ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವನೆಗಳ ಅಭಿವ್ಯಕ್ತಿಗೆ ಮಾತೃಭಾಷೆ ಪರಿಣಾಮಕಾರಿ: ಪ್ರೊ.ಪಿ.ಗಿರಿಧರ ಕಿಣಿ

ಮಣಿಪಾಲ್‌ ಅಕಾಡೆಮಿ ಹೈಯರ್ ಎಜುಕೇಶನ್‌ನ ರಿಜಿಸ್ಟ್ರಾರ್‌ ಪ್ರೊ.ಪಿ.ಗಿರಿಧರ ಕಿಣಿ
Last Updated 22 ಫೆಬ್ರುವರಿ 2023, 13:18 IST
ಅಕ್ಷರ ಗಾತ್ರ

ಉಡುಪಿ: ‘ಭಾವನೆಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಪಡಿಸಲು ಮಾತೃಭಾಷೆಯಂತಹ ಸೂಕ್ತ ಮಾಧ್ಯಮ ಬೇರೊಂದಿಲ್ಲ ಎಂದು ಮಣಿಪಾಲ್‌ ಅಕಾಡೆಮಿ ಹೈಯರ್ ಎಜುಕೇಶನ್‌ನ ರಿಜಿಸ್ಟ್ರಾರ್‌ ಪ್ರೊ.ಪಿ.ಗಿರಿಧರ ಕಿಣಿ ಹೇಳಿದರು.

ಮಾಹೆಯ ಭಾಷಾ ವಿಭಾಗ ಹಾಗೂ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಕೇಂದ್ರದ ವತಿಯಿಂದ ಈಚೆಗೆ ನಡೆದ ವಿಶ್ವ ಮಾತೃಭಾಷಾ ದಿನದವನ್ನು ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ರಾಜ್ಯ ಸರ್ಕಾರ ಮಾತೃಭಾಷೆಯಲ್ಲಿ ಪ್ರಾಥಮಿಕ ಶಾಲೆಯ ಬೋಧನಾ ಕ್ರಮಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇದಕ್ಕೆ ಪೂರಕವಾಗಿ ಅಂತರ ರಾಷ್ಟ್ರೀಯ ಮಾತೃಭಾಷಾ ದಿನವನ್ನು ಬಹುಭಾಷೆಯಲ್ಲಿ ಶಿಕ್ಷಣ ಒದಗಿಸುವ ಧ್ಯೇಯದೊಂದಿಗೆ ಆಚರಿಸುವ ಸಂಕಲ್ಪವನ್ನು ಯುನೆಸ್ಕೋ ಹೊಂದಿದೆ. ಸಾಹಿತ್ಯ- ಕಲೆಗಳಿಗೆ ಸಂಬಂಧಿಸಿದ ಅಂತರ್‌ ಶಿಸ್ತೀಯ ವಿಧಾನಕ್ಕೆ ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಹೆಚ್ಚು ಅರ್ಥಪೂರ್ಣ ಎಂದರು.

ಛಾಯಾಚಿತ್ರಗ್ರಾಹಕ ಆಸ್ಟ್ರೋಮೋಹನ್‌ ಮಾತನಾಡಿ, ‘ಕನ್ನಡ ಶಾಲೆಯನ್ನು ಕಲ್ಪಿಸಿಕೊಂಡಾಗ ಮನಸ್ಸಿನಲ್ಲಿ ನೂರಾರು ಚಿತ್ರಗಳು ಮೂಡುತ್ತವೆ. ಮಾತೃಭಾಷೆ ಕನ್ನಡದಲ್ಲಿ ಶಿಕ್ಷಣ ನೀಡುತ್ತಿರುವ ಶಾಲೆಗಳಿಗೆ ಅವುಗಳದ್ದೇ ಆದ ವೈಶಿಷ್ಟ್ಯತೆ ಇರುತ್ತದೆ. ಕನ್ನಡ ಶಾಲೆಗಳಿಗೆ ಸಂಬಂಧಿಸಿದ ಛಾಯಾಚಿತ್ರಗಳು ವಿಶ್ವ ಮಾತೃಭಾಷಾ ದಿನದ ಸಂದರ್ಭದಲ್ಲಿ ಅಪೂರ್ವ ದಾಖಲಾತಿಗಳು ಎನಿಸಿಕೊಳ್ಳುತ್ತವೆ. ಶಿಕ್ಷಣದ ಕುರಿತ ಸಂಶೋಧನೆಗೂ ಆಕರಗಳೆನಿಸುತ್ತವೆ ಎಂದರು.

ಅಸ್ಟ್ರೋಮೋಹನ್‌ ಅವರ ‘ಬೆಳಕಿನ ಭಾಷೆ’ಯ ಮೂಲಕ ಅಭಿವ್ಯಕ್ತಿಸಿದ ಛಾಯಾಚಿತ್ರಗಳ ಪ್ರದರ್ಶನ ‘ಕನ್ನಡ ಶಾಲೆ’ಯನ್ನು ಫೊಟೊ ಕ್ಲಿಕ್ಕಿಸುವ ಮೂಲಕ ಅನಾವರಣಗೊಳಿಸಲಾಯಿತು. ಬಳಿಕ ವಿದ್ಯಾರ್ಥಿಗಳೊಂದಿಗೆ ‘ಕನ್ನಡ ಶಾಲೆ’ ಛಾಯಾಚಿತ್ರಗ್ರಹಣದ ಕುರಿತ ಸಂವಾದ ನಡೆಯಿತು.

ಕನ್ನಡ ಮತ್ತು ಪ್ರಾದೇಶಿಕ ಭಾಷಾ ಕೇಂದ್ರದ ಸಂಯೋಜಕ ಡಾ. ಪೃಥ್ವಿರಾಜ ಕವತ್ತಾರು ಅತಿಥಿಗಳನ್ನು ಪರಿಚಯಿಸಿದರು. ಮಣಿಪಾಲ್‌ ಯೂನಿವರ್ಸಲ್‌ ಪ್ರೆಸ್‌ನ ಪ್ರಧಾನ ಸಂಪಾದಕರಾದ ಪ್ರೊ.ನೀತಾ ಇನಾಂದಾರ್‌, ಭಾಷಾ ವಿಭಾಗದ ಮುಖ್ಯಸ್ಥ ಪ್ರೊ.ರಾಹುಲ್‌ ಪುಟ್ಟಿ, ತತ್ತ್ವಶಾಸ್ತ್ರ ಮತ್ತು ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ್‌ ಎನ್‌. ಆಚಾರ್ಯ ಅತಿಥಿಗಳನ್ನು ಗೌರವಿಸಿದರು. ಸ್ಪ್ಯಾನಿಶ್‌ ಭಾಷಾ ಉಪನ್ಯಾಸಕಿ ಮೇಘನಾ ಮಂಗಲ್‌ವೇಢೆ ಕಾರ್ಯಕ್ರಮವನ್ನು ನಿರ್ವಹಿಸಿದರು. ಭಾಷಾ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ‘ಪೊಯೆ-ಟ್ರಿ’ ಎಂಬ ವಿಶಿಷ್ಟ ಕನ್ನಡ ಮತ್ತು ಯುರೋಪಿಯನ್‌ ಭಾಷೆಗಳ ಅನುವಾದಿತ ಕಾವ್ಯಗಳನ್ನು ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT