ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲ್‌ಐಸಿ ಖಾಸಗೀಕರಣ ತಡೆಯೋಣ’

ವಿಮಾ ನೌಕರರ ಸಂಘದ ಉಡುಪಿ ವಿಭಾಗದ 62ನೇ ವಿಭಾಗೀಯ ಸಮ್ಮೇಳನ
Last Updated 20 ಡಿಸೆಂಬರ್ 2020, 15:04 IST
ಅಕ್ಷರ ಗಾತ್ರ

ಉಡುಪಿ: ಎಲ್‌ಐಸಿಯನ್ನು ಖಾಸಗೀಕರಣಗೊಳಿಸುವ ಸರ್ಕಾರದ ಹುನ್ನಾರವನ್ನು ಸಂಘಟಿತರಾಗಿ ತಡೆಯೋಣ ಎಂದು ದಕ್ಷಿಣ ಮಧ್ಯವಲಯ ವಿಮಾ ನೌಕರರ ಒಕ್ಕೂಟದ ಸಹ ಕಾರ್ಯದರ್ಶಿ ಜೆ.ಸುರೇಶ್ ಹೇಳಿದರು.

ನಗರದ ಲಯನ್ಸ್ ಭವನದಲ್ಲಿ ಭಾನುವಾರ ವಿಮಾ ನೌಕರರ ಸಂಘ ಉಡುಪಿ ವಿಭಾಗದ 62ನೇ ವಿಭಾಗೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಗಳಿಂದ ದೇಶದ ಆರ್ಥಿಕತೆ ಹಿಂಜರಿತಕ್ಕೆ ಸಿಲುಕಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲು ₹ 2.1 ಲಕ್ಷ ಕೋಟಿ ಬಜೆಟ್ ಕೊರತೆ ಕ್ರೋಢೀಕರಿಸಲು ಭಾರತೀಯ ಜೀವ ವಿಮಾ ನಿಗಮದ ಶೇ 10 ಷೇರುಗಳನ್ನು ಷೇರುಪೇಟೆ ಮೂಲಕ ಬಂಡವಾಳ ಶಾಹಿಗಳಿಗೆ ವಿತರಿಸಲು ನಿರ್ಧರಿಸಲಾಗಿದೆ. ಈ ಮೂಲಕ ಎಲ್‌ಐಸಿಯನ್ನು ಖಾಸಗೀಕರಣಕ್ಕೆ ಸರ್ಕಾರ ಮುಂದಾಗಿದೆ ಎಂದು ಟೀಕಿಸಿದರು.

ಷೇರು ವಿಕ್ರಯ ಪ್ರಕ್ರಿಯೆಯಿಂದ ಒಂದು ಲಕ್ಷ ಕೋಟಿ ಬಂಡವಾಳ ಗಳಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಎಲ್‍ಐಸಿಯಲ್ಲಿ ವಿಶ್ವಾಸವಿಟ್ಟು ಜೀವ ವಿಮೆಯಲ್ಲಿ ಹಣ ವಿನಿಯೋಗಿಸಿರುವ 40 ಕೋಟಿ ಪಾಲಿಸಿದಾರರು ಹಾಗೂ ಸಂಸ್ಥೆಯಲ್ಲಿ ದುಡಿಯುತ್ತಿರುವ ನೌಕರರ ಹಿತಾಸಕ್ತಿಯನ್ನು ಸರ್ಕಾರ ಕಡೆಗಣಿಸುತ್ತಿದೆ. ವಿಮಾ ನೌಕರರ ಸಂಘಟಿತ ಹೋರಾಟಗಳಿಂದ ಸರ್ಕಾರದ ನೀತಿಗಳನ್ನು ಮಣಿಸಲು ಸಾಧ್ಯವಿದೆ ಎಂದರು.

ಕಾರ್ಮಿಕ ಕಾನೂನುಗಳ ತಿದ್ದುಪಡಿಯಿಂದ ಕಾರ್ಮಿಕರು ಸಾಂವಿಧಾನಿಕ ಹಕ್ಕು ಹಾಗೂ ಉದ್ಯೋಗ ಭರವಸೆ ಕಳೆದುಕೊಳ್ಳಲಿದ್ದು, ನಿರುದ್ಯೋಗಿಗಳಾಗುವ ಆತಂಕ ಎದುರಾಗಿದೆ. ಕೃಷಿ ನೀತಿಗಳು ದೇಶದ ಕೃಷಿ ಕ್ಷೇತ್ರವನ್ನು ಕಾರ್ಪೊರೆಟ್‌ ವಲಯಕ್ಕೆ ಮಾರಾಟ ಮಾಡುವ ಉದ್ದೇಶ ಹೊಂದಿದ್ದು, ರೈತರು ನಿರ್ಗತಿಕರಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿಮಾ ನೌಕರರ ಸಂಘದ ಅಧ್ಯಕ್ಷ ಕೆ.ವಿಶ್ವನಾಥ್, ವಿಮಾ ಪಿಂಚಣಿದಾರರ ಸಂಘದ ಅಧ್ಯಕ್ಷ ಕೆ.ಆರ್. ಭಟ್, ಎಲ್‍ಐಸಿ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಕುಶಾಲ್ ಕುಮಾರ್, ಜಿಲ್ಲಾ ಸಿಐಟಿಯು ಖಜಾಂಚಿ ಶಶಿಧರ ಗೊಲ್ಲ, ವಿಮಾ ನೌಕರರ ಸಂಘದ ನಾಯಕರಾದ ಪಿ.ವಿಶ್ವನಾಥ ರೈ, ಎ.ಎಸ್. ಆಚಾರ್ಯ, ವಿಮಾ ನೌಕರರ ಸಂಘದ ಮಹಿಳಾ ಸಂಚಾಲಕಿ ಪದ್ಮರೇಖಾ ಸಿ.ಆಚಾರ್ಯ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ವಿಶ್ವನಾಥ್ ರೈ ಹಾಗೂ ಮಂಗಳೂರಿನ ಪ್ರಾದೇಶಿಕ ಕಾರ್ಯದರ್ಶಿ ಬಿ.ಎನ್. ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ 200 ಸದಸ್ಯರು ಭಾಗವಹಿಸಿದ್ದರು.

ವಿಮಾ ನೌಕರರ ಸಂಘದ ಜತೆ ಕಾರ್ಯದರ್ಶಿ ಕವಿತಾ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ. ಕುಂದರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT