ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿ ಬಸ್: ವಿದ್ಯಾರ್ಥಿಗಳ ಪ್ರತಿಭಟನೆ

ಕೊಲ್ಲೂರು– ಕುಂದಾಪುರ ಮಾರ್ಗದಲ್ಲಿ ಬಸ್‌ ಓಡಿಸಲು ಒತ್ತಾಯ
Last Updated 12 ಜೂನ್ 2022, 6:09 IST
ಅಕ್ಷರ ಗಾತ್ರ

ಕುಂದಾಪುರ: ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಹಾಗೂ ಕುಂದಾಪುರ ಮಾರ್ಗವಾಗಿ ಇದುವರೆಗೂ ಯಾವುದೇ ಸರ್ಕಾರಿ ಬಸ್‌ ಸಂಚಾರ ಇಲ್ಲದಿರುವುದು ವ್ಯವಸ್ಥೆಯ ದುರಂತ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲ್ಲೂಕು ಸಂಚಾಲಕ ಜಯಸೂರ್ಯ ಶೆಟ್ಟಿ ಹೇಳಿದರು.

ಕೆರಾಡಿ- ಬೆಳ್ಳಾಲ- ಕುಂದಾಪುರ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಕಲ್ಪಿಸುವಂತೆ ಆಗ್ರಹಿಸಿ ಎಬಿವಿಪಿ ಕುಂದಾಪುರದ ಘಟಕದ ವತಿಯಿಂದ ಶನಿವಾರ ಇಲ್ಲಿನ ಮಿನಿ ವಿಧಾನಸೌಧದ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಬಸ್ ವ್ಯವಸ್ಥೆ ಇಲ್ಲದೇ ಈ ಭಾಗದ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ಸಂಕಷ್ಟ ಎದುರಿಸುತ್ತಿದ್ದಾರೆ. ಒಂದು ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸೇರಿಸಿ ಡಿಪೊ ಮುಂದೆ ಧರಣಿ ಮಾಡಲಾಗುವುದು. ಕೆಎಸ್‌ಆರ್‌ಟಿಸಿ ಎಲ್ಲ ಮಾರ್ಗದ ಬಸ್‌ಗಳನ್ನು ತಡೆ ಹಿಡಿಯಲಾಗುವುದು. ಈ ಮಾರ್ಗದಲ್ಲಿ ಸರ್ಕಾರಿ ಬಸ್‌ ವ್ಯವಸ್ಥೆ ಇಲ್ಲದಿರುವುದರಿಂದ, ಬಡ ವಿದ್ಯಾರ್ಥಿಗಳು ಹೆಚ್ಚಿನ ಹಣ ನೀಡಿ ಹೋಗಬೇಕಾದ ಪರಿಸ್ಥಿತಿ ಇದೆ. ಕೊಲ್ಲೂರು-ಕುಂದಾಪುರ ಮಾರ್ಗದಲ್ಲಿ ಅಂದಾಜು 1,000ದಿಂದ 2,000 ವಿದ್ಯಾರ್ಥಿಗಳು ದಿನನಿತ್ಯ ಪ್ರಯಾಣ ಮಾಡುತ್ತಾರೆ’ ಎಂದರು.

ಕೆರಾಡಿ-ಬೆಳ್ಳಾಲ-ಕುಂದಾಪುರ ಮಾರ್ಗದಲ್ಲಿ 400 ವಿದ್ಯಾರ್ಥಿಗಳು, ಮಾರಣಕಟ್ಟೆ -ಕುಂದಾಪುರ ಮಾರ್ಗದಲ್ಲಿ ಅಂದಾಜು 500 ವಿದ್ಯಾರ್ಥಿಗಳು ಸರ್ಕಾರಿ ಸಾರಿಗೆ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ಸಮಸ್ಯೆಗೆ ಸಂಬಂಧಿಸಿ ಅಧಿಕಾರಿಗಳು, ಸಚಿವರು ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ. ಶಾಸಕರು, ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಸಂಘಟನೆಯ ವಿದ್ಯಾರ್ಥಿ ಪ್ರಮುಖರಾದ ಧ್ವನಿ, ಭಂಡಾರ್ಕಾರ್ಸ್ ಕಾಲೇಜಿನ ನಾಗೇಶ್, ಶ್ರೀನಿಧಿ, ಬಿ.ಬಿ. ಹೆಗ್ಡೆ ಕಾಲೇಜಿನ ಅನುಷಾ, ಧನುಷ್, ಬಸ್ರೂರು ಶಾರದಾ ಕಾಲೇಜಿನ ರಂಜಿತ್, ದೀಪಾ, ಕೋಟೇಶ್ವರ ಸರ್ಕಾರಿ ಪದವಿ ಕಾಲೇಜಿನ ಅಭಿಷೇಕ್, ಆರ್.ಎನ್ ಶೆಟ್ಟಿ ಕಾಲೇಜಿನ ನಿತಿನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT