ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾರ್ಕ್‌ಗೆ ವಿಶ್ವಾಸಾರ್ಹ ಐವಿಎಫ್‌, ಫರ್ಟಿಲಿಟಿ ಕೇಂದ್ರದ ಮನ್ನಣೆ

Published 30 ಮೇ 2024, 13:00 IST
Last Updated 30 ಮೇ 2024, 13:00 IST
ಅಕ್ಷರ ಗಾತ್ರ

ಉಡುಪಿ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರಚಿಕಿತ್ಸೆ ವಿಭಾಗಕ್ಕೆ ಇನ್‌ಸೈಟ್ಸ್ ಕೇರ್‌ನಿಂದ ದೇಶದ ಅತ್ಯಂತ ವಿಶ್ವಾಸಾರ್ಹ ಐವಿಎಫ್ ಮತ್ತು ಫರ್ಟಿಲಿಟಿ ಕೇಂದ್ರದ ಮನ್ನಣೆ ದೊರೆತಿದೆ.

ಇಲ್ಲಿನ ಮಣಿಪಾಲ ಸಹಹಿತಾ ಪ್ರಜನನ ಕೇಂದ್ರದಲ್ಲಿ (ಮಾರ್ಕ್‌ ಕೇಂದ್ರ) 10,000ಕ್ಕೂ ಹೆಚ್ಚು ಶಿಶುಗಳ ಜನನವಾಗಿದ್ದು ಮೊದಲ ಐವಿಎಫ್‌ ಮಗು ಜನಿಸಿ 25 ವರ್ಷಗಳು ಸಂದಿವೆ. ಸಂತಾನಹೀನ ದಂಪತಿಗಳಿಗೆ 35 ವರ್ಷಗಳ ಸಮರ್ಪಿತ ಸೇವೆ ನೀಡಿದೆ.

ಈಚೆಗೆ ಮಣಿಪಾಲದ ಫಾರ್ಚೂನ್ ಇನ್ ವ್ಯಾಲಿ ವ್ಯೂನಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಷ್ಠಿತ ಇನ್‌ಸೈಟ್ಸ್ ಕೇರ್ ಪ್ರಶಸ್ತಿ ಸ್ವೀಕರಿಸಲಾಗಿದ್ದು, ಸಂಸ್ಥೆಯ ಆರೋಗ್ಯ ಸೇವೆಗಳಿಗೆ ದೊರೆತ ಮನ್ನಣೆಯಾಗಿದೆ. ಆರೋಗ್ಯ ಸೇವೆ, ವೈದ್ಯಕೀಯ ಸಂಶೋಧನೆ ಕ್ಷೇತ್ರದಲ್ಲಿ ಸಂಸ್ಥೆಯ ಅಸಾಧಾರಣ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ ಎಂದು ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಪ್ರಶಸ್ತಿ ಪ್ರದಾನ ಸಮಾರಂಭಲ್ಲಿ ತಿಳಿಸಿದರು.

ಕೇಂದ್ರದ ಸಾಧನೆಗಳ ಬಗ್ಗೆ ಅಪಾರ ಹೆಮ್ಮೆ ಇದೆ. ತಂಡದ ಸಮರ್ಪಣೆ, ವೈದ್ಯರ ಪರಿಣತಿ ಮಕ್ಕಳಿಲ್ಲದೆ ಕೊರಗುತ್ತಿದ್ದ ಸಾವಿರಾರು ಕುಟುಂಬಗಳಿಗೆ ಬೆಳಕು ನೀಡಿದೆ. ಇನ್‌ಸೈಟ್ಸ್ ಕೇರ್‌ನ ಮನ್ನಣೆ ವೈದ್ಯರು, ಸಿಬ್ಬಂದಿಯ ಕಠಿಣ ಪರಿಶ್ರಮ ಸಹಾನುಭೂತಿಗೆ ಸಂದ ಗೌರವ. ಸಂತಾನೋತ್ಪತ್ತಿ ಆರೋಗ್ಯ ರಕ್ಷಣೆಯಲ್ಲಿ ಸಂಸ್ಥೆಯ ಉತ್ಕೃಷ್ಟತೆ ಮುಂದುವರಿಸಲು ಪ್ರಶಸ್ತಿ ಪ್ರೋತ್ಸಾಹ ನೀಡಿದೆ ಎಂದು ಹೇಳಿದರು.

ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರಚಿಕಿತ್ಸೆ ವಿಭಾಗದ ಪ್ರಾಧ್ಯಾಪಕ ಡಾ.ಪ್ರತಾಪ್ ಕುಮಾರ್ ಮಾತನಾಡಿ, 1990ರಲ್ಲಿ ಪ್ರಾರಂಭವಾದ ಮಾರ್ಕ್ ಕೇಂದ್ರ ಬಂಜೆತನ ನಿವಾರಿಸುವ ನಿಟ್ಟಿನಲ್ಲಿ ಗಮನಾರ್ಹ ಸಾಧನೆ ಮಾಡಿದೆ. 1998ರಲ್ಲಿ ಟೆಸ್ಟ್ ಟ್ಯೂಬ್ ಬೇಬಿ ವಿಧಾನವನ್ನು ಕೇಂದ್ರದಲ್ಲಿ ಪರಿಚಯಿಸಲಾಯಿತು. ಮೊದಲ ಐವಿಎಫ್ ಮಗು ಫೆ.18, 1999ರಂದು ಜನಿಸಿತು ಎಂದು ನೆನಪಿಸಿಕೊಂಡರು.

ವಿದೇಶದಲ್ಲಿ ವಿಶೇಷ ತರಬೇತಿ ಪಡೆದಿರುವ, ಸಂತಾನಹೀನತೆಯ ಸಮಸ್ಯೆ ನಿಭಾಯಿಸುವಲ್ಲಿ ಅನುಭವ ಹೊಂದಿರುವ ಪರಿಣಿತ ವೈದ್ಯರು, ವಿಜ್ಞಾನಿಗಳು ಇರುವ ಮಾರ್ಕ್ ಕೇಂದ್ರ ದೇಶದ ಅತ್ಯಾಧುನಿಕ ಬಂಜೆತನ ಚಿಕಿತ್ಸಾ ಕೇಂದ್ರಗಳಲ್ಲಿ ಒಂದಾಗಿದೆ ಎಂದರು.

ಮಾರ್ಕ್ ಕೇಂದ್ರವು ಸುಸಜ್ಜಿತ ಆಂಡ್ರಾಲಜಿ ಪ್ರಯೋಗಾಲಯ, ವೀರ್ಯ ಬ್ಯಾಂಕಿಂಗ್ ಹೊಂದಿದ್ದು, ಭ್ರೂಣಶಾಸ್ತ್ರ ಪ್ರಯೋಗಾಲಯ ಅಂತರರಾಷ್ಟ್ರೀಯ ಗುಣಮಟ್ಟ ಹೊಂದಿದೆ. ಮಕ್ಕಳನ್ನು ಪಡೆಯ ಬಯಸುವ ಅಸಂಖ್ಯಾತ ದಂಪತಿಗಳಿಗೆ ಭರವಸೆಯಾಗಿ ಮುನ್ನಡೆಯುತ್ತಿದೆ ಎಂದರು.

ಮಾಹೆ ಸಿಒಒ ಸಿ.ಜಿ.ಮುತ್ತಣ್ಣ, ಮಾಹೆ ಭೋದನಾ ಆಸ್ಪತ್ರೆಗಳ ಸಿಒಒ ಡಾ.ಆನಂದ್ ವೇಣುಗೋಪಾಲ್, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಮಾರ್ಕ್ ತಂಡದ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT