ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇದಾರೋತ್ಥಾನ ಟ್ರಸ್ಟ್‌ ಉದ್ಘಾಟನೆ: 2000 ಎಕರೆ ಹಡಿಲು ಭೂಮಿಯಲ್ಲಿ ಕೃಷಿ

ಶಾಸಕ ರಘುಪತಿ ಭಟ್ ಅಧ್ಯಕ್ಷ,55 ಮಂದಿ ಶಾಶ್ವತ ಟ್ರಸ್ಟಿಗಳು
Last Updated 29 ಏಪ್ರಿಲ್ 2021, 16:37 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ವ್ಯಾಪ್ತಿಯಲ್ಲಿ ಹಡಿಲುಬಿದ್ದ ಭೂಮಿಯಲ್ಲಿ ಕೃಷಿ ಮಾಡುವ ಉದ್ದೇಶದಿಂದ ಕೇದಾರೋತ್ಥಾನ ಟ್ರಸ್ಟ್‌ ಸ್ಥಾಪಿಸಿದ್ದು, ಈ ವರ್ಷ 2 ಸಾವಿರ ಎಕರೆಗೂ ಹೆಚ್ಚು ಭೂಮಿಯಲ್ಲಿ ಭತ್ತ ನಾಟಿ ಮಾಡಲಾಗುವುದು ಎಂದು ಶಾಸಕ ಹಾಗೂ ಟ್ರಸ್ಟ್‌ನ ಅಧ್ಯಕ್ಷರೂ ಆಗಿರುವ ಕೆ.ರಘುಪತಿ ಭಟ್‌ ತಿಳಿಸಿದರು.

ಗುರುವಾರ ಅಂಬಾಗಿಲಿನ ಅಮೃತ್ ಗಾರ್ಡನ್‌ನಲ್ಲಿ ಕೇದಾರೋತ್ಥಾನ ಟ್ರಸ್ಟ್‌ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಸಕರು, ಅಂತರ್ಜಲ ಮಟ್ಟ ಹೆಚ್ಚಳ, ಹಡಿಲು ಭೂಮಿ ಹಸಿರೀಕರಣ ಹಾಗೂ ಆಹಾರ ಸ್ವಾವಲಂಬನೆಯ ಉದ್ದೇಶದಿಂದ ಹಡಿಲು ಭೂಮಿ ಕೃಷಿ ಅಭಿಯಾನವನ್ನು ಕೇದಾರೋತ್ಥಾನ ಟ್ರಸ್ಟ್‌ನಿಂದ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ಟ್ರಸ್ಟ್‌ನಲ್ಲಿ 19 ‍ಪಂಚಾಯಿತಿಗಳ ಅಧ್ಯಕ್ಷರು, 35 ವಾರ್ಡ್‌ಗಳ ಸದಸ್ಯರು ಶಾಶ್ವತ ಟ್ಟಸ್ಟಿಗಳಾಗಿದ್ದು, ಶಾಸಕರು ಅಧ್ಯಕ್ಷರಾಗಿರುತ್ತಾರೆ. ಜತೆಗೆ, ಪ್ರಧಾನ ಕಾರ್ಯದರ್ಶಿಗಳಾಗಿ ನಿಟ್ಟೂರು ಶಾಲೆಯ ನಿವೃತ್ತ ಶಿಕ್ಷಕರಾದ ಮುರಳಿ ಕಡೆಕಾರ್‌, ಕೋಶಾಧಿಕಾರಿಯಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ ಅವರನ್ನು ನೇಮಿಸಲಾಗಿದೆ ಎಂದರು.‌

ಕೇದಾರೋತ್ಥಾನ ಟ್ರಸ್ಟ್‌ ಈಗಾಗಲೇ ಎಲ್ಲ ಪಂಚಾಯಿತಿಗಳಲ್ಲಿ ಸಭೆ ನಡೆಸಿ ಹಡಿಲುಭೂಮಿ ಗುರುತಿಸಿದ್ದು, ಭತ್ತ ನಾಟಿಗೆ ಭೂಮಿ ಹಸನು ಮಾಡುವ ಕಾರ್ಯದಲ್ಲಿ ನಿರತವಾಗಿದೆ. ತೋಡುಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. 2000 ಎಕರೆ ನಾಟಿಗೆ ಬೇಕಾಗುವ ₹ 4 ರಿಂದ ₹ 5ಕೋಟಿ ಹಣವನ್ನು ದಾನಿಗಳು ಹಾಗೂ ಮುಂಗಡ ಪಡೆಯಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಲಾಗುತ್ತಿದ್ದು, ಬೆಳೆದ ಭತ್ತವನ್ನು ಮಾರಾಟ ಮಾಡಿ ಖರ್ಚು ವೆಚ್ಚಕ್ಕೆ ಸರಿದೂಗಿಸಲಾಗುವುದು. ಹಡಿಲುಬಿದ್ದ ಕೃಷಿ ಭೂಮಿ ಮತ್ತೆ ನಳನಳಿಸಬೇಕು, ರೈತರು ಕೃಷಿಯತ್ತ ಮುಖಮಾಡಬೇಕು. ಭೂಮಿ ಕೊಟ್ಟ ರೈತರು ಮುಂದಿನ ವರ್ಷ ಸ್ವತಃ ಕೃಷಿ ಮಾಡಲು ಮುಂದೆ ಬಂದರೆ ಭೂಮಿ ಮರಳಿಸಲಾಗುವುದು. ಟ್ರಸ್ಟ್‌ನ ಉದ್ದೇಶವೂ ಇದೇ ಆಗಿದೆ ಎಂದರು.

ಟ್ರಸ್ಟ್‌ ದೀರ್ಘ ಅವಧಿಯವರೆಗೂ ನಿರ್ಧಿಷ್ಟ ಭೂಮಿಯಲ್ಲಿ ಕೃಷಿ ಮಾಡುವ ಉದ್ದೇಶ ಹೊಂದಿಲ್ಲ. ಆದರೆ, ಪ್ರತಿವರ್ಷ ಹಡಿಲುಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸುವ ಕಾರ್ಯ ಮಾಡಲಿದೆ ಎಂದು ಶಾಸಕ ರಘುಪತಿ ಭಟ್‌ ವಿವರ ನೀಡಿದರು.

ಬಿತ್ತನೆಗೆ ಬೇಕಾದ ಬೀಜದ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಶೀಘ್ರ ನಾಟಿ ಕಾರ್ಯ ನಡೆಯಲಿದೆ. ಕೇದಾರೋತ್ಥಾನ ಟ್ರಸ್ಟ್‌ ರಾಜಕೀಯ ಹೊರತಾದ ಟ್ರಸ್ಟ್‌ ಆಗಿದ್ದು, ವ್ಯವಹಾರದಲ್ಲಿ ಸಂಪೂರ್ಣ ಪಾರದರ್ಶಕತೆ ಇರಲಿದೆ. ಧೀರ್ಘಕಾಲದ ವರೆಗೂ ಅಭಿಯಾನ ಮುಂದುವರಿಸಬೇಕು ಎಂಬ ಉದ್ದೇಶದಿಂದ ರಚಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಟ್ರಸ್ಟ್‌ನ ಕೋಶಾಧಿಕಾರಿ ರಾಘವೇಂದ್ರ ಕಿಣಿ, ಟ್ರಸ್ಟ್‌ನ ಸದಸ್ಯ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಸದಸ್ಯ ಮಾರಾಳಿ ಪ್ರತಾಪ್ ಹೆಗ್ಡೆ, ಮುಖಂಡ ಮಹೇಶ್ ಠಾಕೂರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT