ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಬದುಕಿನ ದಾರಿ ತೋರಿಸಿದ ಮುಂಬೈ’

ಮುಂಬೈ ವಾಪಸಿಗರ ಸಮ್ಮಿಲನ ಕಾರ್ಯಕ್ರಮ
Last Updated 21 ಅಕ್ಟೋಬರ್ 2022, 6:34 IST
ಅಕ್ಷರ ಗಾತ್ರ

ಉಡುಪಿ: ಮುಂಬೈನಲ್ಲಿ ನೆಲೆಸಿರುವ ಕನ್ನಡಿಗರು ಹಾಗೂ ತುಳುವರಿಗೆ ತವರಿನ ಮೇಲೆ ವಿಶೇಷ ಅಭಿಮಾನ ಹಾಗೂ ಹೆಮ್ಮೆ ಎಂದು ಅಂಬಲಪಾಡಿ ದೇವಾಲಯದ ಆಡಳಿತ ಮೊಕ್ತೇಸರ ಡಾ.ನಿ.ಬೀ.ವಿಜಯ ಬಲ್ಲಾಳ್ ಹೇಳಿದರು.

ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಹಾಗೂ ಮುಂಬೈನ ಕನ್ನಡ ಸೇವಾ ಸಂಘದಿಂದ ಅಂಬಲಪಾಡಿ ದೇವಾಲಯದ ಭವಾನಿ ಮಂಟಪದಲ್ಲಿ ಆಯೋಜಿಸಿದ್ದ ಮುಂಬೈ ವಾಪಸಿಗರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಮಾತನಾಡಿ, ಕರಾವಳಿಗರ ಬದುಕಿನ ಯಶಸ್ಸಿಗೆ, ಪ್ರೇರಣೆಗಳಿಗೆ ಮುಂಬೈ ಕಾರಣವಾಗಿದೆ. ನನ್ನ ಸಾಧನೆ ಮತ್ತು ಯಶಸ್ಸುಗಳ ಹಿಂದೆಯೂ ಮುಂಬೈ ಪಾಲಿದೆ ಎಂದರು.

ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಮಾತನಾಡಿ, ‘ಮುಂಬೈನಲ್ಲಿ ಗೆದ್ದವರೂ ಇದ್ದಾರೆ ಸೋತವರೂ ಇದ್ದಾರೆ. ಬದುಕಿನ ಹಾದಿ ಕಂಡು ಕೊಳ್ಳಲು, ಕಲಾವಿದನಾಗಿ ಸಾಧನೆ ಮಾಡಲು ಮುಂಬೈ ಕಲಿಸಿದ ಪಾಠ ದೊಡ್ಡದು. ಮುಂಬೈ ನೆನಪುಗಳ ಬುತ್ತಿ ಅಗಾಧ’ ಎಂದರು.

ಮುಂಬೈನಿಂದ ವಾಪಸಾದ ಕನ್ನಡಿಗ-ತುಳುವರ ಸಮ್ಮಿಲನಕ್ಕೆ ಸಮ್ಮೇಳನ ಸಾಕ್ಷಿಯಾಯಿತು. ಡಾ.ಶ್ರೀನಾಥ, ಡಾ.ಗಣನಾಥ ಎಕ್ಕಾರು ಮಾತನಾಡಿದರು. ಪತ್ರಕರ್ತ ಡಾ.ಎಸ್.ಎಸ್ ಪಾಟೀಲ್, ಮಲ್ಪೆ ಲಯನ್ಸ್ ಕ್ಲಬ್ ಅಧ್ಯಕ್ಷ ಕರುಣಾಕರ ಬಂಗೇರ, ಕನ್ನಡ ಸೇವಾ ಸಂಘದ ಅಧ್ಯಕ್ಷ ಆರ್.ಜಿ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಾಗರಾಜ ಗುರುಪುರ, ಮಾಜಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಸಂಘಟಕ ಕನ್ನಡ ಸೇವಾ ಸಂಘದ ಪೊವಾಯಿ ಸ್ಥಾಪಕಾಧ್ಯಕ್ಷ ಡಾ.ಶೇಖರ್‌ ಅಜೆಕಾರು ಸ್ವಾಗತಿಸಿದರು.

ಪ್ರಾಧ್ಯಾಪಕ ಮಂಜಪ್ಪ ಗೋಣಿ ಮತ್ತು ಶಿಕ್ಷಕಿ ಪ್ರೇಮಾ ಮೂಲ್ಕಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಮಕ್ಕಳ ವಿಭಾಗದ ಸಂಚಾಲಕ ಸುನಿಧಿ ಎಸ್. ಅಜೆಕಾರು ವಂದಿಸಿದರು.

ಬೆಳ್ಳಿ ಹಬ್ಬದ ನೆನಪಿನಲ್ಲಿ 25 ಮಂದಿ ಸಾಧಕರಿಗೆ ತುಳುನಾಡ ರಜತ ಸಿರಿ ಪ್ರಶಸ್ತಿ ಹಾಗೂ 5 ಸಂಸ್ಥೆಗಳಿಗೆ ತುಳುನಾಡ ಸಂಘ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾವ್ಯ ಮತ್ತು ಬರಹ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು. ಪ್ರಧಾನಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿ ಪುರಸ್ಕೃತೆ ರೆಮೊನಾ ಇವೆಟ್ ಪಿರೇರಾ ನಾಟ್ಯ ಗಮನಸೆಳೆಯಿತು. ಡಾ.ಜ್ಯೋತಿ ಚೆಳ್ಯಾರು ಸಂವಾದ ನಡೆಸಿಕೊಟ್ಟರು. ಈರಣ್ಣ ಕುರುವತ್ತಿ ಗೌಡರ್‌ಗೆ ಸನ್ಮಾನಿಸಲಾಯಿತು.

ಪ್ರಾಪ್ತಿ ಶೆಟ್ಟಿ, ಕಾರುಣ್ಯ ಎಂ.ಶೆಟ್ಟಿ, ಪ್ರೀತಮ್ ದೇವಾಡಿಗ, ಸುನಿಜ ಅಜೆಕಾರು, ದಿಯಾ ಉದಯ್ ಮುಲ್ಕಿ, ಸಾನ್ನಿಧ್ಯ ಕವತ್ತಾರು, ಪ್ರಕೃತಿ ಆಚಾರ್ಯ ಅಜೆಕಾರು, ಸುರೇಶ ಪೈ ಉಡುಪಿ, ಸಂಧ್ಯಾ ಉಮೇಶ್ ಧರ್ಮಸ್ಥಳ, ಲಿಂಗಪ್ಪ ಶಿಬಾಜೆ, ಕರುಣಾ ಪೈ, ರಾಘವೇಂದ್ರ ಆಚಾರ್ಯ ಬಾರ್ಕೂರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಡಾ.ಶೇಖರ ಅಜೆಕಾರ್‌ ಅವರ ‘ಛಾಯಾ ಸಂಭ್ರಮ’ ಪ್ರದರ್ಶನ ಇತ್ತು. ವಿಜಯ ವರಂಗ ಕೊಂಬು ಸ್ವರ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT