ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿರೂರು ಶ್ರೀ ವಿಷಪ್ರಾಷನದಿಂದ ಸತ್ತಿಲ್ಲ’

ಎಫ್‌ಎಸ್‌ಎಲ್‌ ವರದಿಯಲ್ಲಿ ವಿಷದ ಉಲ್ಲೇಖವಿಲ್ಲ: ಅನಾರೋಗ್ಯದಿಂದ ಲಕ್ಷ್ಮೀವರ ತೀರ್ಥರ ಸಾವು
Last Updated 22 ಆಗಸ್ಟ್ 2018, 18:20 IST
ಅಕ್ಷರ ಗಾತ್ರ

ಉಡುಪಿ: ಶಿರೂರು ಲಕ್ಷ್ಮೀವರ ತೀರ್ಥರು ವಿಷಪ್ರಾಷನದಿಂದ ಮೃತಪಟ್ಟಿಲ್ಲ; ಅನಾರೋಗ್ಯವೇ ಸಾವಿಗೆ ಕಾರಣ ಎಂಬ ಅಂಶ ಎಫ್‌ಎಸ್‌ಎಲ್‌ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಉನ್ನತ ಪೊಲೀಸ್‌ ಮೂಲಗಳು ಖಚಿತಪಡಿಸಿವೆ.

ಶಿರೂರು ಶ್ರೀಗಳ ಯಕೃತ್‌ (ಲಿವರ್) ತೀವ್ರ ಘಾಸಿಗೊಂಡು ಬಹು ಅಂಗಾಂಗಳ ವೈಫಲ್ಯದಿಂದ ಅವರು ಮೃತಪಟ್ಟಿದ್ದಾರೆ. ದೇಹದಲ್ಲಿ ಯಾವುದೇ ವಿಷಕಾರಿ ಅಂಶಗಳು ಪತ್ತೆಯಾಗಿಲ್ಲ ಎಂದು ವೈದ್ಯರು ವರದಿ ನೀಡಿದ್ದಾರೆ.

ಗೊಂದಲ ಹುಟ್ಟುಹಾಕಿದ ವರದಿ:
ಜುಲೈ 19ರಂದು ಶಿರೂರು ಶ್ರೀಗಳು ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಈ ಸಂದರ್ಭ ಶ್ರೀಗಳ ಸಾವಿನಲ್ಲಿ ವಿಷಪ್ರಾಷನ ಶಂಕೆಯಿದೆ ಎಂದು ಕೆಎಂಸಿ ವೈದ್ಯಕೀಯ ಅಧೀಕ್ಷಕ ಅವಿನಾಶ್ ಶೆಟ್ಟಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಈಗ ಅವರ ಹೇಳಿಕೆಗೆ ವ್ಯತಿರಿಕ್ತವಾಗಿ ಎಫ್‌ಎಸ್‌ಎಲ್ ವರದಿ ಬಂದಿರುವುದು ಗೊಂದಲಗಳನ್ನು ಹುಟ್ಟಿಹಾಕಿದೆ.

ಈ ಅನುಮಾನಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಮಣಿಪಾಲ ಆಸ್ಪತ್ರೆಯ ವೈದ್ಯರಿಗೆ ಪೊಲೀಸರು ಪ್ರಶ್ನಾವಳಿಯೊಂದನ್ನು ನೀಡಿದ್ದಾರೆ ಎಂದು ‘ಪ್ರಜಾವಾಣಿ’ಗೆ ಉನ್ನತ ಮೂಲಗಳು ಖಚಿತಪಡಿಸಿವೆ.

ಶಿರೂರು ಶ್ರೀಗಳಿಗೆ ವಿಷಪ್ರಾಷನವಾಗಿದೆ ಎಂಬ ಶಂಕೆ ವ್ಯಕ್ತಪಡಿಸಲು ಬಲವಾದ ಕಾರಣಗಳು ಏನು? ಶ್ರೀಗಳ ದೇಹದಲ್ಲಿ ವಿಷಕಾರಿ ಅಂಶ ಇದ್ದಿದ್ದು ನಿಜವೇ?ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್‌ ವರದಿಯಲ್ಲಿ ವಿಷದ ಉಲ್ಲೇಖ ಇಲ್ಲದಿರುವುದು ಹೇಗೆ? ಹೀಗೆ, ಹಲವು ಪ್ರಶ್ನೆಗಳನ್ನು ವೈದ್ಯರಿಗೆ ಕೇಳಲಾಗಿದ್ದು, ವಾರಾಂತ್ಯದೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ ಎನ್ನಲಾಗಿದೆ.

ಇನ್ನೆರಡು ದಿನಗಳಲ್ಲಿ ಅಂತಿಮ ವರದಿ:
ಪೊಲೀಸರು ಮರಣೋತ್ತರ ಪರೀಕ್ಷಾ ವರದಿ ಹಾಗೂ ಎಫ್‌ಎಸ್‌ಎಲ್‌ ವರದಿಯನ್ನು ಮಣಿಪಾಲ ಆಸ್ಪತ್ರೆಯ ವೈದ್ಯರಿಗೆ ನೀಡಿದ್ದಾರೆ. ಎರಡೂ ವರದಿಗಳನ್ನು ತಾಳೆ ಹಾಕಿ, ಶಿರೂರು ಶ್ರೀಗಳ ಸಾವಿಗೆ ನಿಖರ ಕಾರಣ ಪತ್ತೆಹಚ್ಚಿ, ಅಂತಿಮ ವರದಿಯನ್ನು ವಾರಾಂತ್ಯದೊಳಗೆ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.‌ ವರದಿ ಬಂದ ನಂತರ ಶ್ರೀಗಳ ಸಾವಿನ ಹಿಂದಿರುವ ಸತ್ಯವನ್ನು ಪೊಲೀಸರು ಬಹಿರಂಗಗೊಳಿಸಲಿದ್ದಾರೆ.

‘ಅಧಿಕೃತವಾಗಿ ವರದಿ ಬಹಿರಂಗಗೊಳಿಸಲಿ’
ಶಿರೂರು ಶ್ರೀಗಳ ಸಾವಿನ ಹಿಂದಿರುವ ಸತ್ಯವನ್ನು ಪೊಲೀಸ್ ಇಲಾಖೆ ಅಥವಾ ಜಿಲ್ಲಾಡಳಿತ ಅಧಿಕೃತವಾಗಿ ಹೇಳುವವರೆಗೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕೇಮಾರು ಮಠದ ಈಶವಿಠಲ ಸ್ವಾಮೀಜಿ ತಿಳಿಸಿದ್ದಾರೆ.

‘ಸಂದೇಹಗಳಿವೆ’
ಶಿರೂರು ಸ್ವಾಮೀಜಿ ಮೃತಪಟ್ಟು ತಿಂಗಳಾಯಿತು. ಶವಪರೀಕ್ಷೆ, ಎಫ್‌ಎಸ್‌ಎಲ್‌ ವರದಿ ಸಿದ್ಧಪಡಿಸಲು ಸಾಕಷ್ಟು ವಿಳಂಬವಾಗಿದೆ. ಇದರಿಂದಾಗಿ ವಿಷವೂ ತನ್ನ ವಿಷತ್ವವನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ ಎಂದು ಅನುಮಾನ ವ್ಯಕ್ತಪಡಿಸುತ್ತಾರೆ ಶಿರೂರು ಶ್ರೀಗಳ ಪರ ವಕೀಲರಾಗಿದ್ದ ರವಿಕಿರಣ್ ಮುರ್ಡೇಶ್ವರ್‌.

ಸ್ವಾಮೀಜಿ ಮೃತಪಟ್ಟ ತಕ್ಷಣ ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್‌ ವರದಿ ಬಂದಿದ್ದರೆ ಅದನ್ನು ಒಪ್ಪಿಕೊಳ್ಳಬಹುದಿತ್ತು. ಆದರೆ, ಈ ಪ್ರಕರಣದಲ್ಲಿ ವರದಿ ನೀಡುವುದು ವಿಳಂಬವಾಗಿದೆ. ಶ್ರೀಗಳ ಸಾವಿಗೆ ಬಹು ಅಂಗಾಂಗ ವೈಫಲ್ಯ ಕಾರಣವಾದರೆ, ಹಠಾತ್ ಸಾವು ಸಂಭವಿಸುತ್ತಿರಲಿಲ್ಲ. ಈ ಎಲ್ಲ ವಿಚಾರಗಳನ್ನು ನೋಡಿದರೆ ಸಂದೇಹಗಳು ಇನ್ನೂ ಉಳಿದುಕೊಂಡಿವೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT