ಕಾರ್ಕಳ: ಬಸ್‌ನಿಂದ ಬಿದ್ದು ವಿದ್ಯಾರ್ಥಿ ಮೃತಪಟ್ಟ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಗುರುವಾರ ನಿಟ್ಟೆ ವಿದ್ಯಾಸಂಸ್ಥೆಯ ಎದುರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಸಂಸ್ಥೆಯ ಬಿಎಸ್ಸಿ ವಿದ್ಯಾರ್ಥಿ ಜನಿತ್ ಎಂಬಾತ ಬುಧವಾರ ಕಾಲೇಜಿಗೆ ಖಾಸಗಿ ಬಸ್‌ನಲ್ಲಿ ಬರುವ ಸಂದರ್ಭದಲ್ಲಿ ಬಸ್‌ನಿಂದ ಬಿದ್ದು ತೀವ್ರ ಗಾಯಗೊಂಡು, ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು.
ಈ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.
ಬಸ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕಾಗಿದೆ. ಮಳೆಗಾಲದಲ್ಲಂತೂ ವಿದ್ಯಾರ್ಥಿಗಳ ಪಾಡು ಹೇಳ ತೀರದಂತಾಗಿದೆ. ಇನ್ನಷ್ಟು ದುರಂತ ನಡೆಯುವ ಮುನ್ನ ಕಾರ್ಕಳದಿಂದ ಮಂಗಳೂರು ಕಡೆಗೆ ಸರ್ಕಾರಿ ಬಸ್ ಸೇವೆಯನ್ನು ಒದಗಿಸಬೇಕು. ಇಲ್ಲದಿದ್ದಲ್ಲಿ ಹೆಚ್ಚುವರಿ ಖಾಸಗಿ ಬಸ್‌ಗಳ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಪ್ರತಿಭಾ ಆರ್. ಅವರು ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ ಮಾತನಾಡಿ, ಈ ರೀತಿಯ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾರಿಗೆ ಅಧಿಕಾರಿಗಳ ಬಳಿ ಚರ್ಚಿಸಿ ಈ ಭಾಗದಲ್ಲಿ ಸರ್ಕಾರಿ ಬಸ್ ವ್ಯವಸ್ಥೆ ಮಾಡುವ ಕುರಿತು ಪ್ರಯತ್ನಿಸಲಾಗುವುದು ಎಂದರು.
ಖಾಸಗಿ ಬಸ್ ಮಾಲೀಕರ ಸಭೆ ಕರೆದು ಕಾಲೇಜು ಸಮಯದಲ್ಲಿ ಹೆಚ್ಚುವರಿ ಬಸ್ ಓಡಿಸುವ ಕುರಿತು ಒಂದು ವಾರದಲ್ಲಿ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಹೇಳಿದರು.
ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಕಾನೂನಾತ್ಮಕವಾಗಿ ಹಾಗೂ ಕಾಲೇಜು ಆಡಳಿತ ವತಿಯಿಂದ ದೊರೆಯಬಹುದಾದ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ವಿದ್ಯಾರ್ಥಿಗಳು ಬಸ್‌ಗಳಲ್ಲಿ ಪ್ರಯಾಣಿಸುವಾಗ ಎಚ್ಚರ ವಹಿಸಬೇಕು ಎಂದರು.
10 ವರ್ಷಗಳ ಹಿಂದೆ ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಬಸ್ ಪ್ರಯಾಣಕ್ಕಾಗಿ ಇದ್ದ ಕೂಪನ್ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತನ್ನಿ ಎಂದು ಎಬಿವಿಬಿ ಸದಸ್ಯರು ಒತ್ತಾಯಿಸಿದರು. ಬಸ್ ಕಾರಣದಿಂದ ವಿದ್ಯಾರ್ಥಿಗಳು ಕಾಲೇಜಿಗೆ ಬರುವಾಗ ವಿಳಂಬವಾದಲ್ಲಿ ವಿನಾಯಿತಿ ನೀಡಬೇಕು. ಮೃತ ವಿದ್ಯಾರ್ಥಿಯ ಕಾಲೇಜು ಶುಲ್ಕವನ್ನು ಕುಟುಂಬಕ್ಕೆ ಹಿಂದಿರುಗಿಸಿ, ಸಂಸ್ಥೆಯಿಂದ ಮಾನವೀಯ ನೆಲೆಯಲ್ಲಿ ಪರಿಹಾರವನ್ನು ಒದಗಿಸಿ ಎಂದು ಆಗ್ರಹಿಸಿದರು.
ನಿಟ್ಟೆ ವಿದ್ಯಾಸಂಸ್ಥೆಯ ಅಧಿಕಾರಿ ಯೋಗೀಶ್ ಹೆಗ್ಡೆ ಮಾತನಾಡಿ, ನಿಟ್ಟೆ ವಿದ್ಯಾಸಂಸ್ಥೆ ಕುಟುಂಬದ ಒಬ್ಬ ಸದಸ್ಯನನ್ನು ಕಳೆದುಕೊಂಡಿದೆ. ಕಾಲೇಜಿನಿಂದ ಹೆಚ್ಚುವರಿ ಬಸ್ ಅಳವಡಿಕೆ, ಕೂಪನ್ ವ್ಯವಸ್ಥೆ ಸೇರಿದಂತೆ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳ ಕುರಿತು ಸಂಸ್ಥೆಯ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಸಂಸ್ಥೆಯಿಂದ ಪರಿಹಾರವನ್ನು ಒದಗಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.