ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈಗಾರಿಕಾ ವಲಯಕ್ಕೆ ಭೂಮಿ ಕೊಟ್ಟವರಿಗೆ, ಸ್ಥಳೀಯರಿಗೆ ಕೆಲಸ ಕೊಡಿ’

ಕೆಡಿಪಿ ಸಭೆಯಲ್ಲಿ ಶಾಸಕ ಲಾಲಾಜಿ ಮೆಂಡನ್‌ ಸೂಚನೆ
Last Updated 9 ನವೆಂಬರ್ 2020, 15:42 IST
ಅಕ್ಷರ ಗಾತ್ರ

ಉಡುಪಿ: ಕೈಗಾರಿಕಾ ವಲಯಗಳ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡವರಿಗೆ ಹಾಗೂ ಸ್ಥಳೀಯರಿಗೆ ಕಾರ್ಖಾನೆಗಳು ಉದ್ಯೋಗ ನೀಡುವುದು ಕಡ್ಡಾಯ. ಕಂಪನಿಗಳು ಎಷ್ಟು ಉದ್ಯೋಗ ನೀಡಲಾಗಿದೆ ಎಂಬ ವರದಿಯನ್ನು ಸಲ್ಲಿಸಬೇಕು ಎಂದು ಕಾಪು ಶಾಸಕ ಲಾಲಾಜಿ ಮೆಂಡನ್‌ ಅಧಿಕಾರಿಗಳಿಗೆ ಸೂಚಿಸಿದರು.

ಉಡುಪಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಸ್ಥಳೀಯರಿಗೆ ಹಾಗೂ ಭೂಮಿ ಕಳೆದುಕೊಂಡವರಿಗೆ ನಿಯಮಗಳ ಪ್ರಕಾರ ಉದ್ಯೋಗ ನೀಡಿಲ್ಲ ಎಂಬ ದೂರುಗಳಿವೆ. ಈ ಬಗ್ಗೆ ಪರಿಶೀಲಿಸಿ ವರದಿ ನೀಡಿ ಎಂದು ನಿರ್ದೇಶನ ನೀಡಿದರು.

ನರೇಗಾ ಯೋಜನೆಯಡಿ ಬಚ್ಚಲುಗುಂಡಿಗಳ ನಿರ್ಮಾಣ ಹಾಗೂ ಪೌಷ್ಟಿಕ ತೋಟ ನಿರ್ಮಾಣಕ್ಕೆ ಅವಕಾಶವಿದ್ದು, ಫಲಾನುಭವಿಗಳು ಯೋಜನೆ ಸದುಪಯೋಗ ಮಾಡಿಕೊಳ್ಳುವಂತೆ ಅರಿವು ಮೂಡಿಸಬೇಕು. ಬಚ್ಚಲುಗುಂಡಿಗಳ ನಿರ್ಮಾಣದಿಂದ ಗ್ರಾಮೀಣ ಭಾಗಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬಹುದು. ಗರಿಷ್ಠ ₹ 14,000 ಅನುದಾನ ಸರ್ಕಾರದಿಂದ ಸಿಗಲಿದ್ದು, ಈ ಯೋಜನೆಯ ಅನುಷ್ಠಾನಕ್ಕೆ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ತಾಲ್ಲೂಕು ಪಂಚಾಯಿತಿ ಇಒ ಮೋಹನ್‌ ರಾಜ್ ಸೂಚಿಸಿದರು.

ಉಡುಪಿ ತಾಲ್ಲೂಕಿನಲ್ಲಿ ನೆರೆಗೆ 79 ಮನೆಗಳು ಸಂಪೂರ್ಣವಾಗಿ ಕುಸಿದಿವೆ. 130 ಮನೆಗಳು ಭಾಗಶಃ 135 ಮನೆಗಳಿಗೆ ಅಲ್ಪ ಹಾನಿ ಸೇರಿ 344 ಮನೆಗಳಿಗೆ ಹಾನಿಯಾಗಿವೆ. ಆರ್‌ಟಿಸಿ ಸಮಸ್ಯೆ ಹಾಗೂ ಅಸಮರ್ಪಕ ದಾಖಲೆಯಿಂದ ಪರಿಹಾರ ವಿತರಣೆ ವಿಳಂಬವಾಗಿದೆ ಎಂದು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಸಭೆಗೆ ಮಾಹಿತಿ ನೀಡಿದರು.

ಅಲೆವೂರಿನಲ್ಲಿ ₹ 1.60 ಕೋಟಿ ವೆಚ್ಚದಲ್ಲಿ ಯುಜಿಡಿ ಕಾಮಗಾರಿ ನಡೆಯುತ್ತಿದ್ದು, ಈ ಬಗ್ಗೆ ವರದಿ ಸಲ್ಲಿಸಿಲ್ಲ. ಶೀಘ್ರ ಕಾಮಗಾರಿ ವರದಿ ನೀಡಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಉಡುಪಿಯಲ್ಲಿ ವಲಸೆ ಕಾರ್ಮಿಕರು ಹೆಚ್ಚಾಗಿದ್ದು, ಬಾಲ್ಯವಿವಾಹದ ವಿರುದ್ಧ ಜಾಗೃತಿ ಮೂಡಿಸಬೇಕು. ನಿರಂತರವಾಗಿ ವಲಸೆ ಕಾರ್ಮಿಕರು ವಾಸವಿರುವ ಪ್ರದೇಶಕ್ಕೆ ಭೇಟಿನೀಡಿ ಪರಿಶೀಲಿಸಬೇಕು ಎಂದು ಹೇಳಿದರು.

ಶಿಕ್ಷಣ ಇಲಾಖೆಯ ಸೇರ್ಪಡೆ ಮಾರ್ಪಾಡು ಯೋಜನೆಯಡಿ ಶಾಲೆಗಳಿಗೆ ಶೌಚಾಲಯ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳು ನಡೆದಿದ್ದು, ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಈ ಕುರಿತು ಪರಿಶೀಲಿಸಿ ಹಣ ಬಿಡುಗಡೆ ಮಾಡುವಂತೆ ಬಿಇಒ ಮಂಜುಳಾ ಮನವಿ ಮಾಡಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಕಾಮತ್, ಉಪಾಧ್ಯಕ್ಷ ಶರತ್ ಬೈಲಕೆರೆ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶಿಲ್ಪಾ ರವೀಂದ್ರ ಕೋಟ್ಯಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT