ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನಡುವೆ ಮಲ್ಪೆ ಬೀಚ್‌ನಲ್ಲಿ ಸ್ವಚ್ಛತಾ ಅಭಿಯಾನ

Last Updated 17 ಅಕ್ಟೋಬರ್ 2021, 9:51 IST
ಅಕ್ಷರ ಗಾತ್ರ

ಉಡುಪಿ: ಅಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಭಾನುವಾರ ಮಲ್ಪೆ ಬೀಚ್‌ನಲ್ಲಿ ಆಯೋಜಿಸಿದ್ದ ಕ್ಲೀನ್ ಇಂಡಿಯಾ ಕಾರ್ಯಕ್ರಮಕ್ಕೆ ಶಾಸಕ ರಘುಪತಿ ಭಟ್ ಹಾಗೂ ಜಿಲ್ಲಾಧಿಕಾರಿ ಕೂರ್ಮಾರಾವ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶಾಸಕರು, ‘ನೆಹರೂ ಯುವ ಕೇಂದ್ರ ಹಾಗೂ ಜಿಲ್ಲಾ ಪಂಚಾಯಿತಿ ನೇತೃತ್ವದಲ್ಲಿ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಕ್ಲೀನ್ ಇಂಡಿಯಾ ಅಭಿಯಾನ ನಡೆಯುತ್ತಿದೆ. ಸ್ವಚ್ಛತೆ ಮಾತಿಗೆ ಸೀಮಿತವಾಗದೆ, ಪ್ರತಿಯೊಬ್ಬರ ಜೀವನದ ಭಾಗವಾಗಬೇಕು. ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗಿ ಸಾಗುತ್ತಿದೆ. ಸ್ವಚ್ಛತೆ ನಮ್ಮ ಪ್ರಜ್ಞೆಯ ಭಾಗವಾದರೆ ಕ್ಲೀನ್ ಇಂಡಿಯಾ ಅಭಿಯಾನಕ್ಕೆ ಇಂಧನ ಸಿಕ್ಕಿದಂತಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಕೂರ್ಮಾ ರಾವ್ ಮಾತನಾಡಿ, ಪ್ರವಾಸಿ ಸ್ಥಳಗಳ ಸ್ವಚ್ಛತೆ ಕಾಪಾಡುವಲ್ಲಿ ಪ್ರತಿಯೊಬ್ಬರೂ ಕ್ರಿಯಾಶೀಲ ಪ್ರಯತ್ನ ಮಾಡಬೇಕು. ಮರುಬಳಕೆ ವಸ್ತುಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿದರೆ ಸ್ವಚ್ಛತೆ ಕಾಪಾಡುವಲ್ಲಿ ದಿಟ್ಟ ಹೆಜ್ಜೆ ಇಟ್ಟಂತಾಗುತ್ತದೆ ಎಂದರು.

ಯುವಜನತೆ ಸ್ವಚ್ಛತೆಯ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಸ್ಥಳೀಯ ಆಡಳಿತದ ಜೊತೆಗೆ ಸಮನ್ವಯತೆ ಸಾಧಿಸಿ ಇತರರಿಗೂ ಪ್ರೇರಣೆಯಾದರೆ, ಕ್ಲೀನ್ ಇಂಡಿಯಾ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಮೂಲದಲ್ಲಿಯೇ ಕಸ ವಿಂಗಡನೆ ಹಾಗೂ ಪರ್ಯಾಯ ಮಾರ್ಗಗಳನ್ನು ಅನುಸರಿಸುವ ಮೂಲಕ ತ್ಯಾಜ್ಯ ಉತ್ಪತ್ತಿ ಕಡಿಮೆಗೊಳಿಸಬಹುದು. ಸ್ವಚ್ಛ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡಬಹುದು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಪಿಂಜರ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಸ್‌ಬಿಐ, ಬ್ಯಾಂಕ್ ಆಫ್ ಬರೋಡ, ಕರ್ನಾಟಕ ಬ್ಯಾಂಕ್ ಅಧಿಕಾರಿಗಳು, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಮಾರ್ಟಿಸ್ ಇದ್ದರು. ಸ್ವಚ್ಛ ಭಾರತ ರಾಜ್ಯ ಸಂಪನ್ಮೂಲ ವ್ಯಕ್ತಿ ಜೋಸೆಫ್ ರೆಬೆಲ್ಲೋ ಸಹಕರಿಸಿದರು.

ಮಳೆಯ ನಡುವೆಯೂ ಸ್ವಚ್ಛತಾ ಅಭಿಯಾನ ನಡೆಯಿತು. ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ವಿಲ್ಫ್ರೆಡ್ ಡಿಸೋಜ ಸ್ವಾಗತಿಸಿದರು. ಯುವಜನ ಕ್ರೀಡಾ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 80 ಚೀಲಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು.

ಕೇಂದ್ರ ಸರ್ಕಾರದ ಯುವಜನ ಹಾಗೂ ಕ್ರೀಡಾ ಸಚಿವಾಲಯವು ನೆಹರೂ ಯುವ ಕೇಂದ್ರ ಸಂಘಟನೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಷ್ಟ್ರ‍ೀಯ ಸೇವಾ ಯೋಜನೆ, ಎನ್‌ಸಿಸಿ, ಭಾರತ್ ಸ್ಕೌಟ್ಸ್ ಅಂಡ್‌ ಗೈಡ್ಸ್, ಯುವಕ ಮಂಡಲ, ಸ್ವಚ್ಛ ಭಾರತ್ ಫ್ರೆಂಡ್ಸ್ ಹಾಗೂ ಜೆಸಿಐ ಸಂಯುಕ್ತ ಆಶ್ರಯದಲ್ಲಿ ಕ್ಲೀನ್ ಇಂಡಿಯಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT