ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಶಿನ ಗುಂಡಿ ಜಲಪಾತದಲ್ಲಿ ಜಾರಿ ಬಿದ್ದಿದ್ದ ಶರತ್ 8 ದಿನದ ಬಳಿಕ ಶವವಾಗಿ ಪತ್ತೆ

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಕೆ.ಎಚ್. ನಗರ ಸುಣ್ಣದ ಹಳ್ಳಿ ನಿವಾಸಿ ಶರತ್ ಕುಮಾರ್
Published 30 ಜುಲೈ 2023, 14:02 IST
Last Updated 30 ಜುಲೈ 2023, 14:02 IST
ಅಕ್ಷರ ಗಾತ್ರ

ಕುಂದಾಪುರ: ಕಳೆದ ಭಾನುವಾರ ಪ್ರವಾಸಕ್ಕೆಂದು ಸ್ನೇಹಿತನೊಂದಿಗೆ ಕೊಲ್ಲೂರು ಸಮೀಪದ ಅರಶಿನ ಗುಂಡಿ ಜಲಪಾತಕ್ಕೆ‌ ಬಂದು ವೀಕ್ಷಣೆ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಹೋದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಕೆ.ಎಚ್. ನಗರ ಸುಣ್ಣದ ಹಳ್ಳಿ ನಿವಾಸಿ ಶರತ್ ಕುಮಾರ್(23) ಮೃತದೇಹ ವಾರದ ಬಳಿಕ ಜಲಪಾತದ ಸಮೀಪದ ಮರದ ಪೊಟರೆಯ ಸಮೀಪ ಪತ್ತೆಯಾಗಿದೆ.

ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಇಳಿಮುಖವಾಗಿದ್ದು, ಜಲಪಾತದ ಬಳಿಯ ನೀರಿನ ಹರಿವು ಕಡಿಮೆಯಾಗಿದ್ದರಿಂದ ಶರತ್ ಜಾರಿ ಬಿದ್ದ ಸಮೀಪದ ಮರದ ಪೊಟರೆಯೊಳಗೆ ಕೊಳೆತ ಸ್ಥಿತಿಯಲ್ಲಿ ಭಾನುವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.

ಸ್ನೇಹಿತನೊಂದಿಗೆ ಕೊಲ್ಲೂರು ಬಳಿಯ ಅರಶಿನಗುಂಡಿ ಜಲಪಾತದ ವೀಕ್ಷಣೆಗೆಂದು ಬಂದಿದ್ದ ಶರತ್ ಕಾಲುಜಾರಿ ಹರಿಯುತ್ತಿರುವ ನೀರಿನಲ್ಲಿ ಕೊಚ್ಚಿ ಕಣ್ಮರೆಯಾಗಿದ್ದರು. ಸ್ನೇಹಿತನ ಮೊಬೈಲ್‌ನಲ್ಲಿ ಸೆರೆಯಾಗಿದ್ದ ಈ ದುರಂತ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಸ್ನೇಹಿತ ನೀಡಿದ್ದ ಮಾಹಿತಿ ಹಿನ್ನೆಲೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಕೊಲ್ಲೂರು ಪೊಲೀಸರು, ಡಿವೈಎಸ್ಪಿ ಬೆಳ್ಳಿಯಪ್ಪ, ಸರ್ಕಲ್ ಇನ್‌ಸ್ಪೆಕ್ಟರ್‌ ಸಂತೋಷ ಕಾಯ್ಕಿಣಿ ಅವರ ಮಾರ್ಗದರ್ಶನದಲ್ಲಿ ಉಪನಿರೀಕ್ಷಕಿಯರಾದ ಜಯಶ್ರೀ ಹುನ್ನೂರು, ಸುಧಾರಾಣಿ ನೇತೃತ್ವದಲ್ಲಿ ಪೊಲೀಸ್, ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್, ಅರಣ್ಯ ಇಲಾಖೆ ಸ್ಥಳೀಯರ ಸಹಕಾರ ಪಡೆದುಕೊಂಡು ನಿರಂತರ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಮುಳುಗುತಜ್ಞ ಈಶ್ವರ ಮಲ್ಪೆ, ಚಿತ್ರದುರ್ಗದ ಜ್ಯೋತಿರಾಜ್ ಅಲಿಯಾಸ್‌ ಕೋತಿರಾಜ್‌, ಕೋಟ ಪಡುಕೆರೆಯ ಸಾಹಸಿ ಯುವಕರ ತಂಡವೂ ಸೇರಿದಂತೆ ನೂರಾರು ಮಂದಿ ಶೋಧ ಕಾರ್ಯಾಚರಣೆ ನಡೆಸಿದರೂ ಫಲಕಾರಿಯಾಗಿರಲಿಲ್ಲ.

ಭಾನುವಾರ ಬೆಳಿಗ್ಗೆ ನೀರು ಕಡಿಮೆಯಾಗಿದ್ದರಿಂದ ಮೃತದೇಹ ಸ್ಥಳೀಯರ ಗೋಚರಕ್ಕೆ ಬಂದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮೂಲಕ ಮಾಹಿತಿ ಪಡೆದುಕೊಂಡು ಸ್ಥಳಕ್ಕೆ ತೆರಳಿರುವ ಕೊಲ್ಲೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತ.
ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT