ಭಾನುವಾರ, ಏಪ್ರಿಲ್ 11, 2021
32 °C
8 ಮಂದಿಯ ತಂಡ ಸಿದ್ಧಪಡಿಸಿದ ನೀರಿನಲ್ಲಿ ತೇಲುವ, ಬಾನಿನಲ್ಲಿ ಹಾರುವ ವಿಮಾನ

ಕರಾವಳಿಯಲ್ಲಿ ಸಿದ್ಧವಾಯ್ತು ಮೈಕ್ರೋಲೈಟ್‌ ಸೀಪ್ಲೇನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಆತ್ಮನಿರ್ಭರ ಭಾರತ ಪರಿಕಲ್ಪನೆಯಿಂದ ಸ್ಫೂರ್ತಿ ಪಡೆದಿರುವ ಉತ್ಸಾಹಿ ಯುವಪಡೆ ನೀರಿನಲ್ಲಿ ತೇಲುವ ಹಾಗೂ ಬಾನಿನಲ್ಲಿ ಹಾರುವ ಮೈಕ್ರೋಲೈಟ್‌ ಸೀಪ್ಲೇನ್‌ ನಿರ್ಮಾಣ ಮಾಡಿದೆ. ಕಾಪು ತಾಲ್ಲೂಕಿನ ಹೆಜಮಾಡಿಯ ನಡಿಕುದ್ರುವಿನಲ್ಲಿ ಪುಷ್ಪರಾಜ್ ಅಮೀನ್‌ ನೇತೃತ್ವದ 8 ಮಂದಿಯ ತಂಡ ಸೀಪ್ಲೇನ್‌ ಸಿದ್ಧಪಡಿಡಿದೆ.

120 ಕೆ.ಜಿ ತೂಕದ ಸೀಪ್ಲೇನ್‌ ಒಂದು ಸಿಲಿಂಡರ್‌, 33 ಅಡಿ ಉದ್ದದ ರೆಕ್ಕೆಗಳನ್ನು ಹೊಂದಿದ್ದು, 33 ಎಚ್‌ಪಿ ಹಾಗೂ 200 ಸಿಸಿ ಸಾಮರ್ಥ್ಯದ ಸಿಮೊನಿನಿ ಇಟಲಿ ನಿರ್ಮಿತ ಎಂಜಿನ್ ಬಳಸಿ ₹ 7 ಲಕ್ಷ ವೆಚ್ಚದಲ್ಲಿ ಸೀಪ್ಲೇನ್ ನಿರ್ಮಾಣ ಮಾಡಲಾಗಿದೆ. ಶಾಂಭವಿ ನದಿಯ ತೀರದಲ್ಲಿ ಪ್ರಾಯೋಗಿಕ ಹಾರಾಟ ಯಶಸ್ವಿಯಾಗಿದ್ದು, ವರ್ಷಗಳ ನಿರಂತರ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ಎಂದು ಪುಷ್ಪರಾಜ್ ಅಮೀನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈಗಾಗಲೇ ನದಿಯ ಹಿನ್ನೀರಿನಲ್ಲಿ ಐದಾರು ಗಂಟೆಗಳ ಕಾಲ ಸೀಪ್ಲೇನ್‌ ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲದೆ ಯಶಸ್ವಿಯಾಗಿ ಹಾರಾಟ ನಡೆಸಿದೆ. ಮುಂದೆ, ದೊಡ್ಡ ಸೀಪ್ಲೇನ್‌ಗಳು ಹಾಗೂ ವಿಶೇಷ ಬೋಟ್‌ಗಳನ್ನು ನಿರ್ಮಿಸುವ ಉದ್ದೇಶವಿದ್ದು, ಈ ನಿಟ್ಟಿನಲ್ಲಿ ನಿರಂತರ ಸಂಶೋಧನೆ ಹಾಗೂ ಅಧ್ಯಯನ ನಡೆಯುತ್ತಿದೆ ಎಂದು ಪುಷ್ಪರಾಜ್ ತಿಳಿಸಿದರು.

ಬಾನಕ್ಕಿಗಳ ಬಗ್ಗೆ ಕುತೂಹಲ: ಬಾಲ್ಯದಿಂದಲೂ ವಿಮಾನಗಳ ಹಾರಾಟದ ಬಗ್ಗೆ ಅತಿಯಾದ ಆಸಕ್ತಿ ಹಾಗೂ ಕುತೂಹಲವಿತ್ತು. ಕಾಲೇಜಿನಲ್ಲಿದ್ದಾಗ ಸಣ್ಣ ಸಣ್ಣ ರಿಮೋಟ್‌ ಕಂಟ್ರೋಲ್‌ ವಿಮಾನಗಳನ್ನು ಮಾಡುತ್ತಿದ್ದೆ. ವರ್ಷದ ಹಿಂದೆ ಸಮಾನ ಮನಸ್ಕರ ತಂಡ ಒಟ್ಟಾಗಿ ಸೀಪ್ಲೇನ್‌ ಮಾಡುವ ಬಗ್ಗೆ ಚರ್ಚಿಸಿ ಯೋಜನೆ ಸಿದ್ಧಪಡಿಸಿದೆವು. ಈಗ ಕಾರ್ಯರೂಪಕ್ಕೆ ತಂದಿದ್ದೇವೆ ಎಂದರು.‌

ಸದ್ಯ ಪೈಲಟ್‌ ಮಾತ್ರ ಕೂರುವ ಸಣ್ಣ ಸೀಪ್ಲೇನ್ ಸಿದ್ಧಪಡಿಸಲಾಗಿದೆ. ಮುಂದೆ, ಪ್ರವಾಸೋದ್ಯಕ್ಕೆ ಪೂರಕವಾಗುವಂತೆ ನಾಲ್ಕೈದು ಮಂದಿ ಕೂರಲು ಸಾಧ್ಯವಿರುವ ಸೀಪ್ಲೇನ್‌ಗಳನ್ನು ನಿರ್ಮಿಸುವ ಯೋಚನೆ ಇದೆ. ಇದರ ಜತೆಗೆ, ಫೋಟೊಗ್ರಫಿ, ಸಿನಿಮಾ ಚಿತ್ರೀಕರಣಕ್ಕೆ ಬಳಸುವ, ನೆರೆ ಅವಘಡಗಳು ಎದುರಾದಾಗ ರಕ್ಷಣಾ ಕಾರ್ಯಕ್ಕೆ ಉಪಯೋಗಿಸುವ, ಸೇನೆಗೂ ಬಳಕೆ ಮಾಡುವಂತಹ, ಏರೊನಾಟಿಕಲ್ಸ್‌ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಬಳಸುವ ಸೀಪ್ಲೇನ್‌ಗಳನ್ನು ತಯಾರಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಕನಸುಗಳು ಬಹಳಷ್ಟಿವೆ, ಆದರೆ ಕನಸುಗಳ ಸಾಕಾರಕ್ಕೆ ಆರ್ಥಿಕ ಸಮಸ್ಯೆ ಎದುರಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಆರ್ಥಿಕ ನೆರವಿನ ಅಗತ್ಯವಿದೆ. ವರ್ಕ್‌ಶಾಪ್‌ ನಿರ್ಮಾಣಕ್ಕೆ ಹಾಗೂ ಅಗತ್ಯ ಸಾಮಾಗ್ರಿಗಳ ಖರೀದಿಗೆ ಸಹಾಯಧನ ಸಿಕ್ಕರೆ ಸೀಪ್ಲೇನ್‌ಗಳ ನಿರ್ಮಾಣದಿಂದ ಕರಾವಳಿಯ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲಿದೆ ಎಂದರು ಪುಷ್ಪರಾಜ್‌.

ದೇಶದಲ್ಲಿ ಹಲವು ಏರೊನಾಟಿಕಲ್‌ ಎಂಜಿನಿಯರಿಂಗ್ ಕಾಲೇಜುಗಳಿದ್ದರೂ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಧೃತಿ ಎಂಬ ಸಂಸ್ಥೆ ಸ್ಥಾಪಿಸಲಾಗಿದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.