ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಚಪ್ಪಾಳೆ ಬೇಡ; ಸಮಾನ ಹುದ್ದೆಗೆ ಸಮಾನ ವೇತನ ಸಾಕು

ವಾರದಿಂದ ಕರ್ತವ್ಯದಿಂದ ದೂರ ಉಳಿದಿರುವ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರು
Last Updated 29 ಸೆಪ್ಟೆಂಬರ್ 2020, 16:34 IST
ಅಕ್ಷರ ಗಾತ್ರ

ಉಡುಪಿ: ‘ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಮೊದಲು ಸಮಾನ ಹುದ್ದೆಗೆ ಸಮಾನ ವೇತನ ನೀಡಿ, ಸೇವಾ ಭದ್ರತೆ ಒದಗಿಸಿ. ನಂತರ ಚಪ್ಪಾಳೆ ಹೊಡೆಯಿರಿ ಎಂದು ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಇಲಾಖೆಯಲ್ಲಿ ಕಾಯಂ ನೌಕರರಿಗೆ ಸಿಗುತ್ತಿರುವ ಯಾವ ಸೌಲಭ್ಯಗಳು ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಗುತ್ತಿಲ್ಲ. ಸ್ಟಾಫ್ ನರ್ಸ್‌ಗೆ ₹ 38 ಸಾವಿರ ಮೂಲ ವೇತನವಿದ್ದರೆ, ಅದೇ ವೃತ್ತಿ ಮಾಡುವ ಗುತ್ತಿಗೆ ನೌಕರರಿಗೆ ₹ 10,000 ವೇತನ ಇದೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬ ನ್ಯಾಯಾಲಯದ ಆದೇಶವಿದ್ದರೂ ತಾರತಮ್ಯ ಎಸಗಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಅತಿ ಹೆಚ್ಚು ಸೋಂಕಿಗೆ ತುತ್ತಾದವರಲ್ಲಿ ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರೇ ಇದ್ದಾರೆ. ಆದರೂ, ದೃತಿಗೆಡದೆ ಪ್ರಾಣ ಪಣಕ್ಕಿಟ್ಟು ಐಸೊಲೇಷನ್‌ ವಾರ್ಡ್‌, ಲ್ಯಾಬ್‌, ಗಡಿಗಳಲ್ಲಿ ಕರ್ತವ್ಯ ನಿಭಾಯಿಸುತ್ತಿದ್ಧೇವೆ. ಆದರೂ ಬೇಡಿಕೆಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರೋಗ್ಯ ಇಲಾಖೆಯಲ್ಲಿ ಶೇ 70ರಷ್ಟು ಹುದ್ದೆಗಳಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ 30,000 ಹಾಗೂ ಜಿಲ್ಲೆಯಲ್ಲಿ 512 ಗುತ್ತಿಗೆ ನೌಕರರಿದ್ದಾರೆ. ಇಲಾಖೆಯ ಬಹುತೇಕ ಜವಾಬ್ದಾರಿ ಹಾಗೂ ಕೋವಿಡ್‌ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರೂ ಸರ್ಕಾರಕ್ಕೆ ಮಾನವೀಯತೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜೂನ್‌ನಲ್ಲಿ ಮುಷ್ಕರಕ್ಕೆ ಕರೆ ನೀಡಿದಾಗ ಸರ್ಕಾರ ಶ್ರೀನಿವಾಸ್‌ ಆಚಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಬೇಡಿಕೆ ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಸೆ.4ರೊಳಗೆ ಸಮಿತಿಯಿಂದ ವರದಿ ಸ್ವೀಕರಿಸಿ ಮಂಡಿಸುವುದಾಗಿ ತಿಳಿಸಿತ್ತು. ಆದರೆ, ಇದುವರೆಗೂ ಯಾವುದೇ ವರದಿ ಸಲ್ಲಿಕೆಯಾಗಿಲ್ಲ. ಹಾಗಾಗಿ, 30,000 ನೌಕರರು ಸೆ.24ರಿಂದ ಕೆಲಸವನ್ನು ಬಹಿಷ್ಕರಿಸಿ ಮನೆಯಲ್ಲಿ ಉಳಿದು ಅಸಹಕಾರ ಚಳವಳಿ ಮಾಡುತ್ತಿದ್ದೇವೆ ಎಂದರು.

ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ವ್ಯತ್ಯಯವಾಗಿ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಕರ್ತವ್ಯಕ್ಕೆ ಹಾಜರಾಗುವಂತೆ ಅಧಿಕಾರಿಗಳು ಒತ್ತಡ ಹೇರಿ ಶೋಕಾಸ್‌ ನೋಟಿಸ್‌ಗಳನ್ನು ನೀಡುತ್ತಿದ್ದಾರೆ. ಇಂತಹ ಯಾವುದೇ ಬೆದರಿಕೆಗೆ ಜಗ್ಗುವುದಿಲ್ಲ. ಬೇಡಿಕೆಗಳನ್ನು ಈಡೇರಿಸುವವರೆಗೂ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಗುರುರಾಜ್ ಬಂಗಾಣಿ, ಉಪಾಧ್ಯಕ್ಷ ಡಾ.ರೂಪಕ್‌ ನಾಗರಾಜ್‌, ಖಜಾಂಚಿ ಗಿರೀಶ್‌ ಕಡ್ಡಿಪುಡಿ, ರೇಶ್ಮಾ ಪೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT