ಸೋಮವಾರ, ಫೆಬ್ರವರಿ 17, 2020
31 °C
ವಿದ್ಯಾಧೀಶ ಶ್ರೀಗಳಿಂದ ಕೃಷ್ಣನಿಗೆ ತುಳಸಿ ಅರ್ಚನೆ, ಮಹಾ ಮಂಗಳಾರತಿ

ಪಲಿಮಾರು ಪರ್ಯಾಯದ ಕೊನೆಯ ಮಹಾಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಉಡುಪಿ: 2 ವರ್ಷಗಳ ಪರ್ಯಾಯ ಅವಧಿಯಲ್ಲಿ ಕೃಷ್ಣನ ಪೂಜಾ ಕೈಂಕರ್ಯವನ್ನು ನೆರವೇರಿಸಿದ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ಶುಕ್ರವಾರ ಕಡೆಗೋಲು ಕೃಷ್ಣನಿಗೆ ಕೊನೆಯ ಮಹಾ ಪೂಜೆ ನೆರವೇರಿಸಿದರು.

ಕೊನೆಯ ಮಹಾ ಪೂಜೆ ಹಿನ್ನೆಲೆಯಲ್ಲಿ ಕೃಷ್ಣನಿಗೆ ಬಗೆಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ತುಳಸಿ ಪ್ರಿಯ ಕೃಷ್ಣನಿಗೆ ಪಲಿಮಾರು ಶ್ರೀಗಳು ಲಕ್ಷ ತುಳಸಿ ಅರ್ಚನೆ ನೆರವೇರಿಸಿದರು. ಮಹಾಪೂಜೆಯ ಬಳಿಕ ಕೃಷ್ಣ ತುಳಸಿ ದಳಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದ್ದ.

ಬಳಿಕ ಶ್ರೀಗಳು ಕೃಷ್ಣನಿಗೆ ಚಾಮರ ಸೇವೆ ಸಲ್ಲಿಸಿ ಮಹಾಪೂಜೆ ನೆರವೇರಿತು. ಕೊನೆಯ ಮಹಾಪೂಜೆಗೆ ಹೆಚ್ಚಿನ ಸಂಖ್ಯೆಯ ಭಕ್ತರು ನೆರೆದು ಗೋವಿಂದನ ನಾಮಸ್ಮರಣೆ ಮಾಡಿದರು. ನಗಾರಿ, ಗಂಟೆ, ಶಂಖ ನಾದ ಕಿವಿಗಡಚಿತು.

ಪರ್ಯಾಯದ ಕೊನೆಯ ಪ್ರಸಾದ: ಪರ್ಯಾಯದ ಅವಧಿಯಲ್ಲಿ ಅನ್ನದಾಸೋಹಕ್ಕೆ ಒತ್ತುಕೊಟ್ಟಿದ್ದ ಪಲಿಮಾರು ಶ್ರೀಗಳು ಪರ್ಯಾಯ ಸಮಾಪ್ತಿಯ ಕೃಷ್ಣಭೋಜನವನ್ನು ಭಕ್ತರಿಗೆ ಉಣಬಡಿಸಿದರು. ರಾಜಾಂಗಣ ಹಾಗೂ ಮಠದ ಭೋಜನಶಾಲೆಯಲ್ಲಿ ಸಾವಿರಾರು ಭಕ್ತರು ಭೋಜನ ಸ್ವೀಕರಿಸಿದರು.

ಪರ್ಯಾಯದ ಹಾದಿ: ಪೇಜಾವರ ಮಠದ ಪರ್ಯಾಯದ ನಂತರ 2018, ಜನವರಿ 18ರಿಂದ ಆರಂಭವಾದ ಪಲಿಮಾರು ಮಠದ ಪರ್ಯಾಯ ಜನವರಿ 17, 2020ಕ್ಕೆ ಮುಕ್ತಾಯವಾಯಿತು. 2 ವರ್ಷಗಳ ಕಾಲ ಸರ್ವಜ್ಞ ಪೀಠದಲ್ಲಿ ಕುಳಿತಿದ್ದ ಪಲಿಮಾರು ಶ್ರೀಗಳು ಕೃಷ್ಣನ ಪೂಜಾ ಕೈಂಕರ್ಯವನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. 

ತಮ್ಮ ಪರ್ಯಾಯದ ಅವಧಿಯಲ್ಲಿ ಕನಕನ ಕಿಂಡಿಯ ಪಕ್ಕದಲ್ಲಿ ಭಜನಾ ಮಂದಿರ ತೆರೆದು ಅಖಂಡ ಭಜನೆಗೆ ಒತ್ತು ಕೊಟ್ಟಿದ್ದರು. ಕೃಷ್ಣನ ಗರ್ಭಗುಡಿಗೆ 100 ಕೆ.ಜಿ. ಚಿನ್ನದ ಗೋಪುರ ಸಮರ್ಪಿಸಿ ಭಕ್ತರಿಂದ ಸುವರ್ಣ ಸ್ವಾಮೀಜಿ ಎಂದು ಕರೆಸಿಕೊಂಡರು.

ಕೃಷ್ಣನಿಗೆ ಸುವರ್ಣ ತುಲಾಭಾರ ನೆರವೇರಿಸಿದರು. ಕನ್ನಡ ಹಾಗೂ ಸಂಸ್ಕೃತದಲ್ಲಿ ಮಹಾಭಾರತದ 16 ಸಂಪುಟಗಳನ್ನು ಹೊರತಂದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇದರ ಜತೆಗೆ, ಧನ್ವಂತರಿ ಚಿಕಿತ್ಸಾಲಯ ಸ್ಥಾಪನೆ, ಚಿಣ್ಣರ ಮಾಸೋತ್ಸವ, ರಾಜಾಂಗಣದಲ್ಲಿ ನಿರಂತರ ಜ್ಞಾನ ಸತ್ರ, ವಿದ್ವಾಂಸರ ಗೋಷ್ಠಿ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪಲಿಮಾರು ಪರ್ಯಾಯದ ಅವಧಿಯಲ್ಲಿ ಹೆಚ್ಚಿನ ಪ್ರಾಶಸ್ತ್ಯ ದೊರೆಯಿತು.

ಅದಮಾರು ಪರ್ಯಾಯ ಆರಂಭ: ಜನವರಿ 18ರಿಂದ ಅದಮಾರು ಮಠದ ಪರ್ಯಾಯ ಆರಂಭವಾಗಲಿದ್ದು, ಜನವರಿ 17, 2022ರವರೆಗೂ ಮುಂದುವರಿಯಲಿದೆ. ಅದಮಾರು ಕಿರಿಯ ಯತಿ ಈಶಪ್ರಿಯ ತೀರ್ಥರು 2 ವರ್ಷಗಳ ಕಾಲ ಕೃಷ್ಣನ ಪೂಜಾ ಕೈಂಕರ್ಯ ನೆರವೇರಿಸಲಿದ್ದಾರೆ. ಈ ಅವಧಿಯಲ್ಲಿ ಕೃಷ್ಣಮಠದ ಸಂಪೂರ್ಣ ಆಡಳಿತ ಅದಮಾರು ಮಠಕ್ಕೆ ಒಳಪಡಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)