾಥ್‌ ಶೆಟ್ಟಿ, ಪ್ರಾಂಶುಪಾಲರಾದ ಮಾಲತಿದೇವಿ, ಮಂಜುನಾಥ್ ಇದ್ದರು.

ವಿದ್ಯಾರ್ಥಿಗಳ ಪ್ರಶ್ನೆಗೆ ಹೆಗ್ಡೆ ಉತ್ತರ

ವಿಭಾ: ರಾಜಕೀಯ ಪಕ್ಷಗಳಿಗೆ ಪ್ರತ್ಯೇಕ ಸಿದ್ಧಾಂತಗಳಿವೆಯಾ? ಅದು ವ್ಯಕ್ತಿ ಆಧಾರಿತವಾ, ಪಕ್ಷ ಆಧಾರಿತವಾ? 

ಹೆಗ್ಡೆ: ಪ್ರತಿಯೊಂದು ಪಕ್ಷಗಳು ಪ್ರತ್ಯೇಕ ಸಿದ್ಧಾಂತಗಳನ್ನು ಒಳಗೊಂಡಿರುತ್ತವೆ. ಜನರಿಗೆ ಸರಿ ಎನಿಸಿದ್ದನ್ನು ಬೆಂಬಲಿಸಬೇಕು. ಸರಿ ಇಲ್ಲ ಎನಿಸಿದ್ದನ್ನು 
ಖಂಡಿಸಬೇಕು .

ಕೌಶಿಕ್‌: ರಾಜಕೀಯ ವ್ಯಕ್ತಿಗಳಿಗೆ ಸೈದ್ಧಾಂತಿಕ ನಿಲುವುಗಳಿರುತ್ತವೆ. ಪಕ್ಷಾಂತರ ಮಾಡಿದಾಗ ಸೈದ್ಧಾಂತಿಕ ನಿಲುವುಗಳಿಗೆ ಧಕ್ಕೆಯಾಗುವುದಿಲ್ಲವೇ?

ಹೆಗ್ಡೆ: ಖಂಡಿತ. ಮೊದಲು ಜನತಾದಳ, ಕಾಂಗ್ರೆಸ್‌ನಲ್ಲಿದ್ದೆ. ಈಗ ಬಿಜೆಪಿಗೆ ಬಂದಿದ್ದೇನೆ. ಪಕ್ಷಾಂತರ ಚಿಂತನೆಗಳಿಗೆ ವಿರುದ್ಧವಾಗಿಲ್ಲವೇ ಎಂದು ಮಾಧ್ಯಮದವರು ಕೇಳುತ್ತಾರೆ. ಪಕ್ಷ ಬದಲಾಯಿಸಿದರೂ ಸಿದ್ಧಾಂತಗಳನ್ನು, ಚಿಂತನೆಗಳನ್ನು ಬದಲಿಸಿಲ್ಲ. ತಪ್ಪು ಎಂದು ಕಂಡುಬಂದರೆ ಸ್ವಂತ ಪಕ್ಷವನ್ನು ಟೀಕಿಸಿದ್ದೇನೆ ಎಂದು ಸಮರ್ಥಿಸಿಕೊಂಡರು.‌

ಧನುಷ್‌: ಅಭ್ಯರ್ಥಿ ನೋಡಿ ಮತ ಹಾಕಬೇಕಾ? ಪಕ್ಷ ನೋಡಿ ಹಾಕಬೇಕಾ?

ಹೆಗ್ಡೆ: ಅಭ್ಯರ್ಥಿ ನೋಡಿ ಮತ ಹಾಕಬೇಕು ಎಂಬುದು ನನ್ನ ಅಭಿಪ್ರಾಯ. ಚುನಾವಣೆಗೆ ನಿಂತವರು ಉತ್ತಮರಾ, ಹಿಂದೆ ಕೆಲಸ ಮಾಡಿದ್ದಾರಾ 
ಎಂದು ಅರಿಯಬೇಕು. ಯುವಕರು ಪ್ರಶ್ನೆ ಮಾಡುವ ಗುಣ 
ಬೆಳೆಸಿಕೊಳ್ಳಬೇಕು.

ನವೀನ್‌: ತೋರ್ಪಡಿಕೆ ರಾಜಕಾರಣ ಮಾರಕವಲ್ಲವೇ?

ಹೆಗ್ಡೆ: ಬದ್ಧತೆ, ಪ್ರಾಮಾಣಿಕತೆ ಇರುವ ರಾಜಕಾರಣಿಗಳನ್ನು ಬೆಂಬಲಿಸಿ. ಪ್ರಚಾರ ಮಾಡಿದರೆ ತಪ್ಪಲ್ಲ. ಅದು ವಾಸ್ತವವಾಗಿರಬೇಕು.

ಸರ್ಕಾರದ ವಿರುದ್ಧ ಕೈ ಎತ್ತಿದರು!

ಸದನದಲ್ಲೊಮ್ಮೆ ಆಡಳಿತ ಪಕ್ಷದ ವಿರುದ್ಧ ವಿರೋಧ ಪಕ್ಷ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಈ ಸಂದರ್ಭ ಉಪ ಸಭಾಧ್ಯಕ್ಷರು ಮತದಾನಕ್ಕೆ ಅವಕಾಶ ಮಾಡಿಕೊಟ್ಟಾಗ ಆಡಳಿತ ಪಕ್ಷದ ಸದಸ್ಯರೇ ಸರ್ಕಾರದ ವಿರುದ್ಧ ಕೈ ಎತ್ತಿಬಿಟ್ಟರು. ಸಾಮಾನ್ಯವಾಗಿ ಸರ್ಕಾರ ಸದನದಲ್ಲಿ ಬಿಲ್‌ ಮಂಡನೆ ಮಾಡಿದಾಗ, ಆಡಳಿತ ಪಕ್ಷದವರೆಲ್ಲರೂ ಕೈ ಎತ್ತಿ ಬೆಂಬಲ ಸೂಚಿಸುತ್ತಾರೆ. ಹಾಗೆಯೇ ಅವಿಶ್ವಾಸ ಮಂಡನೆ ಸಂದರ್ಭದಲ್ಲೂ ಮಾಡಿದರು. ಸದನದಲ್ಲಿ ಯಾವ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂಬ ಸಾಮಾನ್ಯ ಜ್ಞಾನ ಜನಪ್ರತಿನಿಧಿಗಳಿಗೆ ಇದ್ದರೆ ಇಂತಹ ಅಪಸವ್ಯಗಳು ಆಗುವುದಿಲ್ಲ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು.

 * ಶಾಸಕನಾದನು ಶಾಸನಗಳು ರಚನೆಯಾಗುವ ಸಂದರ್ಭ ಕಡ್ಡಾಯವಾಗಿ ಭಾಗವಹಿಸಬೇಕು. ಕ್ಷೇತ್ರದ ಬಗ್ಗೆ ಕಾಳಜಿ ಇರಬೇಕು. ಸದನದ ಕಲಾಪಗಳಲ್ಲಿ ಭಾಗವಹಿಸಿ ಪ್ರಶ್ನೆಗಳನ್ನು ಕೇಳಬೇಕು.

–ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದ 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !