ಶನಿವಾರ, ಅಕ್ಟೋಬರ್ 19, 2019
27 °C
ಯಾತ್ರಾತ್ರಿಗಳು ಧ್ಯಾನಕ್ಕೆ ಬಳಕೆ ಮಾಡಿರುವ ಶಂಕೆ

ಕೊಲ್ಲೂರು ಬಳಿಯ ಟೆಂಟ್‌ ನಕ್ಸಲರದ್ದಲ್ಲ: ಎಸ್‌ಪಿ

Published:
Updated:
Prajavani

ಉಡುಪಿ: ಕೊಲ್ಲೂರು ಗ್ರಾಮದ ದಳಿ ಮಾದಿಬರೆ ಮೀಸಲು ಅರಣ್ಯ ಪ್ರದೇಶದಲ್ಲಿ ಟೆಂಟ್ ಹಾಕಿಕೊಂಡಿದ್ದು ನಕ್ಸಲರಲ್ಲ ಎಂದು ಎಸ್‌ಪಿ ನಿಶಾ ಜೇಮ್ಸ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸೆ.16ರಂದು ಟೆಂಟ್‌ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಅದರಂತೆ ಹೆಬ್ರಿ ಎಎನ್‌ಎಫ್ ಕ್ಯಾಂಪ್‌ನ ಡಿವೈಎಸ್‌ಪಿ ಗಣೇಶ್ ಎಂ. ಹೆಗ್ಡೆ ನೇತೃತ್ವದ ತಂಡ, ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ಟೆಂಟ್‌ ಜಾಗ ಪರಿಶೀಲನೆ ನಡೆಸಿದೆ. ಜತೆಗೆ, ಟೆಂಟ್‌ಗೆ ಹೊಂದಿಕಂಡ ಅರಣ್ಯ ಪ್ರದೇಶದಲ್ಲಿ ಕೂಬಿಂಗ್ ಸಹ ನಡೆಸಲಾಗಿದೆ. ನಕ್ಸಲ್‌ ಚಟುವಟಿಕೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.

ನೀಲಿ ಬಣ್ಣದ ಟಾರ್ಪಾಲ್‌ನಿಂದ ತಾತ್ಕಾಲಿಕ ಟೆಂಟ್ ಕಟ್ಟಲಾಗಿದ್ದು, ಅಡುಗೆ ಸಾಮಾಗ್ರಿಗಳು, ಕುಂಕುಮದ ಕರಡಿಗೆ, ವಿಭೂತಿ, ಬಿಳಿ ಬಣ್ಣದ ರೇಷ್ಮೆ ಪಂಚೆ ಮತ್ತು ಬಿಳಿ ಬಣ್ಣದ ಟೆರಿಕೋಟ್ ಜುಬ್ಬಾ ಪತ್ತೆಯಾಗಿದೆ. ಟೆಂಟ್ ಜಾಗ ದ್ಯಾನಕ್ಕೆ ಪ್ರಶಸ್ತ ಸ್ಥಳವಾಗಿದ್ದರಿಂದ, ಕೇರಳ ಹಾಗೂ ಬೇರೆ ರಾಜ್ಯದಿಂದ ಬರುವ ಯಾತ್ರಾತ್ರಿಗಳು ಇಲ್ಲಿ ಧ್ಯಾನ ಮಾಡುತ್ತಿದ್ದ ಅಂಶ ತಿಳಿದುಬಂದಿದೆ. ಟೆಂಟ್‌ನ ರಚನೆ, ಗಾತ್ರ ನೋಡಿದಾಗ ನಕ್ಸಲರು ಉಪಯೋಗಿಸುವಂತಹದ್ದಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಆದರೂ ಈ ಪ್ರದೇಶದ ಮೇಲೆ ಹೆಚ್ಚಿನ ನಿಗಾಇರಿಸಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.

ಟೆಂಟ್‌ ಜಾಗ ಜನವಸತಿ ಪ್ರದೇಶಕ್ಕೆ ತೀರಾ ಸಮೀಪದಲ್ಲಿದ್ದು, ಸೊಪ್ಪು, ಉರುವಲು ಕಟ್ಟಿಗೆ ಸಂಗ್ರಹಿಸಲು ದನ ಮೇಯಿಸಲು ಓಡಾಡುವ ಅರಣ್ಯ ಪ್ರದೇಶವಾಗಿರುತ್ತದೆ. ಜತೆಗೆ 4 ಕಿ.ಮೀ. ದೂರದಲ್ಲಿರುವ ಅರಸಿನಗುಂಡಿ ಜಲಪಾತಕ್ಕೆ ಚಾರಣ ಹೋಗುವ ದಾರಿಯೂ ಇದಾಗಿದ್ದು, ನಕ್ಸಲರ ಟೆಂಟ್‌ ಅಲ್ಲ ಎಂದು ಎಸ್‌ಪಿ ತಿಳಿಸಿದ್ದಾರೆ.

Post Comments (+)