ಮಂಗಳವಾರ, ಸೆಪ್ಟೆಂಬರ್ 21, 2021
21 °C
ಜಾತಿವಾದಿಗಳು ಜಾತಿ ಸಂಘದ ಚುನಾವಣೆಗೆ ಸ್ಪರ್ಧಿಸಲಿ: ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ

ಜಾತಿ ಆಧಾರದಲ್ಲಿ ಸ್ಥಾನ ಕೇಳೋದು ಸರಿಯಲ್ಲ: ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಂದಾಪುರ: ‘ಎಲ್ಲ ಜಾತಿ, ಧರ್ಮದವರ ಮತ ಪಡೆದು ಜನಪ್ರತಿನಿಧಿಯಾಗಿ ಆಯ್ಕೆ ಆದವರು ಜಾತಿ ಆಧಾರಿತ ಸ್ಥಾನ-ಮಾನ ಕೇಳೋದು ಸರಿಯಲ್ಲ. ಜಾತಿವಾದಿಗಳು ಜಾತಿ ಸಂಘದ ಚುನಾವಣೆಗೆ ನಿಲ್ಲಬೇಕೆ ಹೊರತು ಸಾರ್ವತ್ರಿಕ ಚುನಾವಣೆಗಳಿಗಲ್ಲ’ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ತಿಳಿಸಿದ್ದಾರೆ.

ನೂತನ ಸರ್ಕಾರದ ಸಚಿವ ಸಂಪುಟ ರಚನೆ ಕುರಿತು ಗುರುವಾರ 'ಪ್ರಜಾವಾಣಿ' ಜತೆಗೆ ಅಭಿಪ್ರಾಯ ಹಂಚಿಕೊಂಡ ಅವರು, ‘ಮಠ- ಮಂದಿರದ ಸ್ವಾಮೀಜಿಗಳಿಗೆ ಹಾಗೂ ಧಾರ್ಮಿಕ ಮುಖಂಡರಿಗೆ  ದೇಶದ ಆಗು-ಹೋಗುಗಳ ಬಗ್ಗೆ ಸಲಹೆ ನೀಡುವ ಅಧಿಕಾರ ಖಂಡಿತವಾಗಿ ಇದೆ. ಸಮಾಜದ ಅಭಿವೃದ್ಧಿಗಾಗಿ ಜಾತಿ ಸಂಘಟನೆಗಳು ಬೇಡಿಕೆ ಮಂಡಿಸುವುದು ತಪ್ಪಲ್ಲ. ಆದರೆ, ಜಾತಿ ಆಧಾರದಲ್ಲಿ ಅಧಿಕಾರ ಕೇಳುವುದು ಸರಿಯಲ್ಲ. ನಾನು ಪ್ರಬಲ ಜಾತಿಯಲ್ಲಿ ಹುಟ್ಟಿರುವುದು ಆಕಸ್ಮಿಕ. ಈವರೆಗೂ ನಾನು ಜಾತಿ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ. ಜನ ನನ್ನನ್ನು ಒಂದು ಜಾತಿಯ ಉದ್ಧಾರ ಕ್ಕಾಗಿ ಆಯ್ಕೆ ಮಾಡಿಲ್ಲ’ ಎಂದರು.

 ‘ನಾಟಕೀಯ ಮಾತುಗಳಿಂದ ಮೆಚ್ಚಿಸುವ ಜಾಯಮಾನ ನನ್ನದಲ್ಲ, ಸ್ವಾಭಿಮಾನಿಯಾಗಿ ಬದುಕಿದ್ದೇನೆ. ಉಪಯೋಗಕ್ಕೆ ಇಲ್ಲದೆ ಇರುವುದನ್ನು ಯಾರಾದರೂ ನೀಡಿದರೇ ಅದನ್ನು ಅಲ್ಲಿಯೇ ಬಿಟ್ಟು ಬರುವ ವ್ಯಕ್ತಿತ್ವ ನನ್ನದು. ಈವರೆಗೂ ಸಚಿವ ಸ್ಥಾನ ಸೇರಿದಂತೆ ರಾಜಕೀಯದ ಅಧಿಕಾರದ ಸ್ಥಾನ-ಮಾನಕ್ಕಾಗಿ ಯಾರಲ್ಲಿಯೂ ಬೇಡಿಕೆ ಇಟ್ಟಿಲ್ಲ. ಈ ಹಿಂದೆ ಸಚಿವ ಸ್ಥಾನ ನೀಡುವುದಾಗಿ ಅಗೌರವ ತೋರಲಾಗಿತ್ತು. ಅಲಂಕಾರಕ್ಕಾಗಿ ಸಚಿವ ಸ್ಥಾನ ಎನ್ನುವುದರಲ್ಲಿ ನನಗೆ ನಂಬಿಕೆ ಇಲ್ಲ. ಇದು ನನ್ನ ದುರಹಂಕಾರದ ಮಾತುಗಳಲ್ಲ. ಮತದಾರರು ಹಾಗೂ ಕಾರ್ಯಕರ್ತರ ಋಣ ಇದೆ. ಸೇವೆ ಮಾಡುವ ಮೂಲಕ ಋಣ ತೀರಿಸುವ ಅವಕಾಶ ಪಕ್ಷ ನೀಡಿದರೆ ಖಂಡಿತವಾಗಿ ನಿಭಾಯಿಸುವೆ’ ಎಂದರು.

ಕಾರು, ಎಸ್ಕಾರ್ಟ್ ಬೇಡ: ‘ಈವರೆಗೂ ಮಂತ್ರಿ ಪದವಿ ನೀಡುವ ಕುರಿತು ಯಾರಿಂದಲೂ ಕರೆ ಬಂದಿಲ್ಲ. ಮಂತ್ರಿ ಸ್ಥಾನ ನೀಡಿದಲ್ಲಿ, ಸರ್ಕಾರಿ ಕಾರು, ಬೆಂಗಾವಲು ಪಡೆ ಹಾಗೂ ಗನ್‌ಮ್ಯಾನ್ ಬೇಡ ಎಂದು ನೇರವಾಗಿ ಹೇಳುವೆ. ಜನಪ್ರತಿನಿಧಿಗಳಾಗಿ ಆಯ್ಕೆಯಾದ ಶಾಸಕರು ಹೆರಿಗೆ ಕೋಣೆ ದಾದಿಯ ರೀತಿಯಲ್ಲಿ ಕೆಲಸ ಮಾಡಬೇಕು. ನನಗೆ ಮತದಾರರ ಭಯ ಹಾಗೂ ಋಣ ಇದೆ’ ಎಂದು ತಿಳಿಸಿದ್ದಾರೆ.

ಸಚಿವ ಸ್ಥಾನಕ್ಕೆ ಅಭಿಯಾನ: 5 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜಿಲ್ಲೆಯ ಹಿರಿಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದಾರೆ.

‘ಯಾರ ಸುತ್ತಲು ಗಿರಿಕಿ ಹೊಡೆಯಲ್ಲ’: ಉಸಿರು ಇರುವವರಿಗೂ ಸಚಿವ ಸ್ಥಾನ ನೀಡಿ ಎಂದು ಕೇಳುವುದಕ್ಕೆ ಹೋಗುವುದಿಲ್ಲ. ಯಾರ ಸುತ್ತಲು ಗಿರಕಿ ಹೊಡೆಯುವ ಕೆಲಸ ಕೂಡ ಮಾಡಲ್ಲ, ಯಾರ ಮನೆ ಬಾಗಿಲಿಗೂ ಹೋಗಲ್ಲ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು