ಬುಧವಾರ, ಸೆಪ್ಟೆಂಬರ್ 22, 2021
29 °C
ಹಡಿಲು ಭೂಮಿ ಕೃಷಿ ಆಂದೋಲನ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನ

ನಶಿಸುತ್ತಿರುವ ಕೃಷಿ ಪರಂಪರೆ ಉಳಿವಿಗೆ ಸಂಕಲ್ಪ: ನಳಿನ್ ಕುಮಾರ್ ಕಟೀಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯಡಕ: ಕೇದಾರೋತ್ಥಾನ ಟ್ರಸ್ಟ್‌ ಮೂಲಕ ನಶಿಸಿ ಹೋಗುತ್ತಿರುವ ಕೃಷಿಪರಂಪರೆಯನ್ನು ಉಸಿಳಿಸುವ ಕೆಲಸವನ್ನು ಶಾಸಕ ರಘುಪತಿ ಭಟ್ ಮಾಡುತ್ತಿರುವುದು ಶ್ಲಾಘನೀಯ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಹೇಳಿದರು.

ಪರ್ಕಳದ ಸಣ್ಣಕ್ಕಿಬೆಟ್ಟುವಿನಲ್ಲಿ ಭಾನುವಾರ ನಾಟಿ ಮಾಡುವ ಮೂಲಕ ‘ಹಡಿಲು ಭೂಮಿ ಕೃಷಿ ಆಂದೋಲನ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಪ್ರತಿನಿಧಿಗಳು ಕೇವಲ ಮತ ಲೆಕ್ಕಾಚಾರ ಹಾಕುವುದಲ್ಲ. ಜನಪರ ಕಾರ್ಯಗಳನ್ನು ಮಾಡಬೇಕು. ಶಾಸಕ ರಘು‍ಪತಿ ಭಟ್‌ ಕೃಷಿ ಉಳಿಸುವ ಮೂಲಕ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.

ಉಡುಪಿಯಲ್ಲಿ ನಡೆಯುತ್ತಿರುವ ಕೃಷಿ ಕ್ರಾಂತಿ ರಾಷ್ಟ್ರಕ್ಕೆ ಮಾದರಿ. ಕರಾವಳಿಯಲ್ಲಿ ಕೃಷಿಯನ್ನು ಲಾಭದ ದೃಷ್ಟಿಯಿಂದ ನೋಡಿಲ್ಲ. ಪೂಜ್ಯನೀಯ ಭಾವನೆಯಲ್ಲಿ ನೋಡುತ್ತಾರೆ. ತುಳುನಾಡಿನ ಸಂಸ್ಕೃತಿಯಲ್ಲಿ, ಆರಾಧನೆಯಲ್ಲಿ, ಜನಪದದಲ್ಲಿ ಕೃಷಿಯೇ  ಪ್ರಧಾನ ಎಂದರು.

ಕೋವಿಡ್ ನಂತರ ಜನರ ಮನಸ್ಥಿತಿ ಬದಲಾಗಿದೆ. ಜನರು ಮತ್ತೆ ಕೃಷಿಯತ್ತ ಒಲವು ತೋರುತ್ತಿದ್ದಾರೆ. ಕೃಷಿಯೇ ಶಾಶ್ವತ ಎಂಬ ಸತ್ಯ ಅರಿವಾಗುತ್ತಿದೆ. ಕೃಷಿ ಕ್ಷೇತ್ರ ಲಾಭದಾಯಕವಾಗಿದ್ದು, ಪ್ರಯೋಗ ಶೀಲತೆಯಿಂದ ಕೃಷಿ ಮಾಡಿದರೆ ಲಾಭದಾಯಕ ಎಂದರು.

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರಗಳು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಭರಪೂರ ಸೌಲಭ್ಯಗಳನ್ನು ಒದಗಿಸಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ನಾಟಿ ಮಾಡಿದ ಕಟೀಲ್‌:

ಭತ್ತದ ಗದ್ದೆಗಿಳಿದು ನಾಟಿ ಮಾಡುವ ಮೂಲಕ ನಳಿನ್‌ ಕುಮಾರ್ ಕಟೀಲ್ ಗಮನ ಸೆಳೆದರು. ನಾಟಿಗೂ ಮುನ್ನ ಭೂಮಿಗೆ ಪೂಜೆ ನೆರವೇರಿಸಿ ಟ್ರ್ಯಾಕ್ಟರ್ ಚಲಾಯಿಸಿದರು. ಕಟೀಲ್‌ ಅವರಿಗೆ ಶಾಸಕ ರಘುಪತಿ ಭಟ್ ಸಾಥ್ ನೀಡಿದರು.

ಹಡಿಲು ಭೂಮಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು ಸಹಕರಿಸಿದ ಸಂಘ ಸಂಸ್ಥೆಯವರಿಗೆ ಹಾಗೂ ಭೂಮಿಯ ಮಾಲೀಕರಿಗೆ ಶಾಸಕ  ರಘುಪತಿ ಭಟ್ ಅಭಿನಂದನೆ ಸಲ್ಲಿಸಿದರು.

ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಸುದರ್ಶನ್, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್, ಉಡುಪಿ ನಗರ ಸಭೆಯ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಕೊಳ, ಕೇದಾರೋತ್ಥಾನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು