ಮಂಗಳವಾರ, ಏಪ್ರಿಲ್ 7, 2020
19 °C
ದುಬೈನಿಂದ ಮರಳಿದ್ದ ವ್ಯಕ್ತಿಯಲ್ಲಿ ಸೋಂಕು ದೃಢ; ವ್ಯಕ್ತಿಯ ಪ್ರಯಾಣ ವಿವರ ಪಡೆದ ಅಧಿಕಾರಿಗಳು

ಉಡುಪಿಯಲ್ಲಿ ಮೊದಲ ಕೋವಿಡ್‌–19 ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಉಡುಪಿಯಲ್ಲಿ ಮೊದಲ ಕೋವಿಡ್‌ ಸೋಂಕು ಪ್ರಕರಣ ಬುಧವಾರ ದೃಢಪಟ್ಟಿದೆ. ಮಣಿಪಾಲ ನಿವಾಸಿ 34 ವರ್ಷದ ವ್ಯಕ್ತಿ ಕೋವಿಡ್ ಸೋಂಕಿತ ಎಂದು ತಿಳಿದು ಬಂದಿದೆ.

ಮಾರ್ಚ್‌ 18ರಂದು ದುಬೈನಿಂದ ಉಡುಪಿಗೆ ಮರಳಿದ್ದ ವ್ಯಕ್ತಿಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು.  23ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಪಾಸಿಟಿವ್ ಬಂದಿದ್ದು, ಅಂತಿಮ ವರದಿಗೆ ಕಾಯುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು.

ಸೋಂಕಿತ ವ್ಯಕ್ತಿಯ ಪ್ರಯಾಣದ ವಿವರ ಹಾಗೂ ಯಾರೊಂದಿಗೆ ಸಂಪರ್ಕವಿದ್ದ ಎಂಬ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ವ್ಯಕ್ತಿಯ ಜತೆ ವಿಮಾನದಲ್ಲಿ ಪ್ರಯಾಣ ಮಾಡಿದವರ ವಿವರ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಬಳಿ ಮಾಹಿತಿ ಕೇಳಲಾಗಿದೆ ಎಂದು ಡಿಸಿ ತಿಳಿಸಿದರು.

ಸೋಂಕಿತ ವ್ಯಕ್ತಿಯ ಮಣಿಪಾಲದ ಸಂಸ್ಥೆಯಲ್ಲಿ ನೌಕರನಾಗಿದ್ದು, ದುಬೈನಿಂದ ಬಂದ ದಿನವೇ ರಜೆ ಕೊಟ್ಟು ಮನೆಗೆ ಕಳುಹಿಸಲಾಗಿತ್ತು. ಪತ್ನಿ ಹಾಗೂ ಮಗು ಕೂಡ ತವರು ಮನೆಗೆ ಹೋಗಿದ್ದು, ಒಬ್ಬನೇ ಇದ್ದ ಎಂಬ ಮಾಹಿತಿ ಸಿಕ್ಕಿದೆ. 18 ರಿಂದ 23ರವರೆಗೆ ಆತ ಎಲ್ಲೆಲ್ಲಿ ಪ್ರಯಾಣ ಮಾಡಿದ್ದಾನೆ, ಮನೆಗೆ ಯಾರೆಲ್ಲ ಬಂದಿದ್ದಾರೆ, ಯಾರನ್ನು ಭೇಟಿಯಾಗಿದ್ದಾನೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.

ಅಂತಿಮ ವರದಿ ಬಂದ ಕೂಡಲೇ ಸೋಂಕಿತ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಯಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಐಸೊಲೇಟೆಡ್‌ ವಾರ್ಡ್‌ಗೆ ಶಿಫ್ಟ್‌ ಮಾಡಲಾಗುವುದು ಎಂದು ತಿಳಿಸಿದರು.

11 ಸೋಂಕಿತರು ಆಸ್ಪತ್ರೆಗೆ ದಾಖಲು

ಬುಧವಾರ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ 11 ಮಂದಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದು, ರೋಗಿಗಳ ಗಂಟಲಿನ ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹಿಂದೆ ಕಳುಹಿಸಿದ್ದ 25 ಮಾದರಿಗಳಲ್ಲಿ ಒಂದು ಹೊರತುಪಡಿಸಿ ಉಳಿದ ವರದಿಗಳು ನೆಗೆಟಿವ್ ಬಂದಿದೆ ಎಂದು ಡಿಎಚ್‌ಒ ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದರು.

ಲಾಠಿ ಬೀಸಿದ ಪೊಲೀಸರು

ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ಅಡ್ಡಾಡುತ್ತಿದ್ದ ವಾಹನ ಸವಾರರಿಗೆ ಪೊಲೀಸರು ಲಾಠಿ ಬೀಸಿದರು. ಬೈಕ್‌ ಹಾಗೂ ಕಾರುಗಳಲ್ಲಿ ಹೋಗುತ್ತಿದ್ದವರನ್ನು ತಡೆದು ಲಾಠಿ ಏಟು ಕೊಟ್ಟು ಮನೆಗೆ ಕಳುಹಿಸಿದರು. ಕೋಡಿ ಬೀಚ್‌ಗೆ ಬಂದಿದ್ದವರನ್ನೂ ಪೊಲೀಸರು ಚದುರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು