ಶನಿವಾರ, ಅಕ್ಟೋಬರ್ 8, 2022
23 °C
ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯಲ್ಲಿ

ಒಳಿತು, ವಿಶ್ವಶಾಂತಿ ಧರ್ಮಗಳ ಉದ್ದೇಶ: ಸಚಿವ ಸುನಿಲ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಎಲ್ಲ ಧರ್ಮಗಳು ಮನುಷ್ಯನ ಒಳಿತು ಬಯಸುತ್ತವೆ ಎಂಬ ನಾರಾಯಣಗುರುಗಳ ಸಂದೇಶ ಅರಿಯುವ ಮೂಲಕ ವಿಶ್ವದಾದ್ಯಂತ ನಡೆಯುತ್ತಿರುವ ಧರ್ಮಗಳ ನಡುವಿನ ಕಲಹ ಕೊನೆಗಾಣಿಸಿ ವಿಶ್ವಶಾಂತಿ ನಿರ್ಮಾಣವಾಗಬೇಕು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಜನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಬಿಲ್ಲವರ ಸೇವಾ ಸಂಘ ಬನ್ನಂಜೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉದ್ಘಾಟಿಸಿ ಮತನಾಡಿದರು.

ಧರ್ಮಗಳ ಮೂಲ ಉದ್ದೇಶ ಮನುಷ್ಯನಿಗೆ ಒಳಿತು ಮಾಡುವುದು ಹಾಗೂ ವಿಶ್ವಶಾಂತಿ ಮೂಡಿಸುವುದು. ಧರ್ಮಗಳ ನಡುವೆ ವಾದ ಸೃಷ್ಟಿಸಲು ಅಥವಾ ವಿಜಯ ಸಾಧಿಸುವುದು ಧರ್ಮಗಳ ಉದ್ದೇಶವಲ್ಲ ಎಂಬ ನಾರಾಯಣ ಗುರುಗಳ ಸಂದೇಶವನ್ನು ಅರ್ಥಮಾಡಿಕೊಂಡು ಧರ್ಮದ ನೆಲೆಯಲ್ಲಿ ಎಲ್ಲರೂ ನಡೆಯುವುದು ಅಗತ್ಯ ಎಂದರು.

ಶಿಕ್ಷಣದ ಮೂಲಕ ಬಲಯುತವಾಗಿ ಎಂಬ ಗುರುಗಳ ಸಂದೇಶದಂತೆ ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆಯಬೇಕು.       ನಾರಾಯಣ ಗುರುಗಳು ಸಮಾನತೆಯಿಂದ ಕೂಡಿದ ಸಮಾಜ ನಿರ್ಮಿಸಲು ತತ್ವ ಆದರ್ಶಗಳ ಮೂಲಕ ಸಮಾಜಲ್ಲಿ ದೊಡ್ಡ ದೊಡ್ಡ ಬದಲಾವಣೆ ತಂದರು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಾಜ್ಯದ ಎಲ್ಲ ದಾರ್ಶನಿಕರ ಮತ್ತು ಮಹನೀಯರ ರಾಜ್ಯಮಟ್ಟದ ಜಯಂತಿಗಳನ್ನು ಬೆಂಗಳೂರಿಗೆ ಸೀಮಿತಗೊಳಿಸದೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅದರಂತೆ ಈ ಬಾರಿಯ ರಾಜ್ಯಮಟ್ಟದ ನಾರಾಯಣ ಗುರು ಜಯಂತಿಯನ್ನು ಮಂಗಳೂರಿನಲ್ಲಿ ನಡೆಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ನಾರಾಯಣ ಗುರುಗಳ ಸಂದೇಶ ಮತ್ತು ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು ಸಮಾನತೆಯ ಸಮಾಜ ನಿರ್ಮಾಣವಾಗಲು ಅತ್ಯಂತ ಅಗತ್ಯವಾಗಿದೆ. ವ್ಯಕ್ತಿಯನ್ನು ಜಾತಿಯಿಂದ ಅಳೆಯದೆ ವ್ಯಕ್ತಿತ್ವದಿಂದ ಗುರುತಿಸಬೇಕು. ಒಂದೇ ಜಾತಿ ಒಂದೇ ಮತ ಎಂಬ ಸಂದೇಶವನ್ನು ಎಲ್ಲರೂ ಪಾಲಿಸಬೇಕು ಎಂದರು.

ನಾರಾಯಣ ಗುರುಗಳ ಕುರಿತು ಉಪನ್ಯಾಸ ನೀಡಿದ ಹಿರಿಯಡ್ಕ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ನಳಿನಾದೇವಿ ಮಾತನಾಡಿ, ಮಹಾ ಮಾನವತಾವಾದಿ, ದಾರ್ಶನಿಕ, ಆದ್ಯಾತ್ಮಿಕ ಸಾಧಕರಾಗಿದ್ದ ನಾರಾಯಣ ಗುರುಗಳು ಸಮಾಜದಲ್ಲಿ ಸಮಾನತೆ ತರಲು, ಕೆಳವರ್ಗದ ಜನರಿಗೆ ದೇವಾಲಯಗಳನ್ನು ನಿರ್ಮಿಸಿದರು.

ವಿದ್ಯೆಯಿಂದ ಮಾತ್ರ ವ್ಯಕ್ತಿಯ ಬದುಕು ಶ್ರೀಮಂತವಾಗಲಿದೆ ಎಂಬ ಉದಾತ್ತ ಧ್ಯೇಯದೊಂದಿಗೆ ಸಮಾಜದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು. ಸರಳ ವಿವಾಹ, ವಿಧವಾ ವಿವಾಹಗಳನ್ನು ಪ್ರೋತ್ಸಾಹಿಸಿ ಬಾಲ್ಯ ವಿವಾಹ, ಮದ್ಯಪಾನ ವಿರೋಧಿಸಿದರು. ಗುರುಗಳ ತತ್ವ ಆದರ್ಶಗಳ ಬಗ್ಗೆ ತಿಳಿದ ಮಹಾತ್ಮ ಗಾಂಧೀಜಿ ಮತ್ತು ಅಚಾರ್ಯ ವಿನೋಬಾ ಭಾವೆ ಗುರುಗಳನ್ನು ಭೇಟಿ ಮಾಡಿ ಚರ್ಚಿಸಿದ್ದರು ಎಂದರು.

ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭಾ ಸದಸ್ಯೆ ಸವಿತಾ ಹರೀಶ್ ರಾಮ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್‌.ವೀಣಾ. ಉಡುಪಿ ತಹಸೀಲ್ದಾರ್ ಶ್ರೀನಿವಾಸ ಮೂರ್ತಿ, ಬನ್ನಂಜೆ ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಆನಂದ ಪೂಜಾರಿ ಕಿದಿಯೂರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಅಮಿತಾಂಜಲಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.