ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರಳತೆಯ ಮೇರು ವ್ಯಕ್ತಿತ್ವದ ಮುತ್ಸದ್ದಿ’

ಎ.ಜಿ.ಕೊಡ್ಗಿ ಅವರಿಗೆ ಬ್ಲಾಕ್‌ ಕಾಂಗ್ರೆಸ್ ವತಿಯಿಂದ ಸಾರ್ವಜನಿಕ ಶ್ರದ್ಧಾಂಜಲಿ
Last Updated 21 ಜೂನ್ 2022, 4:47 IST
ಅಕ್ಷರ ಗಾತ್ರ

ಕುಂದಾಪುರ: ‘ಜನ ನಾಯಕರಾಗಲು ವೇದಿಕೆಯೇ ಬೇಕಿಲ್ಲ. ಜನಸೇವೆ ಮಾಡುವ ಇಚ್ಛಾ ಶಕ್ತಿ ಒಂದಿದ್ದರೆ ಸಾಕು ಎನ್ನುವ ಆದರ್ಶ ಹಾಗೂ ಪ್ರಾಮಾಣಿಕತೆಯನ್ನು ತನ್ನ ಜೀವನದುದ್ದಕ್ಕೂ ಎ.ಜಿ.ಕೊಡ್ಗಿ ಮೈಗೂಡಿಸಿಕೊಂಡಿದ್ದರು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಅಭಿಪ್ರಾಯಪಟ್ಟರು.

ಈಚೆಗೆ ನಿಧನರಾದ ಮಾಜಿ ಶಾಸಕ ಎ.ಜಿ.ಕೊಡ್ಗಿ ಅವರಿಗೆ ಕುಂದಾಪುರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸೋಮವಾರ ಕುಂದಾಪುರ ಬ್ಲಾಕ್‌ ಕಾಂಗ್ರೆಸ್ ಆಶ್ರಯದಲ್ಲಿ ಹಮ್ಮಿಕೊಂಡ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾಮಾಜಿಕ ವ್ಯವಸ್ಥೆಯಲ್ಲಿ ಸಮಯ ಸಾಧಕರಾಗದೆ ಪ್ರತಿಯೊಬ್ಬರ ಕೊಡುಗೆಗಳನ್ನು ಸ್ಮರಿಸುವ ಮೂಲಕ ಅವರನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಬದ್ಧತೆಯನ್ನು ತೋರಬೇಕು. ಸಾಮಾಜಿಕ ಜೀವನದಲ್ಲಿ ಅಧಿಕಾರ, ಅಂತಸ್ತು ಯಾವುದೂ ಶಾಶ್ವತವಲ್ಲ. ನಮ್ಮ ಜನಪರ ನಿಲುವು ಹಾಗೂ ಹೋರಾಟಗಳು ಮಾತ್ರ ಶಾಶ್ವತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಾಮಾಣಿಕತೆ, ಬದ್ಧತೆ, ನೇರ ನಡೆ-ನುಡಿ ಹಾಗೂ ಹೋರಾಟಗಳಿಗೆ ಕೊಡ್ಗಿಯವರು ಅನ್ವರ್ಥಕವಾಗಿದ್ದರು. ಕೊಡ್ಗಿಯವರ ಶೈಲಿ ಹಾಗೂ ಬದ್ಧತೆಯ ಗುಣ ಲಕ್ಷಣಗಳು ಪ್ರಸ್ತುತ ಕಾಲಘಟ್ಟದಲ್ಲಿ ಕಡಿಮೆಯಾಗುತ್ತಿದೆಯೋ ಎನ್ನುವ ಭಾವನೆ ಬಲವಾಗುತ್ತಿದೆ. ಕೃಷಿ, ಸಹಕಾರ, ಬ್ಯಾಂಕಿಂಗ್, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸ್ಮರಣೀಯ ಸೇವೆ ಸಲ್ಲಿಸಿದ್ದ ಅವರು ಎಂದಿಗೂ ಯಾರನ್ನು ಮೆಚ್ಚಿಸುವ ಕಾರ್ಯಕ್ಕೆ ಮುಂದಾಗಿರಲಿಲ್ಲ’ ಎಂದರು.

‘ಹೇಗಾದರೂ ಮಾಡಿ ಚುನಾವಣೆ ಗೆಲ್ಲಲೇ ಬೇಕು. ಹಣ ಎಷ್ಟು ಖರ್ಚಾದರೂ ಅಡ್ಡಿಯಿಲ್ಲ ಗೆಲುವು ನಮ್ಮದಾಗಬೇಕು ಎನ್ನುವ ಸಿದ್ಧಾಂತಗಳಿಗೆ ಎಂದೂ ಕೊಡ್ಗಿಯವರು ಒಪ್ಪಿಕೊಂಡಿರಲಿಲ್ಲ. ರಾಜಕಾರಣದಲ್ಲಿ ದ್ವೇಷ, ವೈರತ್ವ ಹಾಗೂ ವಂಚನೆ ಸಲ್ಲದು ಎಂದು ಪ್ರತಿಪಾದನೆ ಮಾಡುತ್ತಿದ್ದ ಅವರು, ಹಾಗೆಯೇ ನಡೆದುಕೊಂಡಿದ್ದರು. ಯುವ ಸಮುದಾಯದ ಅಚ್ಚು ಮೆಚ್ಚಿನ ಮಾರ್ಗದರ್ಶಕರಾಗಿದ್ದ ಅವರು, ಅನೇಕ ಯುವ ನಾಯಕರನ್ನು ಹುಟ್ಟು ಹಾಕಿದ್ದರು. ಸರಳತೆಯ ಮೇರು ವ್ಯಕ್ತಿತ್ವ ಹೊಂದಿದ್ದ ಅವರ ಮನೆಯಲ್ಲಿ ನೀಡುವ ಆತಿಥ್ಯ ಹಾಗೂ ಅತಿಥಿಗಳನ್ನು ನಡೆಸಿಕೊಳ್ಳುವ ರೀತಿ ಇತರರಿಗೆ ಮಾದರಿಯಾದುದು. ತಂದೆಯ ಗುಣ-ಸ್ವಭಾವವನ್ನು ಮೈಗೂಡಿಸಿಕೊಂಡಿರುವ ಅವರ ಮಕ್ಕಳು ತಂದೆಯ ಆದರ್ಶತೆಯನ್ನು ಮುನ್ನೆಡೆಸಲಿ’ ಎಂದರು.

ನುಡಿ-ನಮನ ಸಲ್ಲಿಸಿದ ರಾಜ್ಯ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮಾಣಿ ಗೋಪಾಲ, ‘ಮಾಜಿ ಮುಖ್ಯಮಂತ್ರಿ ದೇವರಾಜ್‌ ಅರಸು ಅವರ ನಿಕಟವರ್ತಿಯಾಗಿದ್ದ ಎ.ಜಿ.ಕೊಡ್ಗಿ ಅವರು ಅರಸು ಅವರ ಕಷ್ಟ ಕಾಲದಲ್ಲಿ ಅವರ ಜತೆಗೆ ಇದ್ದರು. ತಮ್ಮ ನೇರ-ನಡೆ ನುಡಿಗಳಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಯಕತ್ವ ರೂಪಿಸಿಕೊಂಡಿದ್ದ ಅವರು, ಸ್ವತಃ ಭೂ ಮಾಲಿಕರಾಗಿದ್ದರೂ ಭೂ ಮಸೂದೆ ಜಾರಿಗೆ ಬಂದಾಗ ತಮ್ಮ ಒಕ್ಕಲುಗಳಿಗೆ ಭೂಮಿಯನ್ನು ಹಂಚಿಕೆ ಮಾಡುವುದರ ಮೂಲಕ ಇತರರಿಗೆ ಮಾದರಿಯಾಗಿ ನಡೆದುಕೊಂಡಿದ್ದರು. ಜಾತಿ-ಮತ-ಪಂಥ ವನ್ನು ಮೀರಿದ ಅವರ ವ್ಯಕ್ತಿತ್ವಕ್ಕೆ ಪರ್ಯಾಯ ಆಯ್ಕೆಯೇ ಇಲ್ಲ’ ಎಂದರು.

ಜಿಲ್ಲಾ ಕಾಂಗ್ರೆಸ್ ಮುಖಂಡ ಮಲ್ಯಾಡಿ ಶಿವರಾಮ್ ಶೆಟ್ಟಿ, ವಕೀಲ ರವಿರಾಜ್ ಹೆಗ್ಡೆ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಸಂಪಿಗೇಡಿ ಸಂಜೀವ ಶೆಟ್ಟಿ, ಕೆದೂರು ಸದಾನಂದ ಶೆಟ್ಟಿ ನುಡಿ-ನಮನ ಸಲ್ಲಿಸಿದರು. ಕುಂದಾಪುರ ಬ್ಲಾಕ್‌ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಪ್ರಾಸ್ತಾವಿಕ ಮಾತನಾಡಿದರು. ಸೂರ್ಯಪ್ರಕಾಶ್ ದಾಮ್ಲೆ ನಿರೂಪಿಸಿದರು, ಅಮಾಸೆಬೈಲ್ ಕೃಷ್ಣ ಪೂಜಾರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT