ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕ ಪಕ್ಷ ಹಿಂದೆಂದಿಗಿಂತ ಹೆಚ್ಚು ಪ್ರಸ್ತುತ

ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ
Last Updated 6 ಸೆಪ್ಟೆಂಬರ್ 2021, 17:23 IST
ಅಕ್ಷರ ಗಾತ್ರ

ಉಡುಪಿ: ರಾಜ್ಯದ ನೆಲ, ಜಲ, ನುಡಿ ಸೇರಿದಂತೆ ಅಭಿವೃದ್ಧಿ ವಿಚಾರದಲ್ಲಿ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿದೆ ಎಂಬ ಭಾವನೆ ಮತದಾರರಲ್ಲಿದೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ಜನರ ಬೆಂಬಲ ಸಿಗಲಿದೆ ಎಂದು ‍ಪಕ್ಷದ ರಾಜ್ಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಅಭಿಪ್ರಾಯಪಟ್ಟರು.

ನಗರದ ಹೋಟೆಲ್ ಸ್ವದೇಶಿ ಹೆರಿಟೇಜ್‌ ಸಭಾಂಗಣದಲ್ಲಿ ಸೋಮವಾರ ನಡೆದ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರ ನಡೆಸಿದ ರಾಷ್ಟ್ರೀಯ ಪಕ್ಷಗಳು ರಾಜ್ಯದ ಸಂಪನ್ಮೂಲ ಲೂಟಿ ಮಾಡಿವೆಯೇ ಹೊರತು ಅಭಿವೃದ್ಧಿ ಮಾಡಿಲ್ಲ. ಮೇಕೆದಾಟು, ಕೃಷ್ಣಾ ಸೇರಿದಂತೆ ರಾಜ್ಯಕ್ಕೆ ಸಂಬಂಧಪಟ್ಟ ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಹೈಕಮಾಂಡ್‌ ಮುಂದೆ ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ರಾಷ್ಟ್ರೀಯ ಪಕ್ಷಗಳಿಗೆ ಇದೆ. ಆದರೆ, ಜೆಡಿಎಸ್‌ ಪಕ್ಷಕ್ಕೆ ಪ್ರಾದೇಶಿಕ ಸಮಸ್ಯೆಗಳನ್ನು ಪರಿಹರಿಸಲು ಯಾರ ಒಪ್ಪಿಗೆ ಅಗತ್ಯವಿಲ್ಲ ಎಂದರು.

ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಮಹತ್ವದ ಘಟ್ಟವಾಗಿದ್ದು, ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಇದೆ. ಉಡುಪಿ ಜಿಲ್ಲೆಯಲ್ಲಿ 8 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳು ಸಿದ್ಧರಿದ್ದಾರೆ. ಎಲ್ಲ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲೂ ಜೆಡಿಎಸ್‌ ಸ್ಪರ್ಧಿಸಲಿದ್ದು, ಕನಿಷ್ಠ 6 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.

ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಿಗೆ ಪೂರ್ವಭಾವಿಯಾಗಿ ಕಾರ್ಯಕರ್ತರಿಗೆ ಧೈರ್ಯ ಹಾಗೂ ಉತ್ಸಾಹ ತುಂಬುವ ನಿಟ್ಟಿನಲ್ಲಿ ಸಂಘಟನಾ ಸಭೆಗಳನ್ನು ಆಯೋಜಿಸಲಾಗಿದೆ. ಜೆಡಿಎಸ್‌ಗೆ ಹಣದ ಕೊರತೆ ಇದೆಯೇ ಹೊರತು, ಕಾರ್ಯಕರ್ತರ ಕೊರತೆ ಇಲ್ಲ ಎಂದು ಸುಧಾಕರ ಶೆಟ್ಟಿ ಹೇಳಿದರು.

ಪಕ್ಷ ಸಂಘಟನೆಗೆ ಒತ್ತು ನೀಡಲು ರಾಜ್ಯದ ಎಲ್ಲ ಘಟಕಗಳನ್ನು ವಿಸರ್ಜಿಸಿ ಮರು ರಚನೆ ಮಾಡಲಾಗುತ್ತಿದೆ. ಬೂತ್, ಹೋಬಳಿ, ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸಲಾಗುತ್ತಿದೆ. ರಾಜ್ಯದಲ್ಲಿ 22 ಲಕ್ಷ ಸಕ್ರಿಯ ಕಾರ್ಯರ್ತರ ನೋಂದಣಿ ಗುರಿ ಇದ್ದು, ಒಬ್ಬ ಸಕ್ರಿಯ ಕಾರ್ಯಕರ್ತ ಕನಿಷ್ಠ 15 ಜನರನ್ನು ಪಕ್ಷದ ಸದಸ್ಯರನ್ನಾಗಿ ನೋಂದಣಿ ಮಾಡಿಸಬೇಕು ಎಂಬ ನಿಯಮ ರೂಪಿಸಲಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಮಾದರಿಯಲ್ಲಿ ಕರ್ನಾಟಕ ವಿದ್ಯಾರ್ಥಿ ಘಟಕ ತೆರೆಯಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಸಾಮಾಜಿಕ ಮಾಧ್ಯಮ ವಿಭಾಗ ಆರಂಭಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜೆಡಿಎಸ್‌ ಜಿಲ್ಲಾ ಘಟದಕ ಅಧ್ಯಕ್ಷ ಯೋಗೀಶ್ ವಿ.ಶೆಟ್ಟಿ, ಮುಖಂಡರಾದ ವಾಸುದೇವರಾವ್, ಗಂಗಾಧರ್ ಬಿರ್ತಿ, ಬಾಲಕೃಷ್ಣ ಆಚಾರ್ಯ, ಇಕ್ಬಾಲ್ ಆತ್ರಾಡಿ, ಚಂದ್ರಹಾಸ್ ಎರ್ಮಾಳ್‌, ಶ್ರೀಕಾಂತ್ ಪೂಜಾರಿ, ಕಿಶೋರ್ ಬಲ್ಲಾಳ್, ಜಯರಾಮ್ ಆಚಾರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT