ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾಪುರ: ಚಿತ್ತೇರಿ ದೈವಸ್ಥಾನದ ಎದುರು ವೀರಸ್ತಂಭ ಪತ್ತೆ

Published 20 ಜನವರಿ 2024, 6:11 IST
Last Updated 20 ಜನವರಿ 2024, 6:11 IST
ಅಕ್ಷರ ಗಾತ್ರ

ಕುಂದಾಪುರ: ತಾಲ್ಲೂಕಿನ ಉಳ್ತೂರು- ಚಿತ್ತೇರಿಯ ನಂದಿಕೇಶ್ವರ ದೈವಸ್ಥಾನದ ಎದುರು ವೀರಸ್ತಂಭ ಪತ್ತೆಯಾಗಿದೆ ಎಂದು ಪುರಾತತ್ವ ವಿದ್ವಾಂಸ ಪ್ರೊ.ಟಿ. ಮುರುಗೇಶಿ ಹೇಳಿದರು. 

ಚಿತ್ತೇರಿ ನಂದಿಕೇಶ್ವರ ದೈವಸ್ಥಾನದ ಎದುರು ನಿಲ್ಲಿಸಿರುವ ಈ ವೀರಸ್ತಂಭ, ಸುಮಾರು ಆರು ಅಡಿ ಎತ್ತರವಿದೆ. ಇದು ನಾಲ್ಕು ಮುಖಗಳನ್ನು ಹೊಂದಿದ್ದು ಪ್ರತಿ ಮುಖದಲ್ಲಿಯೂ ತಲಾ ಮೂರು ಚಿತ್ರ ಪಟ್ಟಿಕೆಗಳಿವೆ. ಪೂರ್ವಾಭಿಮುಖದ ಕೆಳಗಿನ ಪಟ್ಟಿಕೆಯಲ್ಲಿ ವೀರನೊಬ್ಬ ಅಶ್ವಾರೋಹಿಯನ್ನು ಎರಡು ಭಾಗವಾಗಿ ತುಂಡರಿಸಿದ್ದಾನೆ. ಎರಡನೇ ಪಟ್ಟಿಕೆಯಲ್ಲಿ ವೀರನೊಬ್ಬ ಯುದ್ಧಾನೆಯ ಮೇಲೆ ಅಂಕುಶ ಹಿಡಿದು ಕುಳಿತಿರುವಂತೆ ಚಿತ್ರಿಸಲಾಗಿದೆ. ಮೇಲಿನ ಪಟ್ಟಿಗೆಯಲ್ಲಿ ಕತ್ತಿ ಕಾಳಗದಲ್ಲಿ ತೊಡಗಿರುವಂತೆ ಚಿತ್ರಿಸಲಾಗಿದೆ. 

ಪಶ್ಚಿಮಾಭಿಮುಖದ ಕೆಳಗಿನ ಪಟ್ಟಿಕೆಯಲ್ಲಿ ಕತ್ತಿ ಕಾಳಗದ ಚಿತ್ರಣವಿದೆ. ಮಧ್ಯದ ಪಟ್ಟಿಕೆಯಲ್ಲಿ ಕುದುರೆಯ ಮೇಲೆ ಕುಳಿತು ಈಟಿಯನ್ನು ಹಿಡಿದು ಮುನ್ನುಗ್ಗುತ್ತಿರುವಂತೆ ಚಿತ್ರಿಸಲಾಗಿದ್ದು, ಮೂರನೇ ಪಟ್ಟಿಕೆಯಲ್ಲಯೂ ಕತ್ತಿ ಕಾಳಗದ ಚಿತ್ರಣವಿದೆ. ದಕ್ಷಿಣಾಭಿಮುಖದ ಕೆಳಗಿನ ಪಟ್ಟಿಕೆಯಲ್ಲಿ ಇಬ್ಬರು ವೀರರು ಕತ್ತಿ ಕಾಳಗದಲ್ಲಿ ನಿರತರಾಗಿದ್ದು, ಓರ್ವ ಮೃತ ಸೈನಿಕನ ಶರೀರ ಕೆಳಗೆ ಬೀಳುವ ಸ್ಥಿಯಲ್ಲಿ ಇದ್ದರೆ, ದೇಹದಿಂದ ಬೇರ್ಪಟ್ಟ ತಲೆಯನ್ನು ಬಲಭಾಗದ ವೀರನ ಹಿಂಭಾಗದಲ್ಲಿ ಚಿತ್ರಿಸಲಾಗಿದೆ. ಎರಡನೇ ಪಟ್ಟಿಕೆಯಲ್ಲಿ ಕತ್ತಿ ಕಾಳಗದ ಚಿತ್ರಣವಿದೆ. ಮೇಲಿನ ಪಟ್ಟಿಕೆಯಲ್ಲಿ ಮೂವರು ವೀರರ ಚಿತ್ರಣವಿದ್ದು, ಇಬ್ಬರು ತಮ್ಮ ಎಡಗೈಯಲ್ಲಿ ಖಡ್ಗವನ್ನು ಎತ್ತಿ ಹಿಡಿದಿದ್ದಾರೆ. ಮೂರನೇ ವ್ಯಕ್ತಿ ತನ್ನ ಎರಡೂ ಕೈಜೋಡಿಸಿ ಅಂಜಲೀಬದ್ಧನಾಗಿ ನಿಂತಿರುವಂತೆ ಕೆತ್ತಲಾಗಿದೆ.

ಉತ್ತರಾಭಿಮುಖದ ಕೆಳಗಿನ ಪಟ್ಟಿಕೆಯಲ್ಲಿ ಸ್ವರ್ಗದಿಂದ ಇಳಿದು ಬರುತ್ತಿರುವ ಇಬ್ಬರು ಅಪ್ಸರೆಯರ ಕಾಲುಗಳು ಮೇಲ್ಮುಖವಾಗಿ ಗಾಳಿಯಲ್ಲಿ ತೇಲುತ್ತಿದ್ದು, ಮೃತ ವೀರನ ಭುಜವನ್ನು ಹಿಡಿದುಕೊಂಡಿದ್ದಾರೆ. ಎರಡನೇ ಪಟ್ಟಿಕೆಯಲ್ಲಿ ಅಪ್ಸರೆಯರು ತಮ್ಮ ಕಾಲುಗಳಿಂದ ವೀರನ ಕಾಲ್ಗಳನ್ನು ಬಳಸಿ ಹಿಡಿದು ಆತನ ಎರಡೂ ಕೈಗಳನ್ನು ತಮ್ಮ ಭುಜದ ಮೇಲೆ ಹಾಕಿಕೊಂಡು, ಎಡ-ಬಲದ ತಮ್ಮ ಒಂದೊಂದು ಕೈಯನ್ನು ಆಕಾಶದೆಡೆಗೆ ಎತ್ತಿ ಸ್ವರ್ಗದ ಕಡೆ ಪಯಾಣವನ್ನು ಸಾಂಕೇತಿಕವಾಗಿ ಬಿಂಬಿಸಿದ್ದಾರೆ. ಕೊನೆಯ ಪಟ್ಟಿಕೆಯಲ್ಲಿ ಮೃತ ವೀರನು ವೀರಸ್ವರ್ಗ ಪಡೆದ ದ್ಯೋತಕವಾಗಿ ಒಂದು ಶಿವಲಿಂಗದ ಎದುರು ಕುಳಿತಿರುವಂತೆ ಚಿತ್ರಿಸಲಾಗಿದೆ.

ಮೃತ ವೀರರಿಗಾಗಿ ವೀರಗಲ್ಲುಗಳನ್ನು ನೆಡುವ ಪರಂಪರೆ ಇದೆ. ಆದರೆ, ವೀರಸ್ತಂಭವನ್ನು ನಿಲ್ಲಿಸುವುದು ವಿರಳ ಸಂಗತಿ. ಚಿತ್ರ ಪಟ್ಟಿಕೆಗಳಲ್ಲಿ ವಿವಿಧ ರೀತಿಯ ಯುದ್ಧದ ದೃಶ್ಯಗಳನ್ನು ಚಿತ್ರಿಸಿ, ಕೊನೆಗೆ ಆತ ಕೈಲಾಸವಾಸಿಯಾದ ಎಂಬುದನ್ನು ಚಿತ್ರಿಸಿರುವುದನ್ನು ನೋಡಿದರೆ, ಮೃತ ವ್ಯಕ್ತಿ ಸಾಧಾರಣ ಸೈನಿಕನಾಗಿರದೆ, ರಾಜ ಮನೆತನಕ್ಕೆ ಸೇರಿದ ವ್ಯಕ್ತಿ ಎಂದು ಭಾವಿಸಬಹುದು. ಇಂಥ ವೀರಸ್ತಂಭಗಳು ಕಾಸರಗೋಡಿನ ಕೂಡ್ಲು ಗೋಪಾಲಕೃಷ್ಣ ದೇವಾಲಯದ ಹೊರ ಆವರಣ ಹಾಗೂ ಮಂಗಳೂರಿನ ಅಮ್ಮುಂಜೆಯಲ್ಲಿ ಇವೆ. ವೀರಸ್ತಂಭವನ್ನು ಸ್ಥಳೀಯವಾಗಿ ಕ್ಷೇತ್ರಪಾಲ ಕಲ್ಲು ಎಂದು ಕರೆಯಲಾಗುತ್ತದೆ.

ಗುಳ್ಳಾಡಿಯ ರಘುರಾಮ ಶೆಟ್ಟಿಯವರ ತೀವ್ರ ಆಸಕ್ತಿಯ ಫಲವಾಗಿ ಗುಳ್ಳಾಡಿಯ ಸುತ್ತ-ಮುತ್ತ ಕೈಗೊಂಡ ಪುರಾತತ್ವ ಕ್ಷೇತ್ರಕಾರ್ಯದಿಂದಾಗಿ ಈ ಅಪೂರ್ವ ವೀರಸ್ತಂಭ ಪತ್ತೆಯಾಗಿದೆ. ಇದಕ್ಕೆ ಪೂರಕವಾಗಿ ಚಿತ್ತೇರಿ ನಂದಿಕೇಶ್ವರ ದೇವಾಲಯದ ಆನುವಂಶಿಕ ಮೊಕ್ತೇಸರ ಎಂ.ರಾಜೀವ ಶೆಟ್ಟಿ, ಬೇಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಜಯಶೀಲ ಶೆಟ್ಟಿ, ರಮೇಶ್ ಶೆಟ್ಟಿಯವರಿಗೆ, ಪ್ರದೀಪ್ ಬಸ್ರೂರು ಹಾಗೂ ನನ್ನ ವಿದ್ಯಾರ್ಥಿಗಳಿಗೆ ಸಹಕಾರ ನೀಡಿದ್ದು, ಈ ವೀರಸ್ತಂಭದ ಕುರಿತು ಇನ್ನೂ ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ಪ್ರೊ.ಟಿ.ಮುರುಗೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT