ಮಂಗಳವಾರ, ಅಕ್ಟೋಬರ್ 20, 2020
22 °C

ಉಡುಪಿ: ಕೆಎಂಸಿಯಲ್ಲಿ ಅಪರೂಪದ ರಕ್ತ ದಾನಿಗಳ ನೋಂದಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಅಪರೂಪದ ರಕ್ತದ ಗುಂಪು ಹೊಂದಿರುವ ರೋಗಿಗಳ ಜೀವ ಉಳಿಸುವಲ್ಲಿ ಅಪರೂಪದ ರಕ್ತದಾನಿಗಳ ದಾಖಲೀಕರಣ ಪ್ರಕ್ರಿಯೆ ಸಹಕಾರಿಯಾಗಲಿದೆ ಎಂದು ಮಾಹೆ ಉಪ ಕುಲಪತಿ ಡಾ.ಎಂ.ಡಿ.ವೆಂಕಟೇಶ್ ಹೇಳಿದರು.

ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಅಪರೂಪದ ರಕ್ತದಾನಿಗಳ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 'ಅಪರೂಪದ ರಕ್ತದಾನಿಗಳ ನೋಂದಣಿ ಹಾಗೂ ದಾಖಲೀಕರಣ ದಕ್ಷಿಣ ಭಾರತದಲ್ಲೇ ಮೊದಲ ಪ್ರಯತ್ನವಾಗಿದೆ' ಎಂದು ಶ್ಲಾಘಿಸಿದರು.

ಜೆಮ್‌ಶೆಡ್‌ಪುರದ ಮಣಿಪಾಲ್-ಟಾಟಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಪೂರ್ಣಿಮಾ ಬಾಳಿಗಾ ಮಾತನಾಡಿ, ‘ಅಪರೂಪದ ರಕ್ತದ ಗುಂಪು ಹೊಂದಿರುವ ರೋಗಿಗಳಿಗೆ ರಕ್ತ ಪೂರೈಕೆಗೆ ತಗುಲುವ ಸಮಯವನ್ನು ಕಡಿಮೆ ಮಾಡಿ ರೋಗಿಯ ಜೀವ ಉಳಿಸಲು ನೋಂದಣಿ ಕಾರ್ಯ ನೆರವಾಗಲಿದೆ’ ಎಂದರು.

ಆಸ್ಪತ್ರೆಯ ರಕ್ತ ಕೇಂದ್ರದ ಮುಖ್ಯಸ್ಥರಾದ ಡಾ. ಶಮೀ ಶಾಸ್ತ್ರಿ ಮಾತನಾಡಿ, ‘1000 ಜನರಲ್ಲಿ ಶೇ 1ಕ್ಕಿಂತ ಕಡಿಮೆ ಇರುವ ರಕ್ತದ ಗುಂಪನ್ನು ಅಪರೂದದ ರಕ್ತದ ಗುಂಪು ಎಂದು ಕರೆಯಲಾಗುತ್ತದೆ. ಪ್ರಾದೇಶಿಕವಾಗಿ ಅಪರೂಪದ ರಕ್ತದಾನಿಗಳ ವಿವರ ಕಲೆಹಾಕಿ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ‘ಓ' ರಕ್ತದ ಗುಂಪು ಹೊಂದಿರುವ ದಾನಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರಾಯೋಗಿಕವಾಗಿ ಮಹತ್ವದ್ದಾಗಿರುವ 23 ವಿಧದ ಕೆಂಪು ರಕ್ತಕಣ ಪ್ರತಿಜನಕಗಗಳನ್ನು ಪರೀಕ್ಷಿಸಲಾಗಿದ್ದು, 26 ಅಪರೂಪದ ರಕ್ತದ ಫಿನೋಟೈಪ್‌ಗಳನ್ನು ಹೊಂದಿರುವ ಹಾಗೂ 40 ಅಪರೂಪದ ರಕ್ತ ದಾನಿಗಳ ವಿವರವನ್ನು ಕೆಎಂಸಿ ಆಸ್ಪತ್ರೆ ಹೊಂದಿದೆ ಎಂದರು.

ಅಪರೂಪದ ರಕ್ತ ಫಿನೋಟೈಪ್‌ಗಾಗಿ ವೈದ್ಯರು ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ವೆಬ್‌ಸೈಟ್‌ನಲ್ಲಿ ಮಾಹಿತಿ ಪಡೆಯಬಹುದು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಹೇಳಿದರು.

ಕೆಎಂಸಿ ಡೀನ್ ಡಾ.ಶರತ್ ರಾವ್, ಸೂರತ್‌ನ ಲೋಕ ಸಮರ್ಪನ್‌ ಪ್ರಾದೇಶಿಕ ರಕ್ತ ಕೇಂದ್ರದ ವಿಜ್ಞಾನಿ ಡಾ.ಸನ್ಮುಕ್ ಜೋಶಿ, ಲಕ್ನೋದ ಎಸ್‌ಜಿಪಿಜಿಐಎಂಎಸ್‌ನ ಡಾ.ರಾಜೇಂದ್ರ ಚೌಧರಿ, ಇಂಡಿಯನ್ ಸೊಸೈಟಿ ಆಫ್ ಟ್ರಾನ್ಸ್‌ಫ್ಯೂಷನ್ ಮೆಡಿಸಿನ್ ಅಧ್ಯಕ್ಷ ಡಾ. ದೇಬಶಿಶ್ ಗುಪ್ತಾ ರಕ್ತದ ಮಹತ್ವ ಕುರಿತು ಮಾತನಾಡಿದರು.

ಮಾಹೆ ಸಹ ಉಪಕುಲಪತಿ ಡಾ.ಪಿಎಲ್‌ಎನ್‌ಜಿ ರಾವ್ (ಗುಣಮಟ್ಟ ಮತ್ತು ಆರೋಗ್ಯ ವಿಜ್ಞಾನ ವಿಭಾಗ), ಆಸ್ಫತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ್ಣ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.