ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಗದ್ದೆಗಿಳಿದು ಕಳೆ ಕಿತ್ತ ಕೇಂದ್ರ ಕೃಷಿ ಸಚಿವೆ

ಕಡೇಕಾರ್‌ನಲ್ಲಿ ಕೇದಾರೋತ್ಥಾನ ಟ್ರಸ್ಟ್‌ನ ಹಡಿಲುಭೂಮಿ ಕೃಷಿ ಆಂದೋಲನ ಕಾರ್ಯಕ್ರಮದಲ್ಲಿ ಭಾಗಿ
Last Updated 19 ಆಗಸ್ಟ್ 2021, 14:13 IST
ಅಕ್ಷರ ಗಾತ್ರ

ಉಡುಪಿ: ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಗುರುವಾರ ಕಡೆಕಾರಿನಲ್ಲಿ ಭತ್ತದ ಗದ್ದೆಗಿಳಿದು ಕಳೆ ಕಿತ್ತರು.

ಬಳಿಕ ಮಾತನಾಡಿದ ಸಚಿವರು, ಹಿಂದೆ, ಕರಾವಳಿಗೆ ಬೇಕಾದ ಅಕ್ಕಿಯನ್ನು ಸ್ಥಳೀಯವಾಗಿ ರೈತರು ಬೆಳೆಯುತ್ತಿದ್ದಾರು. ಪ್ರಸ್ತುತ ಬೇಡಿಕೆಯ ಶೇ 95ರಷ್ಟು ಅಕ್ಕಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಕೃಷಿ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಭೂಮಿಯನ್ನು ಹಡಿಲು ಬಿಟ್ಟಿರುವುದು ಹಾಗೂ ಕೃಷಿಯಿಂದ ರೈತರು ವಿಮುಖರಾಗುತ್ತಿರುವುದು ಇದಕ್ಕೆ ಕಾರಣ ಎಂದರು.

ಯೂರಿಯಾ ರಸಗೊಬ್ಬರ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬೇವು ಲೇಪಿತ ಯೂರಿಯಾವನ್ನು ಮಾರುಕಟ್ಟೆಗೆ ತಂದಿದೆ. ರಸಗೊಬ್ಬರ ಮೌಲ್ಯವರ್ಧನೆಗೆ ನ್ಯಾನೋ ತಂತ್ರಜ್ಞಾನದಲ್ಲಿ ರಸಗೊಬ್ಬರ ತಯಾರಿಸಲಾಗಿದ್ದು, ಕೇವಲ 200 ಮಿಲೀ ರಸ ಗೊಬ್ಬರ ಒಂದು ಎಕರೆಗೆ ಬಳಸಬಹುದು ಎಂದರು.

ಹಿಂದೆ ರೈತರ ಬೆಳೆ ನಾಶವಾದರೆ ಸರ್ವೆ ಕಾರ್ಯ ವಿಳಂಬವಾಗುತ್ತಿತ್ತು. ರೈತರಿಗೆ ಸೂಕ್ತ ಪರಿಹಾರ ಸಿಗುತ್ತಿರಲಿಲ್ಲ. ಆದರೆ, ಈಗ ರೈತ ಜಮೀನಿನಲ್ಲಿ ನಿಂತು ನಾಶವಾದ ಬೆಳೆಯ ಫೋಟೋ ತೆಗೆದು ಆ್ಯಪ್‌ಗೆ ಅಪ್‌ಲೋಡ್ ಮಾಡಿದರೆ ಸಂತ್ರಸ್ತ ರೈತನ ಖಾತೆಗೆ ಪರಿಹಾರ ಬರುತ್ತದೆ. ಪರಿಹಾರ ವಿಳಂಬವಾದರೆ, ಮೇಲ್ಮನವಿ ಸಲ್ಲಿಸುವ ಅವಕಾಶವೂ ಆ್ಯಪ್‌ನಲ್ಲಿದೆ ಎಂದರು.

ಪ್ರಧಾನಿ ಮೋದಿ ಸರ್ಕಾರ ಸಣ್ಣ ಮತ್ತು ಮಧ್ಯಮ ರೈತರಿಗೆ ಯಂತ್ರೋಪಕರಣ ಸಬ್ಸಿಡಿ, ಕೃಷಿ ಸಿಂಚಾಯಿ, ಪರಂಪರಾಗತ ಕೃಷಿ ಯೋಜನೆ ಜಾರಿ ಮಾಡಿದೆ. ರೈತರ ಆದಾಯ ದ್ವಿಗುಣಗೊಳಿಸುವುದು ಸರ್ಕಾರದ ಉದ್ದೇಶ ಎಂದರು.

ಕೇದಾರೋತ್ಥಾನ ಟ್ರಸ್ಟ್ ಅಧ್ಯಕ್ಷರಾದ ಶಾಸಕ ಕೆ.ರಘುಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಬೆಳೆ ದಾಸ್ತಾನಿಗೆ ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ, ರೈತರು ಕಡಿಮೆ ಬೆಲೆಗೆ ಭತ್ತ ಮಾರಾಟ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ಕರ್ನಾಟಕಕ್ಕೆ ಸಕಾಲದಲ್ಲಿ ಒದಗಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಶರ್ಮಿನ್ ಬಾನು, ಸಮೃದ್ಧಿ ಮತ್ತು ಶಿವಪ್ರಸಾದ್ ಕೃಷಿಯ ಬಗೆಗಿನ ಅನುಭವ ಹಂಚಿಕೊಂಡರು. ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಟ್ರಸ್ಟ್ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT