ಸೋಮವಾರ, ಡಿಸೆಂಬರ್ 5, 2022
21 °C
ಬೀಚ್‌ನಲ್ಲಿ ಅಗತ್ಯ ಸೌಲಭ್ಯಗಳು ಇರಲಿ: ಗುತ್ತಿಗೆ ಸಂಸ್ಥೆಗೆ ಜಿಲ್ಲಾಧಿಕಾರಿ ಕೂರ್ಮರಾವ್ ಸೂಚನೆ

ಮಲ್ಪೆ: ಪ್ರವಾಸಿಗರ ಸುರಕ್ಷತೆಯೇ ಆದ್ಯತೆ - ಜಿಲ್ಲಾಧಿಕಾರಿ ಕೂರ್ಮರಾವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಮಲ್ಪೆ ಬೀಚ್ ಮತ್ತು ಸೈಂಟ್ ಮೇರಿಸ್ ದ್ವೀಪಕ್ಕೆ ಆಗಮಿಸುವ ಪ್ರವಾಸಿಗರ ಸುರಕ್ಷತೆಗೆ ಬೀಚ್ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿರುವ ಸಂಸ್ಥೆ ಗರಿಷ್ಠ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಸೂಚನೆ ನೀಡಿದರು.

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಲ್ಪೆ ಬೀಚ್‌ ಹಾಗೂ ಸೈಂಟ್ ಮೇರಿಸ್ ದ್ವೀಪದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಕುರಿತು, ಎಸ್‌ಒಪಿ ರಚಿಸಿ ಅದರನ್ವಯ ಕಾರ್ಯ ನಿರ್ವಹಿಸಬೇಕು ಎಂದರು.

ಮಲ್ಪೆ ಬೀಚ್‌ಗೆ ದೇಶ, ವಿದೇಶ ಹಾಗೂ ವಿವಿಧ ಜಿಲ್ಲೆಗಳಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸಿಗರ ಬೀಚ್‌ನಲ್ಲಿ ಅವಘಡಗಳು ಸಂಭವಿಸದಂತೆ ಸುರಕ್ಷತಾ ಕ್ರಮ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು.

ಪ್ರವಾಸೋದ್ಯಮ ಸ್ಥಳಗಳಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ಅಂತರ ರಾಷ್ಟ್ರೀಯ ಮಾನದಂಡಗಳನ್ನು ಅಧ್ಯಯನ ಮಾಡಿ ಅದರಂತೆ ಎಸ್‌ಒಪಿ ರಚಿಸಿ ಅನುಷ್ಠಾನಗೊಳಿಸಬೇಕು.

ಬೀಚ್‌ನಲ್ಲಿ ಜೀವ ರಕ್ಷಕರ ನಿಯೋಜನೆ ಮಾಡುವ ಮೂಲಕ ಪ್ರವಾಸಿಗರು ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಪ್ರವಾಸದ ಕ್ಷಣಗಳನ್ನು ಆನಂದಿಸಲು ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಎಂದು ನಿರ್ವಹಣೆ ಸಂಸ್ಥೆಗೆ ಸೂಚನೆ ನೀಡಿದರು.

ಬೀಚ್ ನಿರ್ವಹಣಾ ಸಂಸ್ಥೆಯ ಸಿಬ್ಬಂದಿ ಪ್ರವಾಸಿಗರ ಸ್ನೇಹಿಯಾಗಿ ವರ್ತಿಸುವ ಬಗ್ಗೆ ಮತ್ತು ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಬಗ್ಗೆ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಬೇಕು.

ಬೀಚ್‌ನಲ್ಲಿ ಪ್ರವಾಸಿಗರ ಸುರಕ್ಷತೆಗೆ ಅವಶ್ಯಕವಿರುವ ಭದ್ರತಾ ಉಪಕರಣ, ವಾಹನ ಹಾಗೂ ಇತರ ಸೌಲಭ್ಯಗಳ ಬಗ್ಗೆ ಸಮಿತಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ನಿರ್ದೇಶನ ನೀಡಿದರು.

ಮಲ್ಪೆ ಬೀಚ್‌ನಿಂದ ದ್ವೀಪಕ್ಕೆ ತೆರಳುವ ಬೋಟುಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳ ಪಾಲನೆಯಾಗಬೇಕು. ಪ್ರಯಾಣಿಕರು ಕಡ್ಡಾಯವಾಗಿ ಲೈಫ್ ಜಾಕೆಟ್‌ ಹಾಕಿಕೊಳ್ಳುವಂತೆ ತಿಳಿಸಬೇಕು. ಲೈಫ್ ಜಾಕೆಟ್ ಇಲ್ಲದವರನ್ನು ಕರೆದುಕೊಂಡು ಹೋದಲ್ಲಿ ದಂಡ ವಿಧಿಸಲಾಗುವುದು ಹಾಗೂ ಪರವಾನಗಿ ರದ್ದುಪಡಿಸಲಾಗುವುದು. ಈ ಬಗ್ಗೆ ಕರಾವಳಿ ಕಾವಲು ಪಡೆ ಪರಿಶೀಲನೆ ನಡೆಸಬೇಕುಕ ಎಂದು ಸೂಚನೆ ನೀಡಿದರು.  

ಬೀಚ್‌ನಲ್ಲಿರುವ ಗೂಡಂಗಡಿಗಳಲ್ಲಿ ಪ್ರವಾಸಿಗರಿಗೆ ಶುದ್ಧ ನೀರು, ಕಲಬೆರಕೆ ಇಲ್ಲದ ರಾಸಾಯನಿಕ ಮುಕ್ತ ಆಹಾರ ಸಿಗಬೇಕು. ನಿಯಮ ಉಲ್ಲಂಘಿಸಿದ ಹಾಗೂ ಅನುಮತಿ ಇಲ್ಲದೆ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಅಂಗಡಿಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು, ನಗರಸಭೆ ಮತ್ತು ಪೊಲೀಸ್ ಸಿಬ್ಬಂದಿ ಜಂಟಿ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ಪೌರಾಯುಕ್ತ ಉದಯ ಕುಮಾರ್ ಶೆಟ್ಟಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ (ಪ್ರಭಾರ) ಗುರುಪ್ರಸಾದ್, ವಿವಿಧ ಇಲಾಖೆಯ ಅಧಿಕಾರಿಗಳು, ನಗರಸಭಾ ಸದಸ್ಯರು, ಮಲ್ಪೆ ಬೀಚ್ ನಿರ್ವಹಣಾ ಟೆಂಡರ್‌ದಾರರು, ಭಜನಾ ಮಂಡಳಿಗಳ ಪ್ರತಿನಿಧಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.